ಜಪಾನಿನ ವಿಶಿಷ್ಟ ಲೇಖಕ ಮುರಕಾಮಿ

Update: 2018-05-06 05:39 GMT

ಎಲ್ಲವೂ ಡಿಜಿಟಲ್‌ಮಯವಾಗಿರುವ ಜಪಾನ್‌ನಲ್ಲಿ ಇಂದಿಗೂ ಸಾಹಿತ್ಯದ ಸೂಪರ್‌ಸ್ಟಾರ್. ನಮ್ಮ ಜನರು ತಮ್ಮ ನೆಚ್ಚಿನ ನಾಯಕ ನಟನ ಸಿನಿಮಾ ರಿಲೀಸ್ ಆಗಬೇಕೆಂದಿರುವ ಹಿಂದಿನ ದಿವನ ಮದ್ಯ ರಾತ್ರಿ ಹೋಗಿ ಸರದಿಯಲ್ಲಿ ನಿಂತು ಟಿಕೆಟ್ ಕೊಳ್ಳುತ್ತಾರೆ. ಅಥವಾ ಆ ರಾತ್ರಿಯೇ ಸಿನಿಮಾ ಹಾಕಿಸಿ ನೋಡಿ ಖುಷಿಪಡುತ್ತಾರೆ. ಮುರಕಾಮಿಯ ಪುಸ್ತಕದ ಬಿಡುಗಡೆಯ ಹಿಂದಿನ ಮದ್ಯರಾತ್ರಿಯೇ ಬುಕ್‌ಸ್ಟಾಲ್‌ಗಳನ್ನು ತೆರೆಯಲಾಗುತ್ತದೆ. ಸರದಿ ಸಾಲಿನಲ್ಲಿ ನಿಂತು ಹೊಸ ಪುಸ್ತಕವನ್ನು ಕೊಂಡು ಕೆಫೆಗಳಿಗೆ ಮತ್ತು ಬಿಯರ್ ಸ್ಟಾಲ್‌ಗಳಲ್ಲಿ ಹೋಗಿ ಓದುತ್ತಾರೆ.

ಮುರಕಾಮಿ ಬಗ್ಗೆ ನನಗೆ ತಿಳಿದಿದ್ದು ಇತ್ತೀಚೆಗೆ. ಕೇರಳದ ಕೊಚ್ಚಿನ್ ನಗರ ಸಣ್ಣ ಪುಟ್ಟ ದ್ವೀಪಗಳಿಂದ ಸುತ್ತುವರಿದಿದೆ. ಕೊಚ್ಚಿನ್‌ಗೆ ಹೋದ ಯಾರೇ ಆದರೂ ಸಣ್ಣ ಫೆರ್ರಿಗಳಲ್ಲಿ ಪ್ರವಾಸಿಗರನ್ನು ಕೊಂಡೊಯ್ಯುತ್ತಾರೆ. ಫೆರ್ರಿಯಲ್ಲಿನ ಗೈಡ್‌ಗಳು ಏಕಕಾಲದಲ್ಲಿ ಡಿಸ್ಕೋ ಜಾಕಿಯಾಗಿಯೂ ಮಾರ್ಗದರ್ಶಕರಾಗಿಯೂ ಕೆಲಸ ಮಾಡುತ್ತಿರುತ್ತಾರೆ. ಕನ್ನಡ, ತೆಲುಗು, ಮಲಯಾಳಂ, ಹಿಂದಿ ಯಾವುದೇ ಭಾಷೆಯ ಪ್ರವಾಸಿಗರು ಹೋದರೂ ಅವರವರ ಭಾಷೆಯ ಹಾಡುಗಳನ್ನು ಹಾಕಿ ಖುಷಿಪಡಿಸುತ್ತಾರೆ. ಹುಡುಗ ಹುಡುಗಿಯರು ಫೆರ್ರಿಗಳಲ್ಲಿ ಕುಣಿದು ಕುಪ್ಪಳಿಸುತ್ತಾರೆ. ನಾಲ್ಕೈದು ಹಾಡುಗಳು ಮುಗಿಯುವ ವೇಳೆಗೆ ಪೋರ್ಚುಗೀಸರ ಅರಮನೆ ಇರುವ ದ್ವೀಪಕ್ಕೆ ಬಂದು ತಲುಪುತ್ತೇವೆ. ಅಲ್ಲಿ ಒಂದು ಬುಕ್ ಸ್ಟಾಲ್ ಇದೆ. ಪ್ರಪಂಚದಲ್ಲೇ ಅತೀ ಹೆಚ್ಚು ಮಾರಾಟವಾಗುವ ಕೃತಿಗಳನ್ನು ಇಟ್ಟಿರುತ್ತಾರೆ. ಅಲ್ಲಿಗೆ ಯೂರೋಪಿಯನ್ನರು ಮತ್ತು ಅಮೆರಿಕನ್ನರು ಹೆಚ್ಚು ಬರುವುದರಿಂದ ಆ ಪುಸ್ತಕಕ್ಕೆ ಹೆಚ್ಚು ಗ್ರಾಹಕರೂ ಇದ್ದಾರೆ.

