×
Ad

ಪರಿಶಿಷ್ಟರ ಮುಂಭಡ್ತಿ ಮೀಸಲಾತಿ: ಕೇಂದ್ರದ ಕ್ರಮ ಖಂಡಿಸಿ ಸಂಸದರ ನಿವಾಸಗಳಿಗೆ ಮುತ್ತಿಗೆ; ಎಚ್ಚರಿಕೆ

Update: 2018-05-04 21:43 IST

ಬೆಂಗಳೂರು, ಮೇ 4: ‘ಪರಿಶಿಷ್ಟರ ಮುಂಭಡ್ತಿ ಮೀಸಲಾತಿ ಸಂಬಂಧ ಕೋರ್ಟ್ ತೀರ್ಪಿನ ನೆಪದಲ್ಲಿ ಎಸ್ಸಿ-ಎಸ್ಟಿ ಅಧಿಕಾರಿಗಳು ಮತ್ತು ನೌಕರರನ್ನು ಮನಸೋ ಇಚ್ಛೆ ಹಿಂಭಡ್ತಿ ನೀಡುವ ಕ್ರಮವನ್ನು ಖಂಡಿಸಿ ಸಂಸದರ ನಿವಾಸಗಳಿಗೆ ಮುತ್ತಿಗೆ ಹಾಕಲಾಗುವುದು’ ಎಂದು ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್. ಮಹದೇವಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಕೆಲ ಜಾತಿವಾದಿ ಅಧಿಕಾರಿಗಳು ಮೀಸಲಾತಿ ಹಾಗೂ ಸಂವಿಧಾನವನ್ನು ಗಾಳಿಗೆ ತೂರಿ, ಅವೈಜ್ಞಾನಿಕವಾಗಿ ಜೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದು, ಇದು ಪರಿಶಿಷ್ಟ ನೌಕರರ ಆತ್ಮಹತ್ಯೆಗೂ ಪ್ರೇರೇಪಿಸುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿನ ಎಸ್ಸಿ-ಎಸ್ಟಿ ನೌಕರರು ಮತ್ತು ಅಧಿಕಾರಿಗಳಿಗೆ ಮುಂಭಡ್ತಿ-ಹಿಂಭಡ್ತಿ ನೆಪದಲ್ಲಿ ಮಾನಸಿಕ ಕಿರುಕುಳ ನೀಡುತ್ತಿರುವ ಎಲ್ಲ ಇಲಾಖೆಗಳ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಪರಿಶಿಷ್ಟ ಅಧಿಕಾರಿಗಳು ಮತ್ತು ನೌಕರರಿಗೆ ಮುಂಭಡ್ತಿ ನೀಡಲು ಕೇಂದ್ರ ಸರಕಾರ ಅಡ್ಡಿಪಡಿಸುವ ಮೂಲಕ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಚಿತ್ರದುರ್ಗದ ಎಇಇ ಲಿಂಗರಾಜುಗೆ ಹಿಂಭಡ್ತಿ ನೀಡಿದ್ದರಿಂದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಲ್ಲದೆ, ಮುಂಡಗೋಡಿನ ಅಧಿಕಾರಿ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಕೇಂದ್ರ ಸರಕಾರದ ತಾರತಮ್ಯ ಧೋರಣೆ ಕಾರಣ ಎಂದು ಟೀಕಿಸಿದರು.

ಮುಂಭಡ್ತಿ ಸಂಬಂಧ ಮಸೂದೆಗೆ ರಾಜ್ಯಪಾಲರು ಅನುಮೋದನೆ ನೀಡಿ ರಾಷ್ಟ್ರಪತಿ ಅಂಕಿತಕ್ಕೆ ರವಾನಿಸಿದ್ದು, ಸ್ಪಷ್ಟೀಕರಣದ ನೆಪದಲ್ಲಿ ಕೇಂದ್ರ ಸರಕಾರ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದೆ. ಈ ಮಧ್ಯೆ ಭಡ್ತಿ ಮೀಸಲಾತಿ ರದ್ದುಪಡಿಸಿ, ಜೇಷ್ಠತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲದೆ ಉದ್ದೇಶಪೂರ್ವಕವಾಗಿ ಹಿಂಭಡ್ತಿ ನೀಡಲು ಯಾರು ಕಾರಣ ಎಂದು ಪ್ರಶ್ನಿಸಿದರು.

ಶೋಷಣೆ ಸುಳಿಯಿಂದ ಮೇಲೆ ಬಂದ ಸರಕಾರದ ಉನ್ನತ ಸ್ಥಾನಕ್ಕೇರಿದ ಸರಕಾರಿ ಅಧಿಕಾರಿ ಮತ್ತು ನೌಕರರನ್ನು ನೆಪಗಳನ್ನು ಮುಂದಿಟ್ಟುಕೊಂಡು ಮೀಸಲಾತಿ ನೀತಿಗೆ ವಿರುದ್ಧವಾಗಿ ಹಿಂಭಡ್ತಿ ನೀಡುವ ಕ್ರಮ ಸರಿಯಲ್ಲ. ಕೂಡಲೇ ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸೂಕ್ತ ಕ್ರಮವಹಿಸಿ ಪರಿಶಿಷ್ಟ ನೌಕರರ ಹಿತರಕ್ಷಣೆಗೆ ಮುಂದಾಗಬೇಕೆಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಡಾ.ಎಸ್.ವಿಜಯಕುಮಾರ್, ಸಂಘಟನಾ ಕಾರ್ಯದರ್ಶಿ ಬಿ.ಆರ್. ಕೃಷ್ಣಯ್ಯ, ಸಾಂಖಿಕ ಇಲಾಖೆ ಎಸ್ಸಿ-ಎಸ್ಟಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News