ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು

Update: 2018-05-08 17:10 GMT

ಬೆಂಗಳೂರು, ಮೇ 8: ಅಬಕಾರಿ ಇಲಾಖೆ ವರ್ಗಾವಣೆ ಕಮಿಷನ್ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಯತೀಂದ್ರ, ಸಚಿವ ಕೆ.ಜೆ.ಜಾರ್ಜ್, ಅವರ ಪುತ್ರ ರಾಣಾಜಾರ್ಜ್, ಎಚ್.ವೈ.ಮೇಟಿ ಸೇರಿದಂತೆ ಅಧಿಕಾರಿಗಳ ವಿರುದ್ಧ ಎಸಿಬಿಯಲ್ಲಿ ದೂರು ನೀಡಲಾಗಿದೆ.

ಮಂಗಳವಾರ ನಗರದ ಎಸಿಬಿ ಕಚೇರಿಯಲ್ಲಿ ಬಿಜೆಪಿ ವಕ್ತಾರ ಎನ್.ಆರ್.ರಮೇಶ್, ಅಬಕಾರಿ ಇಲಾಖೆ ವರ್ಗಾವಣೆಯಲ್ಲಿ ಕಮಿಷನ್ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಅಪರ ಕಾರ್ಯದರ್ಶಿ ಶೇಖರಪ್ಪ ಹಾಗೂ ಪ್ರಥಮ ದರ್ಜೆ ಸಹಾಯಕ ಜೆ.ಮಂಜುನಾಥ್ ನಡುವಿನ ದೂರವಾಣಿ ಸಂಭಾಷಣೆಯ ದಾಖಲೆ ಸಮೇತ ದೂರು ನೀಡಿದ್ದಾರೆ.

ಅಧಿಕಾರಿ ವರ್ಗಾವಣೆಗೆ 15 ಲಕ್ಷ ಲಂಚ ಪಡೆದಿರುವುದಾಗಿ ದೂರವಾಣಿ ಸಂಭಾಷಣೆಯಲ್ಲಿ ಜೆ.ಮಂಜುನಾಥ್ ಹೇಳಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳಿಗೆ ಕಮಿಷನ್ ನೀಡುವ ವಿಚಾರವನ್ನು ಪ್ರಸ್ತಾಪ ಮಾಡಿರುವುದರಿಂದ ಕಾಂಗ್ರೆಸ್ ಸರಕಾರ ಕಮಿಷನ್ ಸರಕಾರ ಎಂಬುದು ಸಾಬೀತಾಗಿದೆ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಂಜುನಾಥ್ ಪಶುಸಂಗೋಪನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದು, ಈತ ಮುಖ್ಯಮಂತ್ರಿಗಳ ಜತೆಗಿರುವ ಫೋಟೋಗಳನ್ನು ತೋರಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾನೆಂದು ಅವರು ಆರೋಪಿಸಿದರು.

ಐಎಎಸ್ ಅಧಿಕಾರಿ ಶೇಖರಪ್ಪ ಅವರೊಂದಿಗೆ ಜೆ.ಮಂಜುನಾಥ್ ಅಬಕಾರಿ ಇಲಾಖೆ ವರ್ಗಾವಣೆ ಕುರಿತಂತೆ ಮಾತನಾಡಿರುವ ಆಡಿಯೋ ಟೇಪ್ ಸಿಕ್ಕಿದ್ದು, ಇದನ್ನೇ ಸಾಕ್ಷಿಯಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಅವರು ವರ್ಗಾವಣೆ ದಂಧೆಯಲ್ಲಿ ಪಾಲ್ಗೊಂಡಿದ್ದ ಎನ್ನಲಾದ ಜೆ.ಮಂಜುನಾಥ್‌ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ಆತನನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ ಎಂದು ರಮೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News