ರಾಜ್ಯದಲ್ಲಿ 28,622 ಮಂದಿ ಸೇವಾ ಮತದಾರರು: ಸಂಜೀವ್ ಕುಮಾರ್

Update: 2018-05-08 17:19 GMT

ಬೆಂಗಳೂರು, ಮೇ 8: ರಾಜ್ಯದಲ್ಲಿ ಒಟ್ಟು 28,622 ಮಂದಿ ಸೇವಾ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಸೇನೆ, ನೌಕಾ ಪಡೆ, ವಾಯು ಸೇನೆ, ಸಾಮಾನ್ಯ ಮೀಸಲು ಅಭಿಯಂತರರ ಪಡೆ (ಗಡಿ ರಸ್ತೆ ಸಂಸ್ಥೆ), ಗಡಿ ಭದ್ರತಾ ಪಡೆ, ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್, ಅಸ್ಸಾಂ ರೈಫಲ್ಸ್, ರಾಷ್ಟ್ರೀಯ ಸುರಕ್ಷಾ ಗಾರ್ಡ್, ಕೇಂದ್ರ ಮೀಸಲು ಪೊಲೀಸ್ ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಕೇಂದ್ರ ಸರಕಾರದ ಅಧಿಕಾರಿಯಾಗಿದ್ದು, ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಸೇವಾ ಮತದಾರರಾಗಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

ಸಾಮಾನ್ಯ ಮತದಾರರು ತಾವು ವಾಸಿಸುವ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುತ್ತಾರೆ. ಸೇವಾ ಅರ್ಹತೆಯುಳ್ಳ ವ್ಯಕ್ತಿ ಕೆಲಸದ ನಿಮಿತ್ತ ಬೇರೆ ಸ್ಥಳದಲ್ಲಿ ವಾಸಿಸುತ್ತಿದ್ದು (ನೇಮಕದ ಸ್ಥಳ), ತನ್ನ ಮೂಲ ಸ್ಥಳದಲ್ಲಿ ‘ಸೇವಾ ಮತದಾರ’ ಎಂದು ನೋಂದಣಿ ಮಾಡಿಕೊಳ್ಳಬಹುದು. ಆದರೆ ಆತನಿಗೆ ತನ್ನ ನೇಮಕವಾದ ಸ್ಥಳದಲ್ಲಿ ಸಾಮಾನ್ಯ ಮತದಾರನಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದು ತಿಳಿಸಿದರು.

ವರ್ಗೀಕೃತ ಸೇವಾ ಮತದಾರ: ಸೇನಾಪಡೆ ಅಥವಾ ಸೇನಾ ಕಾಯ್ದೆ ಅನ್ವಯವಾಗುವ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಅವರಿಗೆ ಅಂಚೆ ಮತದಾನ ಅಥವಾ ಅವರಿಂದ ನೇಮಕವಾದ ಬದಲಿ ಪ್ರತಿನಿಧಿ ಮೂಲಕ ಮತದಾನ ಮಾಡುವ ಆಯ್ಕೆಯಿದ್ದು, ಇವರನ್ನು ವರ್ಗೀಕೃತ ಸೇವಾ ಮತದಾರ ಎನ್ನುತ್ತಾರೆ ಎಂದು ಅವರು ಹೇಳಿದರು.

ಯಾವುದೇ ವ್ಯಕ್ತಿ ಯಾವುದೇ ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮತದಾರನಾಗಿ ನೋಂದಣಿ ಮಾಡಿಕೊಳ್ಳಬಾರದು. ಸೇವಾ ಮತದಾರರಿಗೆ ತಮ್ಮ ಮೂಲಸ್ಥಳದಲ್ಲಿ ಸೇವಾ ಮತದಾರನಾಗಿ ಅಥವಾ ಉದ್ಯೋಗದ ಸ್ಥಳದಲ್ಲಿ ಸಾಮಾನ್ಯ ಮತದಾರನಾಗಿ ನೋಂದಣಿ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಸೇವಾ ಮತದಾರ ಫಾರಂ 2/2ಎ ಯಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಿದಾಗ ಆತ ನಿಗದಿತ ಮಾದರಿಯಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಮಾನ್ಯ ಮತದಾರ ಎಂದು ನೋಂದಣಿಯಾಗಿಲ್ಲ ಎಂದು ದೃಢೀಕರಣ ಸಲ್ಲಿಸಬೇಕು ಎಂದು ಅವರು ವಿವರಿಸಿದರು.

ಪ್ರಾಕ್ಸಿ ಮತದಾರರು: ಸೇವಾ ಮತದಾರ ಯಾವುದೇ ವ್ಯಕ್ತಿಯನ್ನು ತನ್ನ ಪರವಾಗಿ ಮತಗಟ್ಟೆಯಲ್ಲಿ ಮತ ಚಲಾಯಿಸಲು ನೇಮಕ ಮಾಡಬಹುದು. ಸೇವಾ ಮತದಾರರ ಪರವಾಗಿ ಮತದಾನ ಮಾಡುವವರು ಆ ಕ್ಷೇತ್ರದ ಸಾಮಾನ್ಯ ಮತದಾರರಾಗಿರಬೇಕು. ಆತ ನೋಂದಾಯಿತ ಮತದಾರನೇ ಆಗಬೇಕೆಂದಿಲ್ಲ. ಆದರೆ ಆತ/ಆಕೆ ಮತದಾರನಾಗಿ ಅನರ್ಹತೆ ಹೊಂದಿರಬಾರದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News