ಬೆಂಗಳೂರು ವಿಭಜನೆಗೆ ಅವಕಾಶ ನೀಡುವುದಿಲ್ಲ: ಆರ್.ಅಶೋಕ್
ಬೆಂಗಳೂರು, ಮೇ 8: ಬೆಂಗಳೂರು ವಿಭಜನೆಗೆ ಯಾವುದೆ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.
ಮಂಗಳವಾರ ನಗರದ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಬೆಂಗಳೂರು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡ ನಿರ್ಮಾಣದ ಬೆಂಗಳೂರಿನ ವಿಭಜನೆಗೆ ಕಾಂಗ್ರೆಸ್ ಚಿಂತಿಸುತ್ತಿರುವುದು ಸರಿಯಲ್ಲ. ನನ್ನ ಪ್ರಾಣ ಹೋದರೂ ಬೆಂಗಳೂರು ವಿಭಜನೆಗೆ ಅವಕಾಶ ನೀಡುವುದಿಲ್ಲವೆಂದು ತಿಳಿಸಿದರು.
ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿಯನ್ನು ಮೀರುತ್ತಿದೆ. ಹೀಗಾಗಿ ಆಡಳಿತದ ಸುಧಾರಣೆಗೆ ಬಿಬಿಎಂಪಿಯನ್ನು ಮೂರು ಭಾಗಗಳಾಗಿ ವಿಭಜಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಆಡಳಿತ ಸುಧಾರಣೆಗೆ ಬೆಂಗಳೂರನ್ನು ವಿಭಜಿಸುವ ಅಗತ್ಯವಿಲ್ಲ. ಬಿಬಿಎಂಪಿಗೆ ಐದಕ್ಕಿಂತ ಹೆಚ್ಚು ಆಯುಕ್ತರನ್ನು ನೇಮಿಸಬೇಕು. ಹಾಗೂ ನಗರದ ವಿವಿಧೆಡೆ ಆಯುಕ್ತರ ಕಚೇರಿಯನ್ನು ತೆರೆದು, ಅಲ್ಲಿನ ಕೆಲಸವನ್ನು ಅಲ್ಲಿಯೆ ನಿಭಾಯಿಸುವಂತಹ ಕೆಲಸವಾಗಲಿ. ಅದನ್ನು ಬಿಟ್ಟು ಬೆಂಗಳೂರನ್ನು ವಿಭಜಿಸುವ ಮೂಲಕ ನಗರದ ಅಸ್ಮಿತೆಯನ್ನು ಹಾಳು ಮಾಡಲು ಅವಕಾಶ ನೀಡುವುದಿಲ್ಲವೆಂದು ತಿಳಿಸಿದರು.
ಮೇಯರ್ ಅವಧಿ ವಿಸ್ತರಣೆ: ಬಿಬಿಎಂಪಿಯ ಮೇವರ್ ಅವಧಿ ಕೇವಲ ಒಂದು ವರ್ಷವಿದೆ. ಈ ಅವಧಿಯಲ್ಲಿ ಮೇಯರ್ ಆಡಳಿತವನ್ನು ಅರಿತುಕೊಂಡು ಕೆಲಸ ಪ್ರಾರಂಭ ಮಾಡುವಷ್ಟರಲ್ಲಿಯೆ ಅವರ ಕಾಲಾವಧಿ ಮುಗಿಯಲಿದೆ. ಮುಂದಿನ ಮೇಯರ್ ಆಗಿ ಆಯ್ಕೆಯಾದವರು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ನಾವು ಅಧಿಕಾರಕ್ಕೆ ಬಂದರೆ ಮೇಯರ್ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಬ್ಯಾನರ್, ಪೋಸ್ಟರ್ ನಿಷೇಧ: ಬೆಂಗಳೂರಿನ ಸೌಂದರ್ಯವನ್ನು ಹಾಳು ಮಾಡುತ್ತಿರುವ ಬ್ಯಾನರ್ ಪೋಸ್ಟರ್‌ಗಳನ್ನು ವಿಧಾನಸೌಧದ 5 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಹಂತ, ಹಂತವಾಗಿ ನಿಷೇಧದ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ವಲಸಿಗರಿಗೆ ಎಚ್ಚರಿಕೆ: ಬೆಂಗಳೂರಿನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದೇ ರೀತಿಯಲ್ಲಿ ನೈಜೀರಿಯಾದಿಂದ ಅಕ್ರಮವಾಗಿ ಮಾದಕ ವಸ್ತುಗಳು ರವಾನೆಯಾಗುತ್ತಿದೆ. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಲಸಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.