ಕೇಂದ್ರದಿಂದ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ: ಪಿ.ಚಿದಂಬರಂ
ಬೆಂಗಳೂರು, ಮೇ 8: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳನ್ನು ವಿರೋಧ ಪಕ್ಷಗಳನ್ನು ಹಣಿಯಲು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಆರೋಪಿಸಿದರು.
ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವು ಈ ಹಿಂದೆಯೆ ಕೇಂದ್ರ ಸರಕಾರದ ಒಂದು ಆಯುಧವಾಗಿದೆ. ಇದೀಗ, ಆದಾಯ ತೆರಿಗೆ ಇಲಾಖೆಯನ್ನು ಮತ್ತೊಂದು ಅಸ್ತ್ರವನ್ನಾಗಿಸಿಕೊಂಡಿದೆ ಎಂದರು.
ಪ್ರಧಾನಿ ನರೇಂದ್ರಮೋದಿಗೆ ಈಗ ಕಾವೇರಿ ಹಾಗೂ ಮಹಾದಾಯಿ ನದಿಯ ನೆನಪು ಬಂದಿದೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ಒಬ್ಬ ಪ್ರಧಾನಿ ರೀತಿಯಲ್ಲಿ ಅವರು ಮಾತನಾಡುತ್ತಿಲ್ಲ. ಒಬ್ಬ ಪ್ರಚಾರಕ ಹಾಗೂ ವಿರೋಧ ಪಕ್ಷದ ನಾಯಕನ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಚಿದಂಬರಂ ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಾದಾಯಿ ಸಮಸ್ಯೆಯನ್ನು ಆರು ತಿಂಗಳಲ್ಲಿ ಇತ್ಯರ್ಥಪಡಿಸುವುದಾಗಿ ಹೇಳಿದ್ದಾರೆ. ಕಳೆದ 4 ವರ್ಷಗಳಿಂದ ಅಧಿಕಾರದಲ್ಲಿರುವ ಅವರಿಗೆ ಮಹಾದಾಯಿ ನೆನಪಾಗಲಿಲ್ಲವೆ ಎಂದು ಚಿದಂಬರಂ ವ್ಯಂಗ್ಯವಾಡಿದರು.
ಪ್ರತ್ಯೇಕ ಧ್ವಜ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ಒಂದು ರಾಜ್ಯ ಪ್ರತ್ಯೇಕವಾದ ಧ್ವಜವನ್ನು ಹೊಂದುವುದು ತಪ್ಪೇನಿಲ್ಲ. ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ಧ್ವಜವನ್ನು ಹೊಂದಿದೆ. ಧ್ವಜ ಎನ್ನುವುದು ಒಂದು ಗುರುತು ಮಾತ್ರ. ಅದಕ್ಕೆ ಯಾಕೆ ವಿರೋಧ ಎಂದರು. ಆದರೆ, ಯಾವುದೆ ರಾಜ್ಯದ ಮೇಲೆ ಹಿಂದಿಯನ್ನು ಹೇರಿಕೆ ಮಾಡುವುದು ಸರಿಯಲ್ಲ. ಪ್ರತಿಯೊಂದು ರಾಜ್ಯವು ತನ್ನದೇ ಆದ ಭಾಷೆಯನ್ನು ಹೊಂದಿದೆ. ಆಯಾ ರಾಜ್ಯಗಳ ಭಾಷೆಯ ಅಭಿವೃದ್ಧಿ, ಬೆಳವಣಿಗೆ ಸರಕಾರಗಳ ಆದ್ಯತೆಯಾಗಿರುತ್ತದೆ. ಅವರ ಮೇಲೆ ಬಲವಂತವಾಗಿ ಹಿಂದಿ ಭಾಷೆಯನ್ನು ಹೇರುವುದನ್ನು ನಾವು ವಿರೋಧಿಸುತ್ತೇವೆ ಎಂದು ಚಿದಂಬರಂ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೇವಾಲ, ಸಂಚಾಲಕಿ ಪ್ರಿಯಾಂಕಾ ಚತುರ್ವೇದಿ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಈ.ರಾಧಾಕೃಷ್ಣ, ಸಂಚಾಲಕ ನಟರಾಜ್‌ಗೌಡ ಉಪಸ್ಥಿತರಿದ್ದರು.