ಆ ಪುಸ್ತಕದಂಗಡಿಯ ಮಾಲಕ ಸಾಹಿತ್ಯ ಪ್ರೇಮಿ. ಆತನ ಮಾತುಕತೆಯನ್ನು ಗಮನಿಸಿದರೆ ಅಲ್ಲಿರುವ ಒಳ್ಳೆಯ ಪುಸ್ತಕಗಳನ್ನೆಲ್ಲ ಓದಿರುವ ಲಕ್ಷಣವಿರುವ ಹಾಗೆ ಕಂಡಿತು. ಪುಸ್ತಕಗಳನ್ನು ಹುಡುಕಲು ಸಮಯವಿರಲಿಲ್ಲ. ‘ಇತ್ತೀಚೆಗೆ ನೀವು ಓದಿದ ಯಾವುದಾದರೂ ಒಳ್ಳೆಯ ಪುಸ್ತಕ ಕೊಡಿ ಎಂದೆ. ತಕ್ಷಣ ಮಲಯಾಳಂ ಉಚ್ಚಾರದಲ್ಲಿ ಮುರಗಾಮಿ ನಾವೆಲ್ ತಗೊಳ್ಳಿ ಎಂದರು. ಮನುಷ್ಯನ ನೆರಳು ಅದರಲ್ಲಿ ಬೆಕ್ಕೊಂದು ಮೂಡಿರುವ ಹಾಗೆ ಇರುವ ಮುಖ ಪುಟದ ಮುರಕಾಮಿ ಎಂಬ ಹೆಸರು ದೊಡ್ಡದಾಗಿತ್ತು. ಕಾದಂಬರಿಯ ಹೆಸರು ‘ಕಾಫ್ಕ ಆನ್ ದ ಶೋರ್’. ಕಾಫ್ಕನ ಹೆಸರಿನಲ್ಲೇ ಕಾದಂಬರಿಯೊಂದು ಬಂದಿರುವುದು ರೋಮಾಂಚನವನ್ನುಂಟುಮಾಡಿತು. ಕಾಫ್ಕ್ ಕನ್ನಡದ ಸಾಹಿತ್ಯ ವಲಯಕ್ಕೆ ರಾಘವೇಂದ್ರ ಖಾಸನೀಸರಷ್ಟೇ ಹತ್ತಿರ ಅಷ್ಟೇ ದೂರ.

