ಹೈಸ್ಪೀಡ್ ವಲಯಗಳಲ್ಲಿ ಗೋಡೆ ನಿರ್ಮಿಸಲಿರುವ ರೈಲ್ವೇ: ಜಾಹೀರಾತು ಮೂಲಕ ಆದಾಯ ಗಳಿಸಲು ಚಿಂತನೆ

Update: 2018-05-05 16:18 GMT

ಹೊಸದಿಲ್ಲಿ, ಮೇ.5: ಜಾಹೀರಾತುಗಳ ಮೂಲಕ ಆದಾಯವನ್ನು ಗಳಿಸಿ ಇಲಾಖೆಯನ್ನು ಆರ್ಥಿಕವಾಗಿ ಸುದೃಢಗೊಳಿಸುವ ಉದ್ದೇಶದಿಂದ ಹೈಸ್ಪೀಡ್ ವಲಯಗಳಲಿರುವ ಹಳಿಗಳ ಪಕ್ಕದಲ್ಲಿ ಗೋಡೆಗಳನ್ನು ನಿರ್ಮಿಸಿ ಅವುಗಳ ಮೇಲೆ ಜಾಹೀರಾತುಗಳನ್ನು ಪ್ರದರ್ಶಿಸುವ ಪ್ರಸ್ತಾವನೆಯ ಬಗ್ಗೆ ಭಾರತೀಯ ರೈಲ್ವೇ ಗಂಭೀರವಾಗಿ ಚಿಂತಿಸುತ್ತಿದೆ. ಈ ಕುರಿತು ಇಲಾಖೆಯು ಸಿದ್ಧ ಗೋಡೆಗಳನ್ನು ನಿರ್ಮಿಸುವ ಗುತ್ತಿಗೆದಾರರ ಜೊತೆ ಮಾತುಕತೆ ನಡೆಸುತ್ತಿದ್ದು ಜಾಹೀರಾತುಗಳ ಮೂಲಕ ಗಳಿಸುವ ಆದಾಯವನ್ನು ಗುತ್ತಿಗೆದಾರರ ಜೊತೆ ಹಂಚಿಕೊಳ್ಳುವ ಪ್ರಸ್ತಾವ ಇಟ್ಟಿದೆ. ಆಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಗೋಡೆಗಳನ್ನು ನಿರ್ಮಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ.

ದಿಲ್ಲಿ-ಮುಂಬೈ ಹೈಸ್ಪೀಡ್ ವಲಯದಲ್ಲಿ ಗೋಡೆ ನಿರ್ಮಾಣ ಮಾಡುವ ಯೋಜನೆ ಸಿದ್ಧವಾಗುತ್ತಿದ್ದು ಈ ಗೋಡೆಗಳು ಭದ್ರತೆಯ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ಪ್ರದೇಶಗಳಲ್ಲಿ ಜನ ಸಾಂದ್ರತೆ ಅತ್ಯಂತ ಹೆಚ್ಚಿರುವ ಕಾರಣ ಇಲ್ಲಿ ಜಾಹೀರಾತು ಹಾಕಿದಲ್ಲಿ ಹೆಚ್ಚಿನ ಜನರು ವೀಕ್ಷಿಸುತ್ತಾರೆ ಎಂದು ಈ ಯೋಜನೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲ್ವೇ ಇಲಾಖೆಗೆ ಆದಾಯ ತರುವುದರ ಜೊತೆಗೆ ಈ ಗೋಡೆಗಳು ಅತಿಕ್ರಮಣ, ಜಾನುವಾರುಗಳ ತೊಂದರೆ ಹಾಗೂ ಇತರ ಸಮಸ್ಯೆಗಳಿಂದಲೂ ಮುಕ್ತಿ ನೀಡಲಿದೆ ಎಂದವರು ತಿಳಿಸಿದ್ದಾರೆ. 7ರಿಂದ 8 ಅಡಿ ಎತ್ತರದ ಗೋಡೆಗಳ ಎರಡೂ ಬದಿಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುವಂತೆ ನೋಡಿಕೊಳ್ಳಲಾಗುವುದು. ಈ ಯೋಜನೆಯಿಂದ ಇಲಾಖೆಗೆ ಟಿಕೆಟ್ ಮಾರಾಟದಿಂದ ಬರುವ ಆದಾಯದ ಹೊರತಾಗಿ ಒಂದು ಉತ್ತಮ ಆದಾಯದ ಮೂಲ ಸಿಕ್ಕಂತಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News