ಮುಂಬೈ ಇಂಡಿಯನ್ಸ್ ಗೆ ಕೆಕೆಆರ್ ಸವಾಲು

Update: 2018-05-05 18:37 GMT

ಮುಂಬೈ, ಮೇ 5: ಪಂಜಾಬ್ ವಿರುದ್ಧ ಗೆಲುವು ಸಾಧಿಸಿ ವಿಶ್ವಾಸ ಹೆಚ್ಚಿಸಿಕೊಂಡಿರುವ ಆತಿಥೇಯ ಮುಂಬೈ ಇಂಡಿಯನ್ಸ್ ರವಿವಾರ ಕೋಲ್ಕತಾ ನೈಟ್ ರೈಡರ್ಸ್ ತಂಡದಿಂದ ಕಠಿಣ ಸವಾಲು ಎದುರಿಸಲಿದೆ.

ಇಂದೋರ್‌ನಲ್ಲಿ ಪಂಜಾಬ್ ವಿರುದ್ಧ 6 ವಿಕೆಟ್‌ಗಳಿಂದ ಜಯ ಸಾಧಿಸಿರುವ ಮುಂಬೈ ಪ್ಲೇ-ಆಫ್ ಸುತ್ತಿಗೇರುವ ವಿಶ್ವಾಸವನ್ನು ಉಳಿಸಿಕೊಂಡಿದೆ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈನ ಕೆಲವು ದಾಂಡಿಗರು ಕೊನೆಗೂ ಸಿಡಿದಿದ್ದಾರೆ. ಕೃನಾಲ್ ಪಾಂಡ್ಯ ಹಾಗೂ ರೋಹಿತ್ ಶರ್ಮ 5ನೇ ವಿಕೆಟ್‌ಗೆ 21 ಎಸೆತಗಳಲ್ಲಿ 56 ರನ್ ಜೊತೆಯಾಟ ನಡೆಸಿದ್ದರು. ಮುಂಬೈ 9 ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ, ಕೆಕೆಆರ್ ಮೂರನೇ ಸ್ಥಾನಕ್ಕೇರಿದೆ. ಮುಂಬೈ ಪ್ಲೇ-ಆಫ್‌ಗೆ ತೇರ್ಗಡೆಯಾಗಲು ಉಳಿದ ಎಲ್ಲ 5 ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

ಮುಂಬೈ ತಂಡದಲ್ಲಿ ಸೂರ್ಯಕುಮಾರ್ ಯಾದವ್(340 ರನ್)ಉತ್ತಮ ಫಾರ್ಮ್ ನಲ್ಲಿದ್ದು, ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

ಯಾದವ್ ಆರಂಭಿಕ ಜೊತೆಗಾರ ಎವಿನ್ ಲೂವಿಸ್ ನಿರಾಶಾದಾಯಕ ಪ್ರದರ್ಶನ ನೀಡುತ್ತಿದ್ದಾರೆ. ಡೆತ್ ಓವರ್ ಬೌಲಿಂಗ್‌ನಲ್ಲಿ ಮುಂಬೈ ಸುಧಾರಣೆಯಾಗಬೇಕಾಗಿದೆ. ನ್ಯೂಝಿಲೆಂಡ್‌ನ ಮಿಚೆಲ್ ಮೆಕ್ಲಿನಘನ್ ಬೆಂಗಳೂರು ದಾಂಡಿಗನಿಗೆ ಕೊನೆಯ ಓವರ್‌ನಲ್ಲಿ 3 ಸಿಕ್ಸರ್ ನೀಡಿದ್ದರು. ಪಂಜಾಬ್ ವಿರುದ್ಧ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಒಂದೇ ಓವರ್‌ನಲ್ಲಿ 21 ರನ್ ನೀಡಿದ್ದರು.

