ಬುದ್ಧನ ಆಶಯಗಳನ್ನು ಮೈಗೂಡಿಸಿಕೊಳ್ಳೋಣ: ಡಾ.ಕರೀಗೌಡ ಬೀಚನಹಳ್ಳಿ
ಬೆಂಗಳೂರು, ಮೇ 4: ಸಮಾನತೆ ಹಾಗೂ ಕರುಣೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಭಗವಾನ್ ಬುದ್ಧನ ಆಶಯಗಳನ್ನು ಸಾಕಾರಗೊಳಿಸೋಣವೆಂದು ಹಿರಿಯ ಸಾಹಿತಿ ಡಾ.ಕರೀಗೌಡ ಬೀಚನಹಳ್ಳಿ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ಬುದ್ಧಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬುದ್ಧನ ಆಶಯಗಳ ಬೆಳಕು ದೇಶದೆಲ್ಲೆಡೆ ಹರಡುವುದು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಬುದ್ಧನ ತತ್ವಗಳನ್ನು ಅರಿತು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಬಿ.ಗಂಗಾಧರ ಮಾತನಾಡಿ, ದೇವರನ್ನು ಕುರಿತು ಬುದ್ಧ ಮಂಡಿಸಿದ ಪ್ರಾಮಾಣಿಕ ನಿಲುವು ಹಾಗೂ ಆಹಾರದ ಕುರಿತು ಬುದ್ಧ ಪಾಲಿಸಿದ ಜೀವನ ಧೋರಣೆ ನಮ್ಮ ಆದರ್ಶವಾದಾಗ ಮನುಷ್ಯನ ನಡುವೆ ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವಿಮರ್ಶಕ ದಂಡಪ್ಪ ಮಾತನಾಡಿ, ಬುದ್ಧನ ಜೀವನದ ಆದರ್ಶಗಳು ಇಂದಿನ ತುರ್ತು ಅಗತ್ಯ. ಇಂದಿನ ಸಾಹಿತಿ ಹಾಗೂ ಕವಿಗಳು ಬುದ್ಧನ ತತ್ವಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ಬದುಕಿನ ಸಾರವನ್ನು ತಮ್ಮ ಬರವಣಿಗೆಯಲ್ಲಿ ಮೂಡಿಸಬೇಕೆಂದು ತಿಳಿಸಿದರು.
ಈ ವೇಳೆ ಸಮಕಾಲೀನ ಬದುಕಿನಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಹೆಣ್ಣಿನ ಮೇಲಿನ ದೌರ್ಜನ್ಯ, ಜಾತೀಯತೆ, ಭ್ರಷ್ಟಾಚಾರ, ಮರ್ಯಾದಾ ಹತ್ಯೆ ಮೊದಲಾದ ಗಂಭೀರ ವಿಷಯಗಳ ಕುರಿತು ರಚಿಸಿದ್ದ ಕವಿತೆಗಳನ್ನು ಕವಿಗಳು ವಾಚಿಸಿದರು. ಅಧ್ಯಾಪಕರಾದ ಡಾ.ಡಿ.ಕೆ.ಚಿತ್ತಯ್ಯ, ವಿದ್ಯಾರ್ಥಿನಿ ಭಾಗ್ಯಶ್ರೀ, ಚಾಂದ್‌ಪಾಷಾ, ನಾರಾಯಣಸ್ವಾಮಿ, ಪವಿತ್ರಾ, ಸೌಮ್ಯಾ ಮತ್ತಿತರರಿದ್ದರು.