ಬೆಂಗಳೂರು: ಸಾವಿರಾರು ಮತದಾರರ ಚೀಟಿಗಳು ಪತ್ತೆ
ಬೆಂಗಳೂರು, ಮೇ 8: ಹಣದ ಆಮಿಷವೊಡ್ಡಿ ಮತದಾರರಿಂದ ಗುರುತಿನ ಚೀಟಿ ಸಂಗ್ರಹಿಸಿಟ್ಟಿದ್ದ ಮಾಹಿತಿ ಪಡೆದು ಅಪಾರ್ಟ್‌ಮೆಂಟ್‌ವೊಂದರ ಮೇಲೆ ಚುನಾವಣಾ ವಿಚಕ್ಷಣ ದಳ ದಾಳಿ ನಡೆಸಿದಾಗ ಸಾವಿರಾರು ಮತದಾರರ ಚೀಟಿಗಳು ಪತ್ತೆಯಾಗಿವೆ.
ಮಂಗಳವಾರ ಬೆಳಗ್ಗೆ ನಗರದ ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್ ಮೇಲೆ ಚುನಾವಣಾ ವಿಚಕ್ಷಣ ದಳದ ಅಧಿಕಾರಿಗಳು ದಾಳಿ ನಡೆಸಿದ 10 ಸಾವಿರಕ್ಕೂ ಅಧಿಕ ಮತದಾರರ ಗುರುತಿನ ಚೀಟಿ ಹಾಗೂ ನಗದು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಜಾಲಹಳ್ಳಿಯಲ್ಲಿ ಮತದಾರರಿಗೆ ಹಣದ ಆಮಿಷವೊಡ್ಡಿ ಗುರುತಿನ ಚೀಟಿ ಪಡೆಯಲಾಗಿದೆ. ಅಲ್ಲದೆ, ಕೆಲವರನ್ನು ಹೆದರಿಸಿ ಮತಗಳನ್ನು ಪಡೆಯುವ ಹುನ್ನಾರ ನಡೆಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಸ್ಥಳೀಯರು ನೀಡಿದ ಮಾಹಿತಿ ಸಂಗ್ರಹಿಸಿ ಅಧಿಕಾರಿಗಳು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕೆಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಇನ್ನು ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ.
ಸಚಿವರ ಪರಿಶೀಲನೆ: ಅಪಾರ್ಟ್‌ಮೆಂಟ್‌ನಲ್ಲಿ ಮತದಾರರ ಚೀಟಿ ಸಂಗ್ರಹಿಸಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಾಗ್ವಾದ: ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯರು ಅಪಾರ್ಟ್‌ಮೆಂಟ್ ಬಳಿ ಜಮಾಯಿಸಿದರು. ಕೆಲವರು ವಾಗ್ವಾದ ನಡೆಸಲು ಮುಂದಾದಾಗ ಪೊಲೀಸರು ತಡೆದರು.