2019 ಕ್ಕೆ ಮೋದಿ ಪ್ರಧಾನಿಯಲ್ಲ: ರಾಹುಲ್ ಗಾಂಧಿ
ಬೆಂಗಳೂರು, ಮೇ 8: ಬಿಜೆಪಿ, ಆರೆಸ್ಸೆಸ್ ವಿರುದ್ಧ ಕೇಂದ್ರದಲ್ಲಿ ವಿರೋಧ ಪಕ್ಷಗಳೆಲ್ಲಾ ಒಂದಾಗಿದ್ದು, 2019ಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಮುಂದುವರೆಯಲು ಸಾಧ್ಯವೇ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಭವಿಷ್ಯ ನುಡಿದರು.
ಮಂಗಳವಾರ ನಗರದ ರೇಸ್‌ಕೋರ್ಸ್ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ಸಮೃದ್ಧ ಭಾರತ ಪ್ರತಿಷ್ಠಾನ ಉದ್ಘಾಟಿಸಿದ ಬಳಿಕ ನಡೆದ ಸಂವಾದವನ್ನುದ್ದೇಶಿಸಿ ಮಾತನಾಡಿದ ಅವರು, 2019ರ ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಅಧಿಕಾರದಲ್ಲಿ ಉಳಿಯುವುದಿಲ್ಲ. ಒಂದು ವೇಳೆ ಅನ್ಯ ಪಕ್ಷಗಳ ಬೆಂಬಲ ಪಡೆದು ಬಿಜೆಪಿ ಅಧಿಕಾರಕ್ಕೆ ಬಂದರೂ ನಿತಿನ್‌ಗಡ್ಕರಿ ಅಥವಾ ರಾಜನಾಥ್ ಸಿಂಗ್ ಅಂತಹವರು ಪ್ರಧಾನಿಯಾಗುತ್ತಾರೆಯೇ ಹೊರತು ನರೇಂದ್ರ ಮೋದಿ ಅಲ್ಲ ಎಂದರು.
ಛತ್ತೀಸ್‌ಗಢ ಹಾಗೂ ರಾಜಸ್ತಾನ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ. ಉತ್ತರ ಪ್ರದೇಶದಲ್ಲಿ ವಿರೋಧಪಕ್ಷಗಳು ಒಂದಾದರೆ ಬಿಜೆಪಿಗೆ ಗೆಲುವು ಕಷ್ಟ ಎಂದ ಅವರು, ಎಲ್ಲ ವಿರೋಧ ಪಕ್ಷಗಳೂ ಆರೆಸ್ಸೆಸ್ ಹಾಗೂ ಬಿಜೆಪಿ ವಿರುದ್ಧ ನಿಂತಿವೆ. ಶರದ್‌ಯಾದವ್ ಅವರು ಇತ್ತೀಚೆಗೆ ನನ್ನ ಬಳಿ ಮಾತನಾಡುತ್ತಾ, ನನ್ನ ಜೀವನ ಪರ್ಯಂತ ಕಾಂಗ್ರೆಸ್‌ನ್ನು ಮುಕ್ತಗೊಳಿಸಲು ಹೋರಾಟ ಮಾಡಿದೆ. ಈಗ ನಿರ್ಧಾರ ಬದಲಾಗಿದೆ ಎಂದಿದ್ದಾರೆ ಎಂದು ರಾಹುಲ್ ನುಡಿದರು.
ಈಗಾಗಲೇ ನರೇಂದ್ರ ಮೋದಿಯ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳೆಲ್ಲಾ ಒಂದಾಗಿವೆ. ಪ್ರಸ್ತುತ ಕಾಂಗ್ರೆಸ್ ವಿರುದ್ಧ ಮತಗಳ ಧ್ರುವೀಕರಣ ನಡೆಯುತ್ತಿದೆ ಎಂದು ಅನಿಸಬಹುದು. ರಾಜಕೀಯ ಮುಖಂಡನಾಗಿ ದೇಶಾದ್ಯಂತ ಪರಿವರ್ತನೆಯ ಗಾಳಿ ಗಮನಿಸಿ ಈ ಮಾತು ಹೇಳುತ್ತಿದ್ದೇನೆ. ನೀವು ಇದಕ್ಕೆ ನಗಲೂ ಬಹುದು ಎಂದು ಹೇಳಿದರು.