ಆರ್‌ಸಿಬಿಗೆ ಇಂದು ಸನ್‌ರೈಸರ್ಸ್ ಸವಾಲು

Update: 2018-05-06 18:31 GMT

ಹೈದರಾಬಾದ್, ಮೇ 6: ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೋಮವಾರ ಇಲ್ಲಿನ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್‌ನ 39ನೇ ಪಂದ್ಯದಲ್ಲಿ ಗೆಲುವಿಗಾಗಿ ಪರದಾಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಹೈದರಾಬಾದ್ ಈ ಪಂದ್ಯವನ್ನು ಗೆಲ್ಲುವುದರೊಂದಿಗೆ ಅಗ್ರ ಸ್ಥಾನವನ್ನು ಭದ್ರಪಡಿಸಿ ಕೊಳ್ಳಲು ನೋಡುತ್ತಿದ್ದರೆ, ಆರ್‌ಸಿಬಿ ಟೂರ್ನಿಯಲ್ಲಿ ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ಹೋರಾಡಲಿದೆ.

 ತನ್ನ ಅಪೂರ್ವ ಬೌಲಿಂಗ್ ದಾಳಿಯ ಮೂಲಕ ಕಡಿಮೆ ಸ್ಕೋರ್ ಗಳಿಸಿದರೂ ಗೆಲುವು ಸಾಧಿಸುವ ಕಲೆ ಸಿದ್ದಿಸಿಕೊಂಡಿರುವ ಹೈದರಾಬಾದ್ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಪಂದ್ಯದಲ್ಲಿ ಯಶಸ್ವಿಯಾಗಿ ರನ್ ಬೆನ್ನಟ್ಟುವ ಮೂಲಕ ಏಳು ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಡೆಲ್ಲಿ ವಿರುದ್ಧ 164 ರನ್ ಗುರಿಯನ್ನು ಬೆನ್ನಟ್ಟಿದ್ದರೂ ಹೈದರಾಬಾದ್‌ನ ಬ್ಯಾಟಿಂಗ್ ವಿಭಾಗ ಅಸ್ಥಿರ ಪ್ರದರ್ಶನ ನೀಡುತ್ತಿದೆ. ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ದಾಂಡಿಗ ಅಲೆಕ್ಸ್ ಹೇಲ್ಸ್ ಅವರು ಶಿಖರ್ ಧವನ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ್ದರು. ನಾಯಕ ಕೇನ್ ವಿಲಿಯಮ್ಸನ್ ಈ ವರ್ಷದ ಐಪಿಎಲ್‌ನಲ್ಲಿ ಗರಿಷ್ಠ ರನ್ ಗಳಿಸಿದ ದಾಂಡಿಗರ ಪೈಕಿ ಓರ್ವರಾಗಿದ್ದಾರೆ. ಮತ್ತೊಂದೆಡೆ, ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶರಣಾಗಿ ನಿರಾಸೆ ಅನುಭವಿಸಿದೆ. ಪ್ಲೇ-ಆಫ್ ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

9 ಪಂದ್ಯಗಳಲ್ಲಿ ಕೇವಲ 3ರಲ್ಲಿ ಜಯ ಸಾಧಿಸಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

 ತವರು ಮೈದಾನದಲ್ಲಿ ಆಡಲಿರುವ ಹೈದರಾಬಾದ್ ತಂಡ ಪಂದ್ಯ ಗೆಲ್ಲುವ ಫೇವರಿಟ್ ಆಗಿದೆ. ಐಪಿಎಲ್ ಟೂರ್ನಿಯುದ್ದಕ್ಕೂ ಹೈದರಾಬಾದ್ ತಂಡದ ಆಟಗಾರರು ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆಯುತ್ತಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಪಡೆಗೆ ಹೈದರಾಬಾದ್‌ನ ಗೆಲುವಿನ ಓಟವನ್ನು ತಡೆಯುವುದು ಕಠಿಣ ಸವಾಲಾಗಿದೆ.