ಅನಂತಮೂರ್ತಿ, ಡಿ.ಆರ್.ಎನ್., ಲಂಕೇಶ್, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲರು ಮೊದಲಾದವರ ಮೇಲೆ ಕಾಫ್ಕನ ನೆರಳು ಮುರಕಾಮಿಯ ಪುಸ್ತಕದ ಬೆಕ್ಕಿನ ನೆರಳಿನ ಹಾಗೆ ಹಬ್ಬಿದೆ. ನನಗೂ ಕಾಫ್ಕ ವೈಯಕ್ತಿಕವಾಗಿ ಇಷ್ಟ. ಕಾಫ್ಕನ ಮೆಟಮಾರ್ಫಸಿಸ್ ಕತೆಯನ್ನು ಓದಿದ ನನಗೆ ಹೊಟ್ಟೆಯೆಲ್ಲ ತೊಳಸಿದಂತಾಗಿತ್ತು. ಕಥಾ ನಾಯಕ ಗ್ರೆಗೊರಿ ಸಾನ್ಸ್ ಇದ್ದಕ್ಕಿದ್ದಂತೆ ಹುಳುವಾಗುವ ಬಗೆ ನಂತರ ಅಪ್ಪ, ಅಮ್ಮ, ತಂಗಿಯರ ಕಣ್ಣಲ್ಲಿ ಹುಳುವಾಗಿ ಬೆಳೆಯುವ ರೀತಿಎಂಥವರ ವ್ಯಕ್ತಿತ್ವವನ್ನೂ ಕಂಗೆಡಿಸಿಬಿಡುತ್ತದೆ. ಕಾಫ್ಕನನ್ನು ವ್ಯಕ್ತಿವಾದಿಯೆಂತಲೂ ಅಸ್ತಿತ್ವವಾದದ ಪ್ರತಿಪಾದಕ ನೆಂದು ಗುರುತಿಸುತ್ತಾರೆ. ಆದರೆ ನನಗೆ ಅವನೊಬ್ಬ ಕತೆಗಾರ ಮಾತ್ರ. ಮನುಷ್ಯನ ಬದುಕಿನ ಅಭದ್ರತೆಯನ್ನು ಅದು ಹೊಯ್ದಾಡುವ ರೀತಿಯನ್ನು ಇದ್ದಕ್ಕಿದ್ದಂತೆ ಬದಲಾಗುವ ಪರಿಸ್ಥಿತಿಗಳಲ್ಲಿ ವ್ಯಕ್ತಿತ್ವ ತಲುಪುವ ಹತಾಶೆಯ ಒಂಟಿತನದ ಹಂತವನ್ನು ಕತೆಗಳಲ್ಲಿ ಕಟ್ಟುತ್ತಾನೆ. ಜರ್ಮನಿಯಲ್ಲಿ ಹುಟ್ಟಿದ ಕಾಫ್ಕ ಭಾರತ ಈಗ ಕಾಣುತ್ತಿರುವ ದುರಂತವನ್ನು ಅಂದೇ ಓದಿದವನಂತೆ ಬರೆಯುತ್ತಾನೆ.

