×
Ad

ಲೊಟ್ಟೆಗೊಲ್ಲಹಳ್ಳಿಯಲ್ಲಿ ಅಕ್ರಮ ಡಿನೋಟಿಫೈ: ಯಡಿಯೂರಪ್ಪಗೆ ಹೈಕೋರ್ಟ್ ತುರ್ತು ನೋಟಿಸ್

Update: 2018-05-04 21:26 IST

ಬೆಂಗಳೂರು, ಮೇ 4: ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆರ್.ಎಂ.ವಿ ಬಡಾವಣೆ ಎರಡನೆ ಹಂತದ ಲೊಟ್ಟೆಗೊಲ್ಲಹಳ್ಳಿಯಲ್ಲಿ 14 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪಗೆ ತುರ್ತು ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿಎಸ್ಪಿ ಅವರಿಗೆ ನೋಟಿಸ್ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಲೊಟ್ಟೆಗೊಲ್ಲಹಳ್ಳಿ ನಿವಾಸಿ ರಾಮಸ್ವಾಮಿ ಮತ್ತು ಜಿ.ಶಾಮಣ್ಣ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ಈಗಾಗಲೇ ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು 2011ರಲ್ಲಿ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಲೋಕಾಯುಕ್ತ ಕೋರ್ಟ್ 2015ರ ನವೆಂಬರ್ 7ರಂದು ಮಾನ್ಯ ಮಾಡಿತ್ತು. ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News