ಮೈಸೂರು: ಪತ್ನಿಗೆ ಕಿರುಕುಳ ಆರೋಪ; ಮಹಿಳಾ ಆಯೋಗದ ವಿಚಾರಣೆಗೆ ಮನನೊಂದು ಪತಿ ಆತ್ಮಹತ್ಯೆ
Update: 2018-05-04 22:04 IST
ಮೈಸೂರು,ಮೇ.4: ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪದ ಮೇಲೆ ಮಹಿಳಾ ಆಯೋಗ ವ್ಯಕ್ತಿವೋರ್ವನನ್ನು ವಿಚಾರಣೆ ಮಾಡಿದ್ದಕ್ಕೆ ಮನನೊಂದ ಆರೋಪಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೋಗಾದಿಯ ಬಸವೇಶ್ವರ ನಗರದಲ್ಲಿ ಇಂದು ನಡೆದಿದೆ.
ಬಸವೇಶ್ವರ ನಗರದ ನಿವಾಸಿ ರವಿರಾಜು(35) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತನ ಪತ್ನಿ ಶ್ವೇತ ನನ್ನ ಗಂಡ ಕಿರುಕುಳ ನೀಡುತ್ತಿದ್ದಾನೆ, ಸಂಸಾರ ಮಾಡದೇ ಪ್ರತಿದಿನ ಗಲಾಟೆ ಮಾಡುತ್ತಾರೆ ಎಂದು ಕೆಲ ದಿನಗಳ ಹಿಂದೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು ಎನ್ನಲಾಗಿದೆ.
ಶ್ವೇತ ದೂರಿನಂತೆ ರವಿರಾಜುನನ್ನು ಕರೆದು ಮಹಿಳಾ ಆಯೋಗ ವಿಚಾರಣೆ ಮಾಡಿ ಗಲಾಟೆ ಮಾಡದಂತೆ ಬುದ್ಧಿ ಹೇಳಿದೆ ಎನ್ನಲಾಗಿದೆ. ಇದರಿಂದ ಅವಮಾನವಾಗಿದೆ ಎಂದು ರವಿರಾಜು ತನ್ನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.