ನವ್ಯ ಚಳವಳಿ ಬಲವಾಗಿದ್ದ ಕಾಲದಲ್ಲಿ ನಿಜವಾದ ವ್ಯಕ್ತಿವಾದ ಫ್ಯಾಶಿಸಂ, ಸ್ವಾತಂತ್ರ್ಯದ ಹರಣದ ಬಗ್ಗೆ ನಮ್ಮ ಲೇಖಕರಿಗೆ ಮತ್ತು ವಿಮರ್ಶಕರಿಗೆ ಓದಿ ಗೊತ್ತಿತ್ತೇ ವಿನಃ ಅನುಭವವಾಗಿದ್ದು ಕಡಿಮೆ. ನಮ್ಮ ಕಣ್ಣೆದುರಿಗೇ ಅನುಭವಗಳು ಘಟಿಸುತ್ತಿವೆ. ಇದ್ದಕ್ಕಿದ್ದಂತೆ ಗೌರಿಯ ಹತ್ಯೆಯಾಗುವುದು, ಮೂವತ್ತಾರು ಮಾವೋವಾದಿಗಳನ್ನು ಎನ್‌ಕೌಂಟರ್ ಮಾಡಿ ಕೊಲ್ಲುವ ಪೋಲಿಸರು, ಬೈಕಿನಲ್ಲಿ ಹೋಗುಹೋಗುತ್ತಲೇ ಸುಮ್ಮನೆ ಮನೆಗೆ ನಡೆದುಹೋಗುತ್ತಿರುವ ಹೆಣ್ಣುಮಗಳನ್ನು ಝಾಡಿಸಿ ಒದೆಯುವುದು, ಹಾಲುಗಲ್ಲದ ಬುಡಕಟ್ಟು ಜನಾಂಗದ ಬಾಲಕಿಯನ್ನು ಸಿದ್ಧಾಂತದ ಹೆಸರಿನಲ್ಲಿ ಹತ್ಯೆ ಗೈಯುವುದು, ದಲಿತರನ್ನು ದನಕ್ಕೆ ಒಡೆದಂತೆ ಹೊಡೆಯುವುದು - ಇವೆಲ್ಲ ಕಣ್ಣೆದುರಿಗೇ ನಡೆಯುತ್ತಿರುವ ಕೃತ್ಯಗಳು. ಪ್ರಜಾಪ್ರಭುತ್ವ, ಸಂವಿಧಾನ, ನ್ಯಾಯಾಂಗ, ಕಣ್ಮರೆಯಾದಂತೆನಿಸಿ ಫ್ಯಾಸಿಸ್ಟ್ ಗೂಂಡಾಗಳು ತಮ್ಮ ರಕ್ತ ಪೀಪಾಸು ಕೈಗಳನ್ನು ಚಾಚಿ ಇಡೀ ಭಾರತವನ್ನು ಅಪ್ಪಿ ಹಿಡಿದಿರುವ ಗಳಿಗೆಗಳಲ್ಲಿ ಯಾವನಾದರೂ ಸೂಕ್ಷ್ಮ ಜೀವಿ, ದೇಶಪ್ರೇಮಿ, ಕಾಫ್ಕನ ಕತೆಯ ಗ್ರೆಗರಿ ಸ್ಯಾಮ್ಸನ್ ತಾನೇ ಎಂದು ಭಾವಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಎರಡು ಪೀಳಿಗೆಗಳಿಂದ ಆರಾಧಿಸಲ್ಪಡುತ್ತಿರುವ ಕಾಫ್ಕನ ಹೆಸರಲ್ಲಿ ಈ ಮುರಕಾಮಿ ಎಂತಹ ಕಾದಂಬರಿ ಬರೆದಿರಬಹುದು, ಇವನಾರು, ಎಲ್ಲಿದ್ದ, ಯಾವಾಗ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಸೇರಿಕೊಂಡ? ಅಮೆರಿಕನ್ ಮತ್ತು ಯುರೋಪಿನ ವಸಾಹತುಶಾಹಿ ಪ್ರಜ್ಞೆಯೊಳಗೆ ಬಂಧಿಯಾದ ನಮಗೆ ಇವನೇಕೆ ಸಿಗಲಿಲ್ಲ ಎಂಬ ಪ್ರಶ್ನೆಗಳು ಒಂದೊಂದಾಗಿ ಮೂಡತೊಡಗಿದವು. ಮುಖಪುಟವೇನೋ ತೆರೆದು ಓದಲು ಪ್ರಚೋದಿಸಿದರೂ ಗಾತ್ರ ನೋಡಿ ಸ್ವಲ್ಪ ಹಿಂಜರಿದೆ. ಆ ಪುಸ್ತಕ ಇನ್ನು ಅರ್ಧ ಓದಿದ್ದೇನೆ. ಅಷ್ಟರೊಳಗೆ ಈ ಮುರಕಾಮಿಯ ಬಗ್ಗೆ ತೀವ್ರ ಅಭಿಮಾನ ಮತ್ತು ಪ್ರೀತಿ ಉಕ್ಕಿ ಬರೆಯಲೇಬೇಕು ಎನಿಸಿತು. ಗೂಗಲ್ ಸರ್ಚ್ ಮಾಡಿದಾಗ ಅವನ ಬಗ್ಗೆ ನೂರಾರು ವೆಬ್‌ಸೈಟ್‌ಗಳಿರುವುದು ಗೊತ್ತಾಯಿತು. ಯಾವುದೇ ಲೇಖಕನ ಬಗೆಗೆ ಇರದ ಆಶ್ಚರ್ಯಕಾರಿ ವಿಚಾರಗಳು ಆತನ ಬಗ್ಗೆ ಇದ್ದವು. ಅದನ್ನೆಲ್ಲ ಗ್ರಹಿಸಿ

