ತ್ರಿವಳಿ ತಲಾಖ್ ಕುರಿತು ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

Update: 2018-05-07 16:14 GMT

ಬೆಂಗಳೂರು, ಮೇ 7: ತ್ರಿವಳಿ ತಲಾಖ್ ಕುರಿತು ಕಾಂಗ್ರೆಸ್‌ನ ನಿಲುವು ಏನೆಂಬುದನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ಸೋಮವಾರ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್‌ಗೂ ಧರ್ಮಕ್ಕೂ ಸಂಬಂಧವಿಲ್ಲ. ಮಹಿಳೆಯರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಹಾಗೂ ಲಿಂಗಸಮಾನತೆ ಉದ್ದೇಶದಿಂದ ತ್ರಿವಳಿ ತಲಾಖ್ ಪದ್ದತಿಯನ್ನು ನಿಷೇಧಿಸಿ ಈ ಕುರಿತು ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಲಾಗಿದೆ.

ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಬೇಕಾಗಿದೆ. ವಿಶ್ವದ ಅನೇಕ ದೇಶಗಳಲ್ಲಿ ಮುಖ್ಯವಾಗಿ ಮುಸ್ಲಿಂ ರಾಷ್ಟ್ರಗಳಲ್ಲೆ ತ್ರಿವಳಿ ತಲಾಖ್ ನಿಷೇಧಿಸಲಾಗಿದೆ. ಕೆಲ ದೇಶಗಳಲ್ಲಿ ತ್ರಿವಳಿ ತಲಾಖ್ ಅಪರಾಧವಾಗಿದೆ. ಹೀಗಾಗಿ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಒಂದೇ ಸರಕಾರ ಅಗತ್ಯ: ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಕರ್ನಾಟಕ ರಾಜ್ಯವನ್ನು ಮುಂಚೂಣಿಗೆ ಕೊಂಡೊಯ್ಯಲು ಎರಡು ಎಂಜಿನ್ ವಾಹನ ಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಹೇಳಿದರು.

ಲಕ್ಷಾಂತರ ಜನರಿಗೆ ಸಾವಿರಾರು ಕೋಟಿ ರೂ.ವಂಚಿಸಿರುವ ಕ್ಯು-ಐ ಕಂಪೆನಿಯ ವಿಜಯ್ ಈಶ್ವರನ್ ಯಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದ ರವಿಶಂಕರ್ ಪ್ರಸಾದ್, ರಾಜ್ಯದಲ್ಲಿ ಎಲ್ಲ ಕಡೆಯಲ್ಲಿ ಬಿಜೆಪಿ ಅಲೆ ಇದ್ದು, ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಐಟಿ ಉದ್ಯಮವನ್ನು ಸಣ್ಣ ನಗರ ಪಟ್ಟಣಗಳಿಗೂ ವಿಸ್ತರಿಸುವ ಉದ್ದೇಶದಿಂದ 22ರಾಜ್ಯಗಳಲ್ಲಿ 82 ಬಿಪಿಓ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದ ಅವರು, ಐಟಿ ಉದ್ಯಮ ಪ್ರಗತಿಗೆ ಮೂಲಸೌಕರ್ಯ ಅತಿ ಮುಖ್ಯ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News