ಕಾಂಗ್ರೆಸ್ ಅಭ್ಯರ್ಥಿ ಮಂಜೇಗೌಡ ರಾಜೀನಾಮೆ ಅಂಗೀಕಾರ ವಿಚಾರ ಕುರಿತು ಹೈಕೋರ್ಟ್ ಮಧ್ಯಂತರ ಆದೇಶ
ಬೆಂಗಳೂರು, ಮೇ 4: ಹೊಳೇನರಸಿಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ.ಮಂಜೇಗೌಡ ಅವರು ತಮ್ಮ ಸರಕಾರಿ ಹುದ್ದೆಗೆ ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಿದ ಸರಕಾರದ ಆದೇಶವು ಅರ್ಜಿ ಕುರಿತು ನ್ಯಾಯಾಲಯವು ಹೊರಡಿಸುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಮಂಜೇಗೌಡ ಅವರ ರಾಜೀನಾಮೆಯನ್ನು ರಾಜ್ಯ ಸರಕಾರವು ಕಾನೂನು ಬಾಹಿರವಾಗಿ ಅಂಗೀಕರಿಸಿ ಆದೇಶಿಸಿದ್ದು, ಅದನ್ನು ರದ್ದುಪಡಿಸುವಂತೆ ಕೋರಿ ಚನ್ನರಾಯಪಟ್ಟಣ ತಾಲೂಕಿನ ದೊಡ್ಡಮತಿಘಟ್ಟ ಗ್ರಾಮದ ನಿವಾಸಿ ಡಿ.ಆರ್. ನಾರಾಯಣಸ್ವಾಮಿ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಶುಕ್ರವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಮಂಜೇಗೌಡ ಅವರ ರಾಜೀನಾಮೆ ಅಂಗೀಕರಿಸಿದ ಸರಕಾರದ ಆದೇಶವು ಈ ಅರ್ಜಿ ಕುರಿತು ನ್ಯಾಯಾಲಯವು ಹೊರಡಿಸುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿ ಮಧ್ಯಂತರ ಆದೇಶ ಹೊರಡಿಸಿತು.
ಮಂಜೇಗೌಡ ಅವರು 2018ರ ಮಾ.27ಕ್ಕೆ ರಾಜೀನಾಮೆ ನೀಡಿದ್ದಾರೆ. ಆ ರಾಜೀನಾಮೆಯನ್ನು ರಾಜ್ಯ ಸರಕಾರವು 2018ರ ಎ.9ರಂದು ಅಂಗೀಕರಿಸಿದೆ. ಆದರೆ, ರಾಜೀನಾಮೆ ಅಂಗೀಕರಿಸಿರುವ ಸರಕಾರದ ಆದೇಶದಲ್ಲಿ ಮಂಜೇಗೌಡ ರಾಜೀನಾಮೆ ನೀಡಿರುವುದು 2017ರ ನ.3 ಎಂದು ಬರೆಯಲಾಗಿದೆ. ಮತ್ತೊಂದೆಡೆ ಇಡೀ ರಾಜೀನಾಮೆ ಪತ್ರ ಡಿಟಿಪಿ ಮಾಡಲಾಗಿದ್ದು, ದಿನಾಂಕ ಮಾತ್ರ ಕೈಬರಹದಲ್ಲಿದೆ. ಅದರಿಂದ ಹಿಂದಿನ ದಿನಾಂಕ ನಮೂದಿಸಿ ಕೊಟ್ಟ ರಾಜೀನಾಮೆ ಪತ್ರ ಸ್ವೀಕಾರಾರ್ಹವಲ್ಲ ಮತ್ತು ಪ್ರಕರಣದಲ್ಲಿ ಅಧಿಕಾರ ದುರ್ಬಳಕೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅಲ್ಲದೆ, ಮಂಜೇಗೌಡ ವಿರುದ್ಧದ ಲಂಚ ಪ್ರಕರಣದಲ್ಲಿ ಈಗಾಗಲೇ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, ಲೋಕಾಯುಕ್ತ ನ್ಯಾಯಾಲಯದ ಮುಂದಿದೆ. ಕಾನೂನು ಪ್ರಕಾರ ಸರಕಾರಿ ನೌಕರರ ವಿರುದ್ಧ ಯಾವುದೇ ರೀತಿ ಪ್ರಕರಣಗಳು ಬಾಕಿ ಇದ್ದರೆ, ಅವರು ಉದ್ಯೋಗಕ್ಕೆ ನೀಡುವ ರಾಜೀನಾಮೆ ಅಂಗೀಕರಿಸುವಂತಿಲ್ಲ. ಆದರೂ ಮಂಜೇಗೌಡರ ರಾಜೀನಾಮೆಯನ್ನು ಸರಕಾರ ಅಂಗೀಕರಿಸಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.