ಅವನ ಬಗ್ಗೆ ಹೀಗೆ ಹೇಳಬಹುದು:
ಮುರಕಾಮಿಯ ಅಪ್ಪ ಅಮ್ಮ ಇಬ್ಬರೂ ಸಾಹಿತಿಗಳು. ಟೋಕಿಯೋದಲ್ಲಿ ಸಾಹಿತ್ಯ ಪ್ರಾಧ್ಯಾಪಕರಾಗಿದ್ದರು. ಮುರಕಾಮಿಗೆ ಅದರಲ್ಲಿ ಅಷ್ಟೇನು ಆಸಕ್ತಿ ಇರಲಿಲ್ಲ. ತನ್ನ ಓದು ಮುಗಿದ ಮೇಲೆ ರೆಕಾರ್ಡ್ ಸ್ಟೋರ್ ಇಟ್ಟುಕೊಂಡಿದ್ದ. ಒಂದು ದಿನ ಬೇಸ್ ಬಾಲ್ ಮ್ಯಾಚ್ ನೋಡಲು ಹೋಗಿದ್ದ. ಆಟಗಾರನೊಬ್ಬ ತನ್ನ ಬ್ಯಾಟಿನಿಂದ ಬೇಸ್‌ಬಾಲ್‌ಗೆ ಕನೆಕ್ಟ್ ಮಾಡುವ ರೀತಿ ನೋಡಿ ಮುರಕಾಮಿಗೆ ಮಿಂಚು ಹೊಳೆದಂತಾಯಿತು. ಆ ಕ್ಷಣವೇ ನಾನೇಕೆ ಕಾದಂಬರಿಕಾರನಾಗಬಾರದೆಂದು ನಿರ್ಧರಿಸಿದ. ತಾನು ನಡೆಸುತ್ತಿದ್ದ ಅಂಗಡಿ ಬಂದ್ ಮಾಡಿ ಬರವಣಿಗೆಯೇ ತನ್ನ ಜೀವನ ಎಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡ. 29ನೇ ವಯಸ್ಸಿಗೆ ಬರವಣಿಗೆ ಶುರುಮಾಡಿದವನು ಇನ್ನೂ ನಿಲ್ಲಿಸಿಲ್ಲ. ಬರವಣಿಗೆಯನ್ನು ಕಾರ್ಮಿಕರ ರೀತಿ ಭಾವಿಸಿದ ಲೇಖಕ ಇವನೊಬ್ಬನೇ ಇರಬೇಕು. ಏಕೆಂದರೆ ದಿನಾ 9 ಗಂಟೆಗೆ ಬಂದು ಕಚೇರಿಯಲ್ಲಿ ಕೂರುತ್ತಾನೆ. ಸಂಜೆ 6ರವರೆಗೆ ಕುಳಿತು 10 ಪುಟಗಳನ್ನು ಬರೆಯುತ್ತಾನೆ. ಆನಂತರ ಕಿಲೋಮೀಟರ್‌ಗಟ್ಟಲೆ ಓಡುವುದು, ಆಟವಾಡುವುದು ಮತ್ತು ತನ್ನ ವೈಯಕ್ತಿಕ ಬದುಕು. ಮಾರನೆ ದಿನ ಯಥಾ ಪ್ರಕಾರ. ಇದು ಕಳೆದ ಮೂರ್ನಾಲ್ಕು ದಶಕಗಳ ಆತನ ದಿನಚರಿ.

