ರಮಾನಾಥ ರೈ ನಾಗಾಲೋಟಕ್ಕೆ ಬ್ರೇಕ್ ಹಾಕಲು ಬಿಜೆಪಿಗೆ ಸಾಧ್ಯವೇ?

Update: 2018-05-09 05:49 GMT
ರಮಾನಾಥ ರೈ, ರಾಜೇಶ್ ನಾಯ್ಕ್

ಬಂಟ್ವಾಳ, ಮೇ 8: ದ.ಕ. ಜಿಲ್ಲೆಯಲ್ಲಿ ಗಮನ ಸೆಳೆಯುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಚುನಾವಣೆಗೆ ಭರದ ಸಿದ್ಧತೆ ಆರಂಭಗೊಂಡಿದ್ದು, ಚುನಾವಣಾ ಕಣ ರಂಗೇರಿದೆ.

ಎರಡು ಪ್ರಬಲ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಚಾರದ ಅಬ್ಬರ ಕಳೆದ ಬಾರಿಗಿಂತ ಜೋರಾಗಿದೆ. ಬಂಟ್ವಾಳ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಪ್ರತಿಷ್ಠೆಯಾಗಿದ್ದರೆ, ಕಾಂಗ್ರೆಸ್ ಹಾಗೂ ಜಿಲ್ಲೆಯ ಪ್ರಭಾವೀ ಮುಖಂಡ ರಮಾನಾಥ ರೈ ಕ್ಷೇತ್ರದ ಮೇಲಿನ ಹಿಡಿತ ಇನ್ನಷ್ಟು ಬಲಪಡಿಸುವ ಪಣತೊಟಿದ್ದಾರೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರೇ ನಿರ್ಣಾಯಕರಾಗಿರುವ ಕ್ಷೇತ್ರ ಇದು.

ಬಂಟ್ವಾಳ ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರದಿಂದ 7 ಬಾರಿ ಸ್ಪರ್ಧಿಸಿ 6 ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ಸಚಿವ ರಮಾನಾಥ ರೈ ಈ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಅದು ಅವರ ಏಳನೇ ಗೆಲುವು ಆಗಲಿದೆ. ಹಾಗೆಯೇ ಕಳೆದ ಬಾರಿ ರಮಾನಾಥ ರೈ ಎದುರು ಸೋಲುಕಂಡ ರಾಜೇಶ್ ನಾಯ್ಕ್ ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಗಿಲಿದಿದ್ದು, ನಡಿಗೆ ಮೂಲಕ ಬಿರುಸಿನ ಪ್ರಚಾರವನ್ನು ಕೈಗೊಂಡು ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಂಡು 13 ದಿನಗಳ ಕಾಲ ಎಲ್ಲ ಗ್ರಾಮಗಳಿಗೆ ಶ್ರಮಿಸುವ ಮೂಲಕ ಪಾದಾಯಾತ್ರೆಯನ್ನು ಮಾಡುವ ಕಾ  ಕರ್ತರಲ್ಲಿ ಉತ್ಸಾಹ ತುಂಬಿಸಿದ್ದಾರೆ.

ಕಣದಲ್ಲಿ ಯಾರ್ಯಾರು?:  ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಮಾನಾಥ ರೈ (ಕಾಂಗ್ರೆಸ್) ರಾಜೇಶ್ ನಾಕ್ ಉಳಿಪ್ಪಾಡಿಗುತ್ತು (ಬಿಜೆಪಿ), ಬಾಲಕೃಷ್ಣ ಪೂಜಾರಿ (ಲೋಕ ಆವಾಜ್ ದಳ), ಶಮೀರ್ (ಎಂಇಪಿ), ಇಬ್ರಾಹೀಂ ಕೈಲಾರ್ (ಪಕ್ಷೇತರ)ರಾಗಿ ಒಟ್ಟು 5 ಮಂದಿ ಕಣದಲ್ಲಿದ್ದು, ಬೆಳ್ಳಿಪಾಡಿಗುತ್ತು ರಮಾನಾಥ ರೈ ಹಾಗೂ ಉಳಿಪಾಡಿಗುತ್ತು ರಾಜೇಶ್ ನಾಯ್ಕಿಡುವೆ ನೇರ ಹಣಾಹಣಿ ನಡೆಯಲಿದೆ.

