×
Ad

ಮಕ್ಕಳ ಹಿತ ಕಾಯುವ ಪಕ್ಷಕ್ಕೆ ಮತ ಹಾಕಲು ಕ್ರಿಸ್ಪ್ ಸಂಸ್ಥೆ ಮನವಿ

Update: 2018-05-04 19:37 IST

ಬೆಂಗಳೂರು, ಮೇ 4: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾರು ಮಕ್ಕಳ ಹಿತ ಬಯಸುತ್ತಾರೋ ಅವರಿಗೆ ಮತ ಹಾಕಿ ಎಂದು ಕ್ರಿಸ್ಪ್ ಸಂಸ್ಥೆ ಮತದಾರರಲ್ಲಿ ಮನವಿ ಮಾಡಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಪರವಾಗಿ ಮಾತನಾಡಿದ ಲೇಖಕ ಯೋಗೇಶ್ ಮಾಸ್ಟರ್, ಮಕ್ಕಳಿಂದ ರಾಜಕೀಯ ಪಕ್ಷಗಳಿಗೆ ಯಾವುದೇ ಉಪಯೋಗವಾಗುವುದಿಲ್ಲ ಎಂದು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆದರೆ, ಮಕ್ಕಳನ್ನು ಮತಬ್ಯಾಂಕ್ ಆಗಿ ಪರಿಗಣಿಸದೇ, ಸಮಾಜದ ಆಸ್ತಿಯಾಗಿ ಪರಿಗಣಿಸಬೇಕು ಎಂದು ಹೇಳಿದರು.

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಜಕೀಯ ಪಕ್ಷಗಳು ಕಠಿಣ ಕಾನೂನುಗಳನ್ನು ಜಾರಿ ಮಾಡುವಲ್ಲಿ ವಿಫಲರಾಗಿದ್ದಾರೆ. ಆದುದರಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳ ಇಲಾಖೆಯನ್ನು ಪ್ರತ್ಯೇಕ ಇಲಾಖೆಯನ್ನಾಗಿ ಮಾಡುವ ಘೋಷಣೆ ಮಾಡುವ ಪಕ್ಷಕ್ಕೆ ನಿಮ್ಮ ಮತ ಹಾಕಬೇಕು ಎಂದು ಅವರು ತಿಳಿಸಿದರು.

ಕ್ರಿಸ್ಪ್ ಅಧ್ಯಕ್ಷ ಕುಮಾರ್ ಜಾಗೀರ್‌ದಾರ್ ಮಾತನಾಡಿ, ಶಾಲೆಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲದ, ಟ್ರಾಫಿಕ್, ಮಾಲಿನ್ಯ, ಮಾನಸಿಕ ಒತ್ತಡ ಹಾಗೂ ಕಿರುಕುಳ ಸೇರಿದಂತೆ ವಿವಿಧ ಕಾರಣಗಳಿಂದ ಹಲವಾರು ಮಕ್ಕಳು ಹತ್ತನೇ ತರಗತಿ ಪ್ರವೇಶ ಮಾಡುವ ಮೊದಲೇ ಶಾಲೆಯನ್ನು ಬಿಡುತ್ತಿದ್ದಾರೆ. ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಆದರೆ, ಅಧಿಕಾರ ನಡೆಸುತ್ತಿರುವ ಹಾಗೂ ನಡೆಸಿದವರು ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಲು ಮುಂದಾಗುತ್ತಿಲ್ಲ ಎಂದರು.

ಈ ಚುನಾವಣೆಯಲ್ಲಿ ಮಕ್ಕಳಿಗಾಗಿ ಹೊಸ ಮಂತ್ರಿ, ಒಳ್ಳೆಯ ಶಿಕ್ಷಣ, ಶುದ್ಧ ಪರಿಸರ ಮತ್ತು ಮೂಲಭೂತ ಸೌಲಭ್ಯ, ಉತ್ತಮವಾದ ಆಹಾರ ಮತ್ತು ಔಷಧಿ, ಪೋಸ್ಕೋ ಕಾಯ್ದೆ ಪರಿಣಾಮಕಾರಿಯಾಗಿ ಜಾರಿ, ಹೆಚ್ಚು ಮಕ್ಕಳ ಸಹಾಯವಾಗಿ ಕೇಂದ್ರ ಸ್ಥಾಪನೆ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಭರವಸೆ ನೀಡುವ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News