 ಕೆಕೆಆರ್‌ನ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ನಿಯಂತ್ರಿಸಲು ಜಸ್‌ಪ್ರೀತ್ ಬುಮ್ರಾ, ಬೆನ್ ಕಟ್ಟಿಂಗ್ ಹಾಗೂ ಯುವ ಲೆಗ್-ಸ್ಪಿನ್ನರ್ ಮಯಾಂಕ್ ಮರ್ಕಂಡೆ(12 ವಿಕೆಟ್)ಸಂಘಟಿತ ಪ್ರದರ್ಶನ ನೀಡಬೇಕಾಗಿದೆ. ಕೃನಾಲ್ ಸಹೋದರ ಹಾರ್ದಿಕ್‌ರೊಂದಿಗೆ ಬ್ಯಾಟಿಂಗ್‌ನಲ್ಲಿ ಮಿಂಚುವ ಅಗತ್ಯವಿದೆ. ಮುಂಬೈ ತಂಡ ಈ ಋತುವಿನಲ್ಲಿ ತವರಿನಲ್ಲಿ ಆಡಿದ 4 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ. ಆರ್‌ಸಿಬಿ ವಿರುದ್ಧ ಈ ಗೆಲುವು ಸಾಧಿಸಿತ್ತು.

ದಿನೇಶ್ ಕಾರ್ತಿಕ್ ನಾಯಕತ್ವದಲ್ಲಿ ಕೆಕೆಆರ್ ಉತ್ತಮ ಪ್ರದರ್ಶನ ನೀಡುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರು ವಿಕೆಟ್‌ಗಳಿಂದ ಜಯ ಸಾಧಿಸಿರುವ ಕೆಕೆಆರ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಕೆಕೆಆರ್ ಪ್ಲೇ-ಆಫ್ ಹಂತಕ್ಕೇರುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಕಾರ್ತಿಕ್ 9 ಪಂದ್ಯಗಳಲ್ಲಿ 280 ರನ್ ಗಳಿಸಿದ್ದಾರೆ. ಕ್ರಿಸ್ ಲಿನ್ ಹಾಗೂ ಆ್ಯಂಡ್ರೆ ರಸ್ಸಲ್ ಕ್ರಮವಾಗಿ 260 ಹಾಗೂ 207 ರನ್ ಗಳಿಸಿದ್ದಾರೆ. ವಿಂಡೀಸ್‌ನ ಸುನೀಲ್ ನರೇನ್ ಅಗ್ರ ಕ್ರಮಾಂಕದಲ್ಲಿ ಹಾಗೂ ಯುವ ಆಟಗಾರ ಶುಭಮನ್ ಗಿಲ್ ಕೆಳ ಕ್ರಮಾಂಕದಲ್ಲಿ ಕೆಕೆಆರ್ ಗೆಲುವಿಗೆ ಪ್ರಮುಖ ಕಾಣಿಕೆ ನೀಡುತ್ತಿದ್ದಾರೆ. ಉಪ ನಾಯಕ ರಾಬಿನ್ ಉತ್ತಪ್ಪ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತಿಲ್ಲ.

ಕೆಕೆಆರ್ ಬೌಲಿಂಗ್ ವಿಭಾಗದಲ್ಲಿ ಮೂವರು ಉತ್ತಮ ಸ್ಪಿನ್ನರ್‌ಗಳಾದ ನರೇನ್(10 ವಿಕೆಟ್), ಪಿಯೂಷ್ ಚಾವ್ಲಾ(8 ವಿಕೆಟ್) ಹಾಗೂ ಚೈನಾಮನ್ ಬೌಲರ್ ಕುಲ್‌ದೀಪ್ ಯಾದವ್(8 ವಿಕೆಟ್) ಅವರಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿರುವ ನಿತೀಶ್ ರಾಣಾ ತಂಡಕ್ಕೆ ವಾಪಸಾದರೆ ಕೆಕೆಆರ್ ಬೌಲಿಂಗ್ ದಾಳಿ ಮತ್ತಷ್ಟು ಬಲಿಷ್ಠವಾಗಲಿದೆ.

ಕೆಕೆಆರ್‌ನ ವೇಗದ ಬೌಲರ್‌ಗಳಾದ ಟಾಮ್ ಕುರ್ರನ್, ಹಿರಿಯ ವೇಗಿ ಮಿಚೆಲ್ ಜಾನ್ಸನ್ ಹಾಗೂ ಶಿವಂ ಮಾವಿ ಇನ್ನಷ್ಟೇ ಉತ್ತಮ ಪ್ರದರ್ಶನ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News