ಪ್ರಚಾರ ವರ್ಸಸ್ ಅಪಪ್ರಚಾರ:  ಬಂಟ್ವಾಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭಿವೃದ್ಧಿ, ಕೋಮುವಾದ ಮತ್ತು ತುಷ್ಟೀಕರಣ ವಿಚಾರವನ್ನು ಪ್ರಚಾರಕ್ಕೆ ಆಯ್ಕೆ ಮಾಡಿಕೊಂಡಿವೆ. ರಮಾನಾಥ ರೈ 1,200ಕ್ಕೂ ಅಧಿಕ ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಮಾಡಿದರೆ, ಅಭಿವೃದ್ಧಿಯ ಅಂಕಿ ಅಂಶಗಳು ನಮ್ಮ ಬಳಿಯಿವೆ. ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ ಎಂದು ಬಿಜೆಪಿ ಹೇಳುತ್ತಿದೆ.

ಮಿನಿವಿಧಾನ ಸೌಧ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಸರಕಾರಿ ಆಸ್ಪತ್ರೆ ಮೇಲ್ದರ್ಜೆ, ಮೆಸ್ಕಾಂ ಕಟ್ಟಡ, ರಸ್ತೆಗಳು, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ, ಟ್ರೀ ಪಾರ್ಕ್‌ಗಳು, ಪ್ರವಾಸಿ ಮಂದಿರ ಹಾಗೂ ಶಂಕುಸ್ಥಾಪನೆ ಮಾಡಿದ ತಾಲೂಕು ಕ್ರೀಡಾಂಗಣ, ಒಳಚರಂಡಿ ವ್ಯವಸ್ಥೆ, ಖಾಸಗಿ ಬಸ್ ನಿಲ್ದಾಣ, ಕಿಂಡಿಅಣೆಕಟ್ಟು ಮುಂತಾದ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಬಿರುಸಿನ ಪ್ರಚಾರ ಕೈಕೊಂಡರೆ, ಕಲ್ಲಡ್ಕ ಮಕ್ಕಳ ಬಿಸಿಯೂಟ ಸ್ಥಗಿತ, ಧಾರ್ಮಿಕ ಅಲ್ಪಸಂಖ್ಯಾತರ ತುಷ್ಟೀಕರಣ, ಅಶಾಂತಿಯ ವಾತಾವರಣ, ಹತ್ಯೆಗಳು, ಪ್ರಭಾಕರ್ ಭಟ್ ಬಂಧನದ ಹೇಳಿಕೆಗಳು ಇತ್ಯಾದಿಗಳನ್ನು ಈ ಬಾರಿಯ ಚುನಾವಣಾ ವಿಷಯವಾಗಿ ಬಿಜೆಪಿ ಆಯ್ಕೆ ಮಾಡಿಕೊಂಡಿವೆ. ಅಲ್ಲದೆ, ರಾಜಕೀಯ ಪ್ರಚೋದನಕಾರಿ ಭಾಷಣ, ಆಣೆ ಪ್ರಮಾಣಗಳು ಕೂಡಾ ಬಿಜೆಪಿ ಪ್ರಮುಖ ಅಜೆಂಡಾಗಳಾಗಿವೆ.
ಇದಕ್ಕೆ ಪ್ರತಿಯಾಗಿ ರಮಾನಾಥ ರೈ ಫರಂಗಿಪೇಟೆಯಿಂದ ಮಾಣಿಯವರೆಗಿನ ಯಶಸ್ವಿ ಸಾಮರಸ್ಯದ ನಡಿಗೆ, ಅಭಿವೃದ್ಧಿ ಹೆಸರಿನಲ್ಲಿ ಮತಯಾಚನೆ, ವಿವಿಧ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯ ಪ್ರಚಾರ ಮೂಲಕ ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ವಾರ್ ರೂಂ, ಪೇಜ್ ನಿರ್ವಹಣೆ ಪೂರಕ
ಎರಡು ಪಕ್ಷಗಳು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿದ್ದು, ಇದಕ್ಕೆ ಕಾಂಗ್ರೆಸ್ ಹೆಚ್ಚು ಒತ್ತು ನೀಡುತ್ತಿದೆ. ಫೇಸ್‌ಬುಕ್‌ನಲ್ಲಿ ಪೇಜ್ ರಚನೆ, ವಾಟ್ಸಾಪ್‌ನಲ್ಲಿ ಗ್ರೂಪ್‌ಗಳ ರಚಿಸಿ ಪ್ರಚಾರ- ಅಪಪ್ರಚಾರಗಳ ಪೋಸ್ಟ್ ಕಾರ್ಡ್‌ಗಳನ್ನು ಬಿತ್ತರಿಸಲಾಗುತ್ತಿದೆ. ರಮಾನಾಥ ರೈ ಅವರ ಅಭಿವೃದ್ಧಿ ಕಾರ್ಯಗಳನ್ನು ಪ್ರಚಾರ ಮಾಡಲು ಕಾಂಗ್ರೆಸ್ ವಿಶೇಷ ವಾರ್ ರೂಂ ಅನ್ನು ರಚಿಸಿದೆ. ಸುಮಾರು 12 ಮಂದಿ ಇದರಲ್ಲಿದ್ದು, 10 ನಿಮಿಷಕ್ಕೊಮ್ಮೆ ಮಾಹಿತಿ ನೀಡುವ ಹಾಗೂ ರೈ ಅವರ ಪ್ರಚಾರಗಳ ಬಗ್ಗೆ ಫೇಸ್‌ಬುಕ್ ಲೈವ್ ಪ್ರಸಾರ ಮಾಡುತ್ತಿದೆ. ಅಲ್ಲದೆ, ಬಿ.ಸಿ.ರೋಡ್‌ನಲ್ಲಿ ಪ್ರತ್ಯೇಕ ಚುನಾವಣಾ ಪ್ರಚಾರ ಕಾರ್ಯಾಲಯವನ್ನು ಕೂಡಾ ಪ್ರಾರಂಭಿಸಿದೆ.

ಮತದಾರರ ನೋಂದಣಿ ಪಟ್ಟಿಯ ಪ್ರತೀ ಪುಟಕ್ಕೆ ಕಾಂಗ್ರೆಸ್ ಓರ್ವ ಸತ್ಯವಾದಿಯನ್ನು ನೇಮಕ ಮಾಡಿದರೆ, ಬಿಜೆಪಿ ಪೇಜ್‌ಪ್ರಮುಖ್‌ರನ್ನು ನೇಮಿಸಿದೆ. ಅಲ್ಲದೆ, ಕಾಂಗ್ರೆಸ್ ಈಗಾಗಲೇ 2 ಸುತ್ತಿನ ಪ್ರಚಾರ ಕಾರ್ಯವನ್ನು ಪೂರ್ಣಗೊಳಿಸಿದ್ದು, ಅಂತಿಮ ಸುತ್ತಿ ಪ್ರಚಾರಕ್ಕೆ ತಯಾರಿ ನಡೆಸುತ್ತಿದೆ.

ಕ್ಷೇತ್ರದ ಜಾತಿ ಲೆಕ್ಕಾಚಾರ
ಅತೀ ಹೆಚ್ಚು ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಸಮುದಾಯಗಳ ಮತಗಳನ್ನು ಹೊಂದಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಗರಿಷ್ಠ ಮತರಾರರಾಗಿದ್ದರೆ, ಬಿಲ್ಲವರ ಸಮುದಾಯ ಮತಗಳು ಕೂಡಾ ದೊಡ್ಡ ಸಂಖ್ಯೆಯಲ್ಲಿವೆ. ಬಂಟ್ಸ್, ಕುಲಾಲ, ಕ್ರಿಶ್ಚಿಯನ್, ಬ್ರಾಹ್ಮಣ, ಗಾಣಿಗ