ಆರ್‌ಸಿಬಿಗೆ ಬೌಲಿಂಗ್ ವೈಫಲ್ಯ ಒಂದು ದೊಡ್ಡ ತಲೆನೋವಾಗಿದೆ. ಆದರೆ, ಚೆನ್ನೈ ವಿರುದ್ಧ ಪಂದ್ಯದಲ್ಲಿ ಕೊಹ್ಲಿ, ಎಬಿಡಿ ವಿಲಿಯರ್ಸ್ ಹಾಗೂ ಬ್ರೆಂಡನ್ ಮೆಕಲಮ್ ಬೆನ್ನುಬೆನ್ನಿಗೆ ಔಟಾಗಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರು. ಈ ಮೂವರು ಆಟಗಾರರು ಒಗ್ಗಟ್ಟಿನ ಪ್ರದರ್ಶನ ನೀಡಿದರೆ ಆರ್‌ಸಿಬಿ ದೊಡ್ಡ ಮೊತ್ತ ಕಲೆಹಾಕಬಹುದು. ಕಳಪೆ ಫೀಲ್ಡಿಂಗ್ ಆರ್‌ಸಿಬಿಯ ಮತ್ತೊಂದು ಸಮಸ್ಯೆಯಾಗಿದೆ. ಚೆನ್ನೈ ವಿರುದ್ಧ ಪಂದ್ಯದಲ್ಲಿ ಡ್ವೇಯ್ನೆ ಬ್ರಾವೊ ಹಾಗೂ ಎಂ.ಎಸ್. ಧೋನಿ ಕ್ಯಾಚ್‌ನ್ನು ಕೈಚೆಲ್ಲಿರುವುದು ತುಂಬಾ ದುಬಾರಿಯಾಗಿ ಪರಿಣಮಿಸಿತು.

ಎಲ್ಲ ತಂಡಗಳ ದಾಂಡಿಗರಿಗೆ ತಲೆನೋವಾಗಿ ಪರಿಣಮಿಸಿರುವ ಹೈದರಾಬಾದ್ ಬೌಲರ್‌ಗಳು ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್‌ಗೆ ಸವಾಲಾಗುವ ಸಾಧ್ಯತೆಯಿದೆ. ವೇಗದ ಬೌಲರ್ ಭುವನೇಶ್ವರ ಕುಮಾರ್ ವಾಪಸಾಗುತ್ತಿರುವುದು ಹೈದರಾಬಾದ್ ವೇಗದ ದಾಳಿಯನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ.

ಸ್ಪಿನ್ನರ್ ರಶೀದ್ ಖಾನ್, ವೇಗದ ಬೌಲರ್‌ಗಳಾದ ಸಿದ್ದಾರ್ಥ್ ಕೌಲ್ ಹಾಗೂ ಸಂದೀಪ್ ಶರ್ಮ, ಸ್ಪಿನ್ ಆಲ್‌ರೌಂಡರ್‌ಗಳಾದ ಶಾಕಿಬ್ ಅಲ್ ಹಸನ್ ಎದುರಾಳಿ ತಂಡಕ್ಕೆ ಸವಾಲಾಗಿ ಪರಿಣಮಿಸುತ್ತಿದ್ದಾರೆ.

ಆರ್‌ಸಿಬಿಯ ದಿಗ್ಗಜ ಆಟಗಾರರು ಸಿಡಿದೇಳಲು ವಿಫಲರಾಗಿದ್ದಾರೆ. ಪಾರ್ಥಿವ್ ಪಟೇಲ್(ಚೆನ್ನೈ ವಿರುದ್ಧ 53 ರನ್) ಹಾಗೂ ಬ್ರೆಂಡನ್ ಮೆಕಲಮ್, ಮನ್‌ದೀಪ್ ಸಿಂಗ್ ತಂಡಕ್ಕೆ ಆಸರೆಯಾಗುವ ಅಗತ್ಯವಿದೆ.

ಹೈದರಾಬಾದ್ ಸ್ಟೇಡಿಯಂನ ಪಿಚ್ ಮಂದಗತಿಯಲ್ಲಿ ವರ್ತಿಸುವ ಸಾಧ್ಯತೆಯಿದೆ. ಸ್ಪಿನ್ ಬೌಲರ್‌ಗಳ ಪಾತ್ರ ಅತ್ಯಂತ ಮುಖ್ಯವಾಗಿದೆ. ವೇಗದ ಬೌಲರ್‌ಗಳು ಯಶಸ್ಸು ಕಾಣಬೇಕಾದರೆ ಬೌಲಿಂಗ್‌ನಲ್ಲಿ ವಿಭಿನ್ನತೆ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. 160ಕ್ಕಿಂತ ಹೆಚ್ಚು ರನ್ ಗಳಿಸುವ ತಂಡ ಗೆಲ್ಲುವ ಸಾಧ್ಯತೆಯಿದೆ. ಟಾಸ್ ಜಯಿಸುವ ತಂಡ ಮೊದಲು ಬ್ಯಾಟಿಂಗ್ ಮಾಡುವುದಕ್ಕೆ ಆದ್ಯತೆ ನೀಡುವ ಸಾಧ್ಯತೆಯೇ ಅಧಿಕವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News