ರಾಜ್ಯ ವಿಧಾನಸಭೆ ಚುನಾವಣೆ: ಪೊಲೀಸರಿಗೆ ವಿಶೇಷ ಆಹಾರ ಭತ್ಯೆ

Update: 2018-05-06 15:38 GMT

ಬೆಂಗಳೂರು, ಮೇ.6: ರಾಜ್ಯ ವಿಧಾನಸಭೆ ಚುನಾವಣೆ ಕಾರ್ಯಕ್ಕೆ ನಿಯೋಜಿಸಲಾಗಿರುವ ಪೊಲೀಸ್ ಸಿಬ್ಬಂದಿಗಳಿಗೆ ಒಂದು ದಿನಕ್ಕೆ 150 ರೂ.ಗಳ ವಿಶೇಷ ಆಹಾರ ಭತ್ಯೆಯನ್ನು ಸರಕಾರ ಮಂಜೂರು ಮಾಡಿ ಆದೇಶಿಸಿದೆ.

ಕೇಂದ್ರ ಚುನಾವಣಾ ಆಯೋಗ ಸೂಚಿಸಿರುವಂತೆ ಚುನಾವಣೆಯ ಹಿಂದಿನ ದಿನ, ಮತದಾನದ ದಿನ, ಚುನಾವಣೆ ನಂತರದ ದಿನ ಹಾಗೂ ಮತ ಎಣಿಕೆ ದಿನ ಸೇರಿದಂತೆ ಒಟ್ಟು ನಾಲ್ಕು ದಿನಗಳ ಕಾಲ ಪೊಲೀಸ್ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ 150 ರೂ. ಆಹಾರ ಭತ್ಯೆ ನೀಡಲಾಗುತ್ತದೆ.

ಈ ನಾಲ್ಕು ದಿನಗಳಂದು ಕರ್ತವ್ಯಕ್ಕೆ ನಿಯೋಜಿತವಾಗುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಲಾಗುತ್ತಿದ್ದ 100 ರೂ. ಆಹಾರ ಭತ್ಯೆಯನ್ನು 500 ರೂ.ಗಳಿಗೆ ಹೆಚ್ಚಿಸುವಂತೆ ಪೊಲೀಸ್ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರಕಾರ ಈ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News