ಕಥುವಾ ಪ್ರಕರಣದ ವಿಚಾರಣೆಯನ್ನು ಪಠಾಣ್ ಕೋಟ್ ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

Update: 2018-05-07 12:26 GMT

ಹೊಸದಿಲ್ಲಿ,ಮೇ.7: ಕಥುವಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇಂದು ಪಂಜಾಬ್ ರಾಜ್ಯದ ಪಠಾಣಕೋಟ್ ನ್ಯಾಯಾಲಯಕ್ಕೆ  ವರ್ಗಾಯಿಸಿದೆ. ಮುಂದಿನ ವಿಚಾರಣಾ ದಿನಾಂಕವನ್ನು ಜುಲೈ 9ಕ್ಕೆ ನಿಗದಿ ಪಡಿಸಲಾಗಿದೆ. ಈ ಪ್ರಕರಣದ ವಿಚಾರಣೆ ಪ್ರತಿ ದಿನ ನಡೆಯುವುದಲ್ಲದೆ ಕ್ಯಾಮರಾ ಮುಂದೆ ನಡೆಯುವುದು ಎಂದು ನ್ಯಾಯಾಲಯ ತಿಳಿಸಿದೆ.

ಆರೋಪಿಗಳನ್ನು ಪಾಟೀ ಸವಾಲಿಗೊಡ್ಡಲು ಸಾರ್ವಜನಿಕ ಅಭಿಯೋಜಕರೊಬ್ಬರನ್ನು ನೇಮಿಸಲು ನ್ಯಾಯಾಲಯವು ಜಮ್ಮು ಮತ್ತು ಕಾಶ್ಮೀರ ಸರಕಾರಕ್ಕೆ ಅನುಮತಿಸಿದೆ. ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ, ವಕೀಲರಿಗೆ ಹಾಗೂ ಸಾಕ್ಷಿಗಳಿಗೆ ಭದ್ರತೆಯೊದಗಿಸುವಂತೆಯೂ ನ್ಯಾಯಾಲಯ ಸರಕಾರಕ್ಕೆ ಹೇಳಿದೆ.

ಪಠಾಣ್ ಕೋಟ್ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಯನ್ನು ವರ್ಗಾಯಿಸುವ ಮೊದಲು ನ್ಯಾಯಾಲಯ ಉಧಂಪುರ, ಜಮ್ಮು, ರಂಬನ್ ಹಾಗೂ ಸಾಂಭಾ ನ್ಯಾಯಾಲಯಗಳಿಗೆ ವರ್ಗಾಯಿಸುವ ಕುರಿತಾಗಿಯೂ ಪರಿಶೀಲಿಸಿತ್ತು. ರಂಬನ್ ಹೊರತುಪಡಿಸಿ ಇತರ ಸ್ಥಳಗಳು ಸಂತ್ರಸ್ತೆಯ ಕುಟುಂಬಕ್ಕೆ ಒಪ್ಪಿಗೆಯಾಗಿಲ್ಲ. ಆದರೆ ರಂಬನ್ ನಲ್ಲಿ ಇತರ ಧರ್ಮದ ಜನರ ಜನಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿ ಬೇಡವೆಂದು ಆರೋಪಿಗಳು ಹೇಳಿದರು.

ಈ ಪ್ರಕರಣದ ವಿಚಾರಣೆಯನ್ನು ಪಠಾಣ್ ಕೋಟ್ ನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರೇ ನಡೆಸಬೇಕೆಂದೂ ಅದನ್ನು ಬೇರೆ ನ್ಯಾಯಾಧಶೀಶರಿಗೆ ಹಸ್ತಾಂತರಿಸಬಾರದೆಂದೂ ನ್ಯಾಯಾಲಯ ಹೇಳಿದೆ. ಪ್ರಕರಣದ ವಿಚಾರಣೆಯಲ್ಲಿನ ಪ್ರಗತಿಯನ್ನು ಅವಲೋಕಿಸುವುದಾಗಿಯೂ ಅದು ತಿಳಿಸಿದೆ.

ಸಂತ್ರಸ್ತೆಯ ತಂದೆ ವಿಚಾರಣೆಯನ್ನು ಚಂಡೀಗಢಕ್ಕೆ ವರ್ಗಾಯಿಸುವಂತೆ ಕೋರಿದ್ದರೆ ಆರೋಪಿಗಳು ಪೊಲೀಸರಿಂದ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದಿದ್ದರು.

ನ್ಯಾಯಯುತ ವಿಚಾರಣೆ ನಡೆಯುತ್ತಿಲ್ಲ ಎಂದು ಸಂಶಯ ಬಂದರೆ ವಿಚಾರಣೆಯನ್ನು ಬೇರೆಡೆಗೆ ವರ್ಗಾಯಿಸಲಾಗುವುದೆಂದು ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿತ್ತು.

ಜಮ್ಮು ಕ್ರೈಂ ಬ್ರ್ಯಾಂಚ್ ಪೊಲೀಸರು ಈ ಪ್ರಕರಣದ ವಿಚರಣೆ ನಡೆಸಿ ಏಳು ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಪ್ರಾಪ್ತನೊಬ್ಬನ ವಿರುದ್ಧ ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಮಗಳಿಗೆ ನ್ಯಾಯ ಒದಗಿಸಲು ಜೀವನವನ್ನೇ ಮುಡಿಪಾಗಿಡುವೆ: ಸಂತ್ರಸ್ತ ಬಾಲಕಿಯ ತಂದೆ

ನ್ಯಾಯಾಂಗದಲ್ಲಿ ನನಗೆ ಪೂರ್ಣ ನಂಬಿಕೆಯಿದೆ. ನನ್ನ ಇಡೀ ಜೀವನವನ್ನೇ ನನ್ನ ಮಗಳಿಗೆ ನ್ಯಾಯ ಒದಗಿಸಲು ಮುಡಿಪಾಗಿಟ್ಟಿದ್ದೇನೆ ಎಂದು ಕಥುವಾದಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಗೈಯ್ಯಲ್ಪಟ್ಟ ಬಾಲಕಿಯ ತಂದೆ ತಿಳಿಸಿದ್ದಾರೆ. ಈ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರದಿಂದ ಹೊರಗೆ ನಡೆಸಬೇಕು ಹಾಗೂ ಇದರ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮೃತಳ ತಂದೆ ಮನವಿ ಮಾಡಿದ್ದರು.

ನನಗೆ ಪೊಲೀಸ್ ತನಿಖೆ ತೃಪ್ತಿ ನೀಡಿದೆ. ಮಗಳಿಗೆ ನ್ಯಾಯ ಸಿಗುವವರೆಗೂ ನಾನು ವಿಶ್ರಮಿಸುವುದಿಲ್ಲ. ಇಂಥ ಭೀಕರ ಕೃತ್ಯ ನಡೆಸಿದ ಅಪರಾಧಿಗಳಿಗೆ ಮಾದರಿಯಾಗುವಂಥ ಶಿಕ್ಷೆಯನ್ನು ವಿಧಿಸಲು ನಾನು ಬಯಸುತ್ತೇನೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News