ಮುರಕಾಮಿ ಜಪಾನಿ ಭಾಷೆಯಲ್ಲೇ ಬರೆಯುತ್ತಿದ್ದ. ತಾನೇಕೆ ಇಂಗ್ಲಿಷ್‌ನಲ್ಲಿ ಬರೆಯಬಾರದು ಎನಿಸಿತು. ಆದರೆ ಕಾದಂಬರಿ ಬರೆಯುವಷ್ಟು ಇಂಗ್ಲಿಷ್ ಬರುತ್ತಿರಲಿಲ್ಲ. ಆದರೂ ಕಾದಂಬರಿಯ ಕೆಲವು ಪುಟಗಳನ್ನು ಇಂಗ್ಲಿಷ್‌ನಲ್ಲಿ ಬರೆದ. ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಇಷ್ಟೇ ಇಂಗ್ಲಿಷ್ ಸಾಕು ಎನಿಸಿತು. ಮುಂದೆ ಇಂಗ್ಲಿಷ್‌ನಲ್ಲಿ ಹೆಚ್ಚು ಬರೆದನೋ ಇಲ್ಲವೋ ಅದರ ವಿವರಗಳು ನನಗೆ ದೊರೆತಿಲ್ಲ. ಆದರೆ ಇಂಗ್ಲಿಷ್‌ನಲ್ಲಿ ಏಕೆ ಬರೆದೆ ಎಂದು ಕೇಳಿದ್ದಕ್ಕೆ ಹೇಳಿದ ಮಾತೊಂದು ನನಗೆ ಅಚ್ಚರಿಯನ್ನುಂಟುಮಾಡಿತು. ತನ್ನ ಭಾಷೆ ಇಂಗ್ಲಿಷ್‌ನಲ್ಲಿ ಹೇಗೆ ಕೇಳಿಸುತ್ತದೆ ಎಂದು ತಿಳಿದುಕೊಳ್ಳಲು ಬರೆದೆ ಎನ್ನುತ್ತಾನೆ.

ಎಲ್ಲವೂ ಡಿಜಿಟಲ್‌ಮಯವಾಗಿರುವ ಜಪಾನ್‌ನಲ್ಲಿ ಇಂದಿಗೂ ಸಾಹಿತ್ಯದ ಸೂಪರ್‌ಸ್ಟಾರ್. ನಮ್ಮ ಜನರು ತಮ್ಮ ನೆಚ್ಚಿನ ನಾಯಕ ನಟನ ಸಿನೆಮಾ ರಿಲೀಸ್ ಆಗಬೇಕೆಂದಿರುವ ಹಿಂದಿನ ದಿನ ಮಧ್ಯ ರಾತ್ರಿ ಹೋಗಿ ಸರದಿಯಲ್ಲಿ ನಿಂತು ಟಿಕೆಟ್ ಕೊಳ್ಳುತ್ತಾರೆ. ಅಥವಾ ಆ ರಾತ್ರಿಯೇ ಸಿನೆಮಾ ಹಾಕಿಸಿ ನೋಡಿ ಖುಷಿಪಡುತ್ತಾರೆ. ಮುರಕಾಮಿಯ ಪುಸ್ತಕದ ಬಿಡುಗಡೆಯ ಹಿಂದಿನ ಮಧ್ಯರಾತ್ರಿಯೇ ಬುಕ್‌ಸ್ಟಾಲ್‌ಗಳನ್ನು ತೆರೆಯಲಾಗುತ್ತದೆ. ಸರದಿ ಸಾಲಿನಲ್ಲಿ ನಿಂತು ಹೊಸ ಪುಸ್ತಕವನ್ನು ಕೊಂಡು ಕೆಫೆಗಳಿಗೆ ಮತ್ತು ಬಿಯರ್ ಸ್ಟಾಲ್‌ಗಳಲ್ಲಿ ಹೋಗಿ ಓದುತ್ತಾರೆ. ಇಂತಹ ಬರಹಗಾರನೊಬ್ಬನನ್ನು ನೋಡಲು ನ್ಯೂಯಾರ್ಕ್ ಟೈಮ್ಸ್ ನ ಪತ್ರಕರ್ತರು, ಯುರೋಪಿಯನ್ನರು ಟೋಕಿಯೋಗೆ ಹೋಗುತ್ತಾರೆ. ಟೋಕಿಯೊ ನಗರದ ಹೊರವಲಯದಲ್ಲಿ ಅವನ ಮನೆಯಿದೆ. ನೀವು ಜಪಾನಿಗೆ ಹೋದರೆ ಮುರುಕಾಮಿ ಯನ್ನು ನೋಡಿ ಬರಬಹುದು, ಪ್ರಯತ್ನಿಸಿ.

Writer - ಡಾ. ಸಿ. ಜಿ. ಲಕ್ಷ್ಮೀ ಪತಿ

contributor

Editor - ಡಾ. ಸಿ. ಜಿ. ಲಕ್ಷ್ಮೀ ಪತಿ

contributor

Similar News