ಕಸಾಪ ಪದಾಧಿಕಾರಿಗಳ ಆಯ್ಕೆಗೆ ಪರ್ಯಾಯ ಚಿಂತನೆ ಅಗತ್ಯವಿದೆ: ಎಚ್.ಎಸ್. ದೊರೆಸ್ವಾಮಿ
ಬೆಂಗಳೂರು, ಮೇ.6: ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಆಯ್ಕೆಗೆ ಪರ್ಯಾಯ ಚಿಂತನೆ ಅಗತ್ಯವಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅಭಿಪ್ರಾಯಿಸಿದ್ದಾರೆ.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ 104ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಪರಿಷತ್ತಿನ ಪದಾಧಿಕಾರಿಗಳ ಆಯ್ಕೆ ಆಗುವುದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದವರ ಬಗ್ಗೆ ಕೇಳಿದ್ದೇನೆ. ಹೀಗಾಗಿ, ಪರಿಷತ್ತಿನ ಪದಾಧಿಕಾರಿಗಳ ಆಯ್ಕೆಗೆ ಪರ್ಯಾಯ ವ್ಯವಸ್ಥೆಯಾಗಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಒಂದು ಸರಸ್ವತಿ ಮಂದಿರ. ಇದನ್ನು ಅಪವಿತ್ರಗೊಳಿಸುವ ಕೆಲಸ ಆಗಬಾರದು. ಈ ಸಂಸ್ಥೆ ಕನ್ನಡಿಗರೆಲ್ಲರ ಸೊತ್ತು. ಇಲ್ಲಿ ಎಲ್ಲ ಕನ್ನಡಿಗರಿಗೂ ಸಮಾನ ಸ್ಥಾನಮಾನ ಕಲ್ಪಿಸಬೇಕು ಎಂದ ಅವರು ಪ್ರತಿಯೊಬ್ಬ ಕನ್ನಡಿಗನೂ ಸಹ ಪರಿಷತ್‌ನ ಸದಸ್ಯತ್ವ ಪಡೆಯಬೇಕೆಂದು ಅವರು ತಿಳಿಸಿದರು.
ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಸರಕಾರಿ ಶಾಲೆಗಳ ಪರಿಸ್ಥಿತಿ ಹದಗೆಟ್ಟಿರುವುದೇ ಇಂದಿನ ಕನ್ನಡದ ಸ್ಥಿತಿ ಆತಂಕಕಾರಿಯಾಗಿದೆ. ಬಹುತೇಕ ಹೋರಾಟಗಾರರು ಕನ್ನಡ ಶಾಲೆ ಉಳಿಯಬೇಕು ಎಂದು ಹೋರಾಟ ನಡೆಸುತ್ತಾರೆ. ಆದರೆ, ಶಾಲೆಗಳನ್ನು ಉದ್ಧಾರ ಮಾಡಬೇಕು ಎಂದು ಯೋಚಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಾದರು ಶಾಸಕರಾದವರು ಕನಿಷ್ಠ 10 ಸರಕಾರಿ ಶಾಲೆಗಳನ್ನಾದರೂ ಅಭಿವೃದ್ಧಿ ಮಾಡಬೇಕೆಂಬ ಸಂಕಲ್ಪ ತೊಟ್ಟರೆ 5 ವರ್ಷಗಳಲ್ಲಿ ರಾಜ್ಯದ ಎಲ್ಲ ಶಾಲೆಗಳ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್, ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಡಾ.ರಾಜಶೇಖರ ಹತಗುಂದಿ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಪರ್ತಕರ್ತ ಪದ್ಮರಾಜ್ ದಂಡಾವತಿ, ಲೇಖಕ ಶೂದ್ರ ಶ್ರೀನಿವಾಸ್ ಸೇರಿ ಪ್ರಮುಖರಿದ್ದರು.