ಮಾನವೀಯ ಸ್ಪಂದನವೇ ರಂಗಭೂಮಿಯ ಧ್ಯೇಯ: ಹಿರಿಯ ರಂಗಕರ್ಮಿ ಸೇತುರಾಮ್
ಬೆಂಗಳೂರು, ಮೇ 4: ಪರರ ನೋವಿಗೆ ಸ್ಪಂದಿಸುವ ಮಾನವೀಯ ಹೃದಯಗಳನ್ನು ಹೆಚ್ಚಿಸುವುದೆ ರಂಗಭೂಮಿಯ ಧ್ಯೇಯವೆಂದು ಎಂದು ಹಿರಿಯ ರಂಗಕರ್ಮಿ ಸೇತುರಾಮ್ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಂಗನಿರಂತರ ತಂಡ ಆಯೋಜಿಸಿದ್ದ ’ಸಿಜಿಕೆ ರಾಷ್ಟ್ರೀಯ ನಾಟಕೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ರಂಗಕರ್ಮಿಗಳು ಬದುಕಿದ್ದಾಗ ಅವರನ್ನು ಗೌರವದಿಂದ ಕಾಣುವುದಿಲ್ಲ. ಅವರು ಅಗಲಿದ ಬಳಿಕ ಅವರ ಸಾಧನೆಯನ್ನು ಕೊಂಡಾಡುತ್ತೇವೆ. ಜೀವಿತದ ಕೊನೆಯಲ್ಲಿ ಅವರನ್ನು ಗೌರವದಿಂದ ನೋಡಿದರೆ ಇನ್ನೂ ಹತ್ತು ವರ್ಷ ಹೆಚ್ಚಿಗೆ ಬದುಕುತ್ತಾರೆ ಎಂದು ತಿಳಿಸಿದರು.
ವ್ಯಕ್ತಿಯ ಬದುಕಿಗೆ ಶಿಸ್ತು ಇಲ್ಲದಿದ್ದರೆ ಜೀವನ ಸಾಗಿಸುವುದು ಕಷ್ಟ. ಅದರಲ್ಲಿ ನಾಟಕಕಾರರಿಗೆ ವ್ಯಕ್ತಿತ್ವ ಬಹಳವೇ ಮುಖ್ಯವಾಗುತ್ತದೆ. ಯಾವುದೇ ಕಲಾವಿದ ಕ್ರಿಯೆಯಿಂದ ಮನುಷ್ಯನಾಗಬೇಕು ಎಂಬುದನ್ನು ಸಿಜಿಕೆ ಅವರ ಒಡನಾಟದಿಂದ ಕಲಿತಿದ್ದೇನೆ. ಯಾವುದೇ ರಂಗಕರ್ಮಿಯನ್ನು ಜನರು ಗುರುತಿಸಿ ಮೆಚ್ಚಿಕೊಂಡರೆ ಅವರು ಹೆಚ್ಚುದಿನ ವೃತ್ತಿ ರಂಗಭೂಮಿಯಲ್ಲಿ ಉಳಿಯುತ್ತಾರೆ ಎಂದು ಅವರು ತಿಳಿಸಿದರು.
ಹಿರಿಯ ರಂಗಕರ್ಮಿ ಡಾ.ಡಿ.ಕೆ. ಚೌಟ ಮಾತನಾಡಿ, ಸಿಜಿಕೆ ಅವರದ್ದು ಎಲ್ಲರನ್ನೂ ತನ್ನವರೆಂದು ಒಳಗೊಳಿಸಿಕೊಳ್ಳುವ ವೈರುಧ್ಯದ ವ್ಯಕ್ತಿತ್ವ. ಸಿಜಿಕೆ ಯಾರು ಎಂದು ತಿಳಿಯದ ಹೊಸ ತಲೆಮಾರಿನ ನಿರ್ದೇಶಕ, ಕಲಾವಿದರು ನಾಡಿನಾದ್ಯಂತ ಅವರ ನಾಟಕೋತ್ಸವ ಆಚರಿಸುತ್ತಿದ್ದಾರೆ. ಬಿ.ವಿ. ಕಾರಂತ್, ಸುಬ್ಬಣ್ಣ ಅವರಿಗೂ ಇಂತಹ ಗೌರವ ಸಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು.
ಕಳೆದ ಏಳು ದಿನದಿಂದ ನಡೆಯುತ್ತಿರುವ ನಾಟಕೋತ್ಸವದಲ್ಲಿ ಭಾಗವಹಿಸಿದ ರಂಗಭೂಮಿ ಕಲಾವಿದರು, ತಂತ್ರಜ್ಞ ಮತ್ತು ಹಿರಿಯ ರಂಗಕರ್ಮಿಗಳನ್ನು ಸನ್ಮಾನಿಸಲಾಯಿತು. ಹಿರಿಯ ರಂಗಕರ್ಮಿ ವಿ.ಚನ್ನಪ್ಪ, ಎಂ.ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.