"ದೇಶಕ್ಕಾಗಿ ನಿಮ್ಮ ಮನೆಯ ನಾಯಿಯೂ ಸತ್ತಿಲ್ಲ"
ವಿಜಯಪುರ, ಮೇ 8: ಬಾಗಲಕೋಟೆಯ ಮುಧೋಳ ನಾಯಿಯಲ್ಲಿರುವ ಪ್ರಾಮಾಣಿಕತೆ, ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದಿರುವ ಪ್ರಧಾನಿ ನರೇಂದ್ರಮೋದಿ ವಿರುದ್ಧ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ನಗರದ ಬಬಲೇಶ್ವರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ದೇಶಕ್ಕಾಗಿ ಆರೆಸೆಸ್ಸ್, ಬಿಜೆಪಿಯವರು ಏನು ತ್ಯಾಗ, ಬಲಿದಾನ ಮಾಡಿದ್ದಾರೆ ಎಂಬುದನ್ನು ಹೇಳಲಿ. ದೇಶಕ್ಕಾಗಿ ಅವರ ಮನೆಯ ಒಂದು ನಾಯಿ ಕೂಡ ಸತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂತಹವರು 70 ವರ್ಷದಲ್ಲಿ ಕಾಂಗ್ರೆಸ್ ದೇಶಕ್ಕಾಗಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಕಾಂಗ್ರೆಸ್ ನಾಯಕರು ಈ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‌ಗಾಂಧಿ ಬಲಿದಾನ ನೀಡಿದ್ದಾರೆ. ಸೋನಿಯಾಗಾಂಧಿ ಪ್ರಧಾನಿ ಸ್ಥಾನದ ಅಧಿಕಾರವನ್ನು ತ್ಯಾಗ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನರೇಂದ್ರಮೋದಿ ರಾಜ್ಯದಲ್ಲಿ ಬಹಳಷ್ಟು ಓಡಾಡುತ್ತಿದ್ದಾರೆ. ರಾಜ್ಯದಿಂದ ಅವರು ಮುಖ್ಯಮಂತ್ರಿಯಾಗಬೇಕೇನೋ? ತಮ್ಮ ಭಾಷಣದ ಭರಾಟೆಯಲ್ಲಿ ರಾಜ್ಯ ಹಾಗೂ ರಾಜ್ಯದ ಜನತೆಯನ್ನು ಹಿಯಾಳಿಸುವ ಪ್ರಯತ್ನಗಳನ್ನು ಮೋದಿ ಮಾಡುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.
ನಾವು ನುಡಿದಂತೆ ನಡೆದಿದ್ದೇವೆ. ನಮ್ಮ ಸರಕಾರದ ಎಲ್ಲ ಕಾರ್ಯಕ್ರಮಗಳು ಜನರಿಗೆ ತಲುಪಿವೆ. ಅದಕ್ಕಾಗಿ ತಮ್ಮ ಬಳಿ ಮತಯಾಚಿಸುತ್ತಿದ್ದೇವೆ. ಬಿಜೆಪಿಯವರಂತೆ ಯಾವುದೆ ಕೆಲಸವನ್ನು ಮಾಡದೆ ಮತವನ್ನು ಕೇಳುತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನರೇಂದ್ರಮೋದಿ ಸುಳ್ಳಿನ ಸರದಾರ. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಹಾಕುವುದಾಗಿ ಭರವಸೆ ನೀಡಿದರೂ, ಒಬ್ಬರ ಖಾತೆಗೂ ಹಣ ಬಂದಿಲ್ಲ. 2 ಕೋಟಿ ಉದ್ಯೋಗ ಕೊಟ್ಟಿಲ್ಲ, ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಅನುಷ್ಠಾನ ಮಾಡಿದ್ದೇವೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ಸರಕಾರವು 165 ಭರವಸೆಗಳ ಪೈಕಿ 155 ಭರವಸೆಗಳನ್ನು ಈಡೇರಿಸಿದೆ. ಆದರೆ, ನರೇಂದ್ರಮೋದಿ ಸರಕಾರ ಒಂದು ಕೆಲಸವನ್ನು ಮಾಡದೆ ನಿಮ್ಮ ಬಳಿ ಬಂದು ಮತ ಯಾಚಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ನೀವು ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದರು.
ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಡೆದಿದೆ. ಅವುಗಳ ವಿರುದ್ಧ ನೀವು ಮತ ನೀಡಿ, ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿ ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.
ಸಮಾರಂಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೇಂದ್ರದ ಮಾಜಿ ಸಚಿವರಾದ ಸುಶಿಲ್‌ಕುಮಾರ್ ಶಿಂಧೆ, ಶೆಲ್ಜಾ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್, ಅಭ್ಯರ್ಥಿಗಳಾದ ಸಿ.ಎಸ್.ನಾಡಗೌಡ, ಯಶವಂತರಾಯಗೌಡ ಪಾಟೀಲ್, ಬಿ.ಆರ್.ಯಾವಗಲ್, ಶಿವಾನಂದಪಾಟೀಲ್, ಬಿ.ಎಸ್.ಪಾಟೀಲ್, ಸಿದ್ದುನ್ಯಾಮಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.