ಸ್ವಂತ ಬಲದ ಮೇಲೆ ಕಾಂಗ್ರೆಸ್ ಸರಕಾರ ರಚನೆ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಮೇ 4: ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲ್ಲ. ರಾಜ್ಯ ಸರಕಾರದ ಕಾರ್ಯಕ್ರಮಗಳು ಜನರಿಗೆ ಮುಟ್ಟಿದ್ದು, ಸ್ವಂತ ಬಲದ ಮೇಲೆ ನಾವೇ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷನಾಗಿ ಎಂಟು ವರ್ಷಗಳ ಅನುಭವ ಸೇರಿದಂತೆ 30 ವರ್ಷಗಳ ರಾಜಕೀಯ ಅನುಭವದಿಂದಲೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.
‘ಉಲ್ಟಾ ಚೋರ್ ಕೊತ್ವಾಲ್ ಕೋ ಡಾಂಟೆ’(ಕಳ್ಳನೆ ಪೊಲೀಸರನ್ನು ಬೆದರಿಸಿದಂತೆ) ಎಂಬ ಗಾದೆ ಮಾತಿನಂತೆ ಪ್ರಧಾನಿ ನರೇಂದ್ರಮೋದಿ ವರ್ತಿಸುತ್ತಿದ್ದಾರೆ. ದೇಶದ ಜನತೆಗೆ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರಾ? 100 ದಿನಗಳಲ್ಲಿ ಕಪ್ಪು ಹಣವನ್ನು ತರುತ್ತೇನೆ ಅಂದ್ರು, ತರಲಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ, 5 ಲಕ್ಷ ಉದ್ಯೋಗಗಳನ್ನೂ ಸೃಷ್ಟಿಸಲಿಲ್ಲ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿರುವ ಕುರಿತು ನರೇಂದ್ರಮೋದಿ ಪ್ರಶ್ನೆ ಎತ್ತಿದ್ದಾರೆ. ಹಾಗಾದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಹಾಗೂ ವಡೋದರಾದಲ್ಲಿ ಅವರು ಸ್ಪರ್ಧಿಸಿದ್ದು ಏಕೆ ಎಂದು ಪರಮೇಶ್ವರ್ ಪ್ರಶ್ನಿಸಿದರು.
ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಯಾಕೆ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಮೋದಿ ಕೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಲೋಕಸಭೆಗೆ ಆಯ್ಕೆಯಾಗಿ ಹೋದಾಗ ಅವರನ್ನು ಲೋಕಸಭೆಯ ಪ್ರತಿಪಕ್ಷ ನಾಯಕನನ್ನಾಗಿಯೂ ಮೋದಿ ಮಾಡಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದಲ್ಲಿ ದಲಿತ ಭೋಜನ ಅಂತ ಬಿಜೆಪಿಯವರು ಕಾರ್ಯಕ್ರಮ ಮಾಡಿದರು. ಆದರೆ, ಅಲ್ಲಿನ ಬಿಜೆಪಿ ನಾಯಕ ಹೊಟೇಲ್‌ನಿಂದ ಊಟ ತೆಗೆದುಕೊಂಡು ಹೋಗಿ ದಲಿತರ ಮನೆಯಲ್ಲಿ ಊಟ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಯಡಿಯೂರಪ್ಪ ಮತ್ತು ಇತರರು ಹೊಟೇಲ್ ತಿಂಡಿಯನ್ನು ತೆಗೆದುಕೊಂಡು ಹೋಗಿ ದಲಿತರ ಮನೆಯಲ್ಲಿ ತಿಂದಿದ್ದರು ಎಂದು ಪರಮೇಶ್ವರ್ ಟೀಕಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ವಿಶ್ವಾಸ ನರೇಂದ್ರಮೋದಿಗಿದ್ದರೆ ದಲಿತ ಮುಖಂಡರೊಬ್ಬರನ್ನು ಅವರ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಬದಲಾವಣೆ ಮಾಡಲು ಹೊರಟಿರುವುದೇಕೆ? ಎಂದು ಪರಮೇಶ್ವರ್ ಕೇಳಿದರು.
ನಿಮ್ಮ ಬಿಜೆಪಿ ಸರಕಾರದ ಅವಧಿಯಲ್ಲಿ ಬೆಂಗಳೂರು ಗಾರ್ಬೆಜ್ ಸಿಟಿಯಾಗಿತ್ತು. ಆದರೆ, ನಮ್ಮ ಸರಕಾರದ ಅವಧಿಯಲ್ಲಿ ಬೆಂಗಳೂರು ವಿಶ್ವದಲ್ಲೆ ಅತ್ಯಂತ ಕ್ರಿಯಾಶೀಲ(ಡೈನಾಮಿಕ್ ಸಿಟಿ) ನಗರವೆಂಬ ಹೆಗ್ಗಳಿಕೆಯನ್ನು ಪಡೆದಿದೆ. ಉದ್ಯೋಗ ಸೃಷ್ಟಿ, ನವೋದ್ಯಮಗಳ ಆರಂಭದಲ್ಲಿ ನಾವು ಮೊದಲಿಗರಾಗಿದ್ದೇವೆ. ನವೋದ್ಯಮ ಗಳಿಗಾಗಿ ಪ್ರತ್ಯೇಕ ನೀತಿಯನ್ನೆ ತಂದಿದ್ದೇವೆ. ಪ್ರಧಾನಿಗೆ ಇದರ ಮಾಹಿತಿ ಇಲ್ಲದಿದ್ದರೆ ಹೇಗೆ? ಎಂದು ಅವರು ಹೇಳಿದರು.
ಬೆಂಗಳೂರು ಅಪರಾಧಗಳ ನಗರ ಎಂದು ಆರೋಪ ಮಾಡಿದ್ದೀರಾ? ಇಲ್ಲಿಗೆ ಬಂದು ಬಾಯಿಗೆ ಬಂದಂತೆ ಮಾತನಾಡಬೇಡಿ. ಅಧಿಕೃತ ಮಾಹಿತಿಗಳನ್ನು ಇಟ್ಟುಕೊಂಡು ಮಾತನಾಡಿ. ಅತೀ ಹೆಚ್ಚು ಅಪರಾಧ ಇರುವುದು ದಿಲ್ಲಿ, ಉತ್ತರಪ್ರದೇಶ ಹಾಗೂ ಗ್ವಾಲಿಯರ್‌ನಲ್ಲಿ, ದಲಿತರ ಮೇಲಿನ ದೌರ್ಜನ್ಯಗಳು ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ಹೆಚ್ಚಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಸ್ವತ್ತುಗಳಾಗಿದ್ದ ಕೆಂಪೇಗೌಡ ಮ್ಯೂಸಿಯಂ, ಮೇಯೋ ಹಾಲ್, ಯೂನಿಟಿ ಕಟ್ಟಡ, ದಾಸಪ್ಪ ಆಸ್ಪತ್ರೆ ಕಟ್ಟಡ, ಪಿಯುಬಿ ಕಟ್ಟಡ, ಮಲ್ಲೇಶ್ವರಂ ಮಾರುಕಟ್ಟೆ, ರಾಜಾಜಿನಗರ ಕಾಂಪ್ಲೆಕ್ಸ್, ಸ್ಲಾಟರ್ ಹೌಸ್ ಅನ್ನು ಬಿಜೆಪಿಯವರು ಅಡವಿಟ್ಟಿದ್ದರು. ನಾವು ಅಧಿಕಾರಕ್ಕೆ ಬಂದ ನಂತರ ಅದನ್ನು ಬಿಡಿಸಿಕೊಂಡು ಬಂದಿದ್ದೇವೆ ಎಂದು ಪರಮೇಶ್ವರ್ ಹೇಳಿದರು.
ನಮ್ಮ ಸರಕಾರದಿಂದ 22 ಲಕ್ಷ ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದೇವೆ. ನಮ್ಮ ಸರಕಾರವನ್ನು ಭ್ರಷ್ಟ ಸರಕಾರ, ಸಿದ್ದರಾಮಯ್ಯರನ್ನು ಭ್ರಷ್ಟಾಚಾರಿ ಅಂತೀರಾ. ನಿಮ್ಮ ಬಳಿ ದಾಖಲೆಗಳಿದ್ದರೆ ಹೋಗಿ ಜನರ ಮುಂದೆ ಬಹಿರಂಗಪಡಿಸಿ ಎಂದು ಅವರು ಸವಾಲು ಹಾಕಿದರು. ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ನರೇಂದ್ರಮೋದಿ ಮನ್ನಾ ಮಾಡಲಿ. ಅದನ್ನು ಬಿಟ್ಟು ರೈತರ ಸಾಲ ಮನ್ನಾ ಮಾಡಿರುವ ನಮ್ಮ ಸರಕಾರವನ್ನು ಗುರಿಯನ್ನಾಗಿಸಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ನ್ಯಾ.ಸದಾಶಿವ ಆಯೋಗ ಸಲ್ಲಿಸಿರುವ ವರದಿಯ ಅನುಷ್ಠಾನದ ಬಗ್ಗೆ ಗೊಂದಲ ಮೂಡಿಸಲಾಗುತ್ತಿದೆ. ಈ ವಿಚಾರದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಾನು ಸದಾಶಿವ ಆಯೋಗ ವರದಿ ಅನುಷ್ಠಾನಕ್ಕೆ ವಿರೋಧಿಸಿಲ್ಲ. ಆದರೂ, ಈ ಸಂಬಂಧ ಸುಳ್ಳು ಸುದ್ದಿಗಳನ್ನು ನನ್ನ ವಿರುದ್ಧ ಹರಿ ಬಿಡಲಾಗುತ್ತಿದೆ ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ದಲಿತ ಮುಖ್ಯಮಂತ್ರಿ: ಚುನಾವಣೆಯಲ್ಲಿ ಪಕ್ಷ ಗೆದ್ದು ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ನಾನು, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಸೇರಿದಂತೆ ಯಾರು ಬೇಕಾದರೂ ಸ್ಪರ್ಧಿಸಬಹುದು. ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಶಾಸಕಾಂಗ ಪಕ್ಷದ ಸದಸ್ಯರು ತೀರ್ಮಾನಿಸುತ್ತಾರೆ. ಆನಂತರ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಲಾಗಿದೆ. ಅವಕಾಶ ಇದ್ದಾಗಲೆ ರೈತರ ಸಾಲವನ್ನು ಮನ್ನಾ ಮಾಡಿಸಲಿಲ್ಲ. ಆನಂತರ, ಹೇಗೆ ಇವರನ್ನು ನಂಬುವುದು ಎಂದು ಪರಮೇಶ್ವರ್ ತಿರುಗೇಟು ನೀಡಿದರು.
ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿರುವ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಎಚ್.ನಾಗೇಶ್‌ರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.