ಸೌದಿ: ಜೂ. 24ರಿಂದ ಮಹಿಳೆಯರಿಂದ ವಾಹನ ಚಾಲನೆ

Update: 2018-05-08 18:32 GMT

ರಿಯಾದ್, ಮೇ 8: ಸೌದಿ ಮಹಿಳೆಯರಿಗೆ ವಾಹನ ಚಲಾಯಿಸಲು ಜೂನ್ 24ರಿಂದ ಅನುಮತಿ ನೀಡಲಾಗುವುದು ಎಂದು ಸಾರಿಗೆ ಇಲಾಖೆಯ ಮಹಾನಿರ್ದೇಶಕ ಮುಹಮ್ಮದ್ ಅಲ್-ಬಸ್ಸಮಿ ಮಂಗಳವಾರ ಹೇಳಿದ್ದಾರೆ.

‘‘ಸೌದಿ ಅರೇಬಿಯದಲ್ಲಿ ಮಹಿಳೆಯರು ವಾಹನ ಚಲಾಯಿಸಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ’’ ಎಂದು ಬಸ್ಸಮಿ ಹೇಳಿರುವುದಾಗಿ ಸರಕಾರ ಬಿಡುಗಡೆ ಮಾಡಿರುವ ಹೇಳಿಕೆಯೊಂದು ತಿಳಿಸಿದೆ.

ಸೌದಿ ಅರೇಬಿಯದಲ್ಲಿ ಮಹಿಳೆಯರು ವಾಹನ ಚಲಾಯಿಸುವುದರ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಕೊನೆಗೊಳಿಸಿ 2017 ಸೆಪ್ಟಂಬರ್‌ನಲ್ಲಿ ರಾಜಾಜ್ಞೆ ಹೊರಡಿಸಲಾಗಿತ್ತು.

18 ಮತ್ತು ಅದಕ್ಕಿಂತ ಹೆಚ್ಚಿನ ವರ್ಷದ ಮಹಿಳೆಯರಿಗೆ ವಾಹನ ಚಾಲನೆ ಪರವಾನಿಗೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಬಸ್ಸಮಿ ತಿಳಿಸಿದರು.

ಸೌದಿ ಅರೇಬಿಯದ 5 ನಗರಗಳಲ್ಲಿ ಮಹಿಳೆಯರಿಗಾಗಿ ವಾಹನ ಚಾಲನಾ ತರೆಬೇತಿ ಕೇಂದಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಮಹಿಳೆಯರಿಗೆ ವಿದೇಶಗಳಲ್ಲಿ ವಾಹನ ಚಾಲನೆ ಪರವಾನಿಗೆಗಳನ್ನು ಪಡೆದಿರುವ ಸೌದಿ ಮಹಿಳೆಯರು ವಾಹನ ಚಾಲನೆ ಕಲಿಸುತ್ತಾರೆ.

ವಿದೇಶಗಳಲ್ಲಿ ವಾಹನ ಚಾಲನೆ ಪರವಾನಿಗೆಗಳನ್ನು ಪಡೆದಿರುವ ಮಹಿಳೆಯರು ಸೌದಿ ಪರವಾನಿಗೆ ಪಡೆಯಲು ಸಾಧ್ಯವಾಗುವಂತೆ ವಿಶೇಷ ವ್ಯವಸ್ಥೆಯೊಂದನ್ನು ಮಾಡಲಾಗಿದೆ.

‘‘ಸೌದಿ ಅರೇಬಿಯದ ಹಲವಾರು ಮಹಿಳೆಯರು ವಿದೇಶಗಳ ವಾಹನ ಚಾಲನೆ ಪರವಾನಿಗೆಗಳನ್ನು ಹೊಂದಿರುವುದು ಈಗ ಗುಟ್ಟಾಗಿ ಉಳಿದಿಲ್ಲ’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News