ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: 46.23 ಕೋಟಿ ರೂ.ನಗದು ವಶ
ಬೆಂಗಳೂರು, ಮೇ 4: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಸ್ಕ್ವಾಡ್‌ಗಳು, ಎಸ್‌ಎಸ್‌ಟಿ ಮತ್ತು ಇತರೆ ಪೊಲೀಸ್ ಪ್ರಾಧಿಕಾರಗಳು ಇದುವರೆಗೆ 46.23 ಕೋಟಿ ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.
ಕಳೆದ 24ಗಂಟೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ಗಳು 10.41ಲಕ್ಷ ರೂ.ನಗದು, 22 ಲಕ್ಷ ರೂ.ಮೌಲ್ಯದ 7ವಾಹನಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಟಿ ಶರ್ಟ್, ಭಾವಚಿತ್ರಗಳು, ಶಾಲುಗಳು, ಮಿಕ್ಸರ್ ಗ್ರೈಂಡರ್, ಅಲ್ಯೂಮಿನಿಯಂ ಪಾತ್ರೆಗಳು, ಸೀರೆಗಳು, ಲ್ಯಾಪ್‌ಟಾಪ್ ಹಾಗೂ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಇಲಾಖೆಯು ಕಳೆದ 24 ಗಂಟೆಯಲ್ಲಿ 2671 ಲೀಟರ್ ಹಾಗೂ 7.70 ಲಕ್ಷ ರೂ. ವೌಲ್ಯದ ಇತರೆ ಮದ್ಯವನ್ನು ವಶಪಡಿಸಿಕೊಂಡು 69 ಪ್ರಕರಣಗಳನ್ನು ದಾಖಲಿಸಿದೆ. ಹಾಗೂ ಮದ್ಯದ ಪರವಾನಿಗೆಯನ್ನು ಉಲ್ಲಂಘಿಸಿದ 75 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ಸೇರಿದಂತೆ ಇದುವರೆಗೂ ಒಟ್ಟು 22 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಿಆರ್‌ಪಿಸಿ ಕಾಯ್ದೆಯಡಿ ಕಳೆದ 24 ಗಂಟೆಯಲ್ಲಿ 461 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 622 ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಲಾಗಿದೆ. ಒಟ್ಟಾರೆ 71574 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದ್ದು, 22,686 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.