×
Ad

ಐಟಿ ಇಲಾಖೆ ಕೇಂದ್ರ ಸರಕಾರದ ಕೈಗೊಂಬೆ: ದಿನೇಶ್ ಗುಂಡೂರಾವ್

Update: 2018-05-08 19:14 IST

ಬೆಂಗಳೂರು, ಮೇ 8: ದೇಶದ ಇತಿಹಾಸದಲ್ಲಿ ಎಂದೂ ಈ ಮಟ್ಟದಲ್ಲಿ ಆದಾಯ ತೆರಿಗೆ ಇಲಾಖೆಯ ದುರ್ಬಳಕೆಯಾಗಿರಲಿಲ್ಲ. ಐಟಿ ಇಲಾಖೆಯು ಕೇಂದ್ರ ಸರಕಾರದ ಕೈ ಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಎಂದೂ ಈ ಮಟ್ಟದಲ್ಲಿ ಆದಾಯ ತೆರಿಗೆ ಇಲಾಖೆಯ ದುರ್ಬಳಕೆಯಾಗಿರಲಿಲ್ಲ. ಈ ಹಿಂದೆಯೆ ನಾವು ಆದಾಯ ತೆರಿಗೆ ಇಲಾಖೆಯ ಕಾರ್ಯವೈಖರಿಯನ್ನು ಪ್ರತಿಭಟಿಸಿದ್ದೇವೆ. ಅಲ್ಲದೆ, ಚುನಾವಣಾ ಆಯೋಗಕ್ಕೂ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಪತ್ರ ಬರೆದು ಮನವಿ ಮಾಡಿದ್ದೆವು. ಆದರೂ, ಐಟಿ ಇಲಾಖೆಯು ಕೇಂದ್ರ ಸರಕಾರದ ಕೈ ಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ವಾಸ್ತವ್ಯ ಹೂಡಿರುವ ರೆಸಾರ್ಟ್ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಿನ್ನೆ ತಡರಾತ್ರಿ ದಾಳಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ನಮ್ಮ ಅಭ್ಯರ್ಥಿ ಭೀಮಣ್ಣ ನಾಯಕ್, ಆನೇಕಲ್ ಶಾಸಕ ಬಿ.ಶಿವಣ್ಣ, ಗೋವಿಂದರಾಜು, ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್, ಎಂಟಿಬಿ ನಾಗರಾಜ್, ಚಲುವರಾಯಸ್ವಾಮಿಯವರ ಆಪ್ತ ಹೀಗೆ ಕೇವಲ ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡು ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ನಡೆಸುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐಟಿ ಇಲಾಖೆಯು ಬಿಜೆಪಿಯ ಐಟಿ ಮೋರ್ಚಾದ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಸೋಲುತ್ತಿರುವ ಸತ್ಯವನ್ನು ಅರಿತು ನರೇಂದ್ರಮೋದಿ ಹಾಗೂ ಅಮಿತ್ ಶಾ ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ದಿನೇಶ್‌ಗುಂಡೂರಾವ್ ಕಿಡಿಕಾರಿದರು.

ನರೇಂದ್ರಮೋದಿ ಮೋದಿ ಹತಾಶರಾಗಿ ಈ ರೀತಿ ಮಾಡುತ್ತಿದ್ದಾರೆ. ಈಗಲಾದರೂ ಚುನಾವಣಾ ಆಯೋಗವು ಈ ಸಂಬಂಧ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಮುಖಂಡರನ್ನು ಬಿಜೆಪಿಗೆ ಸೇರುವಂತೆ ಆಮಿಷವೊಡ್ಡುತ್ತಿರುವ ಐಟಿ ಅಧಿಕಾರಿಗಳನ್ನು ಕೂಡಲೆ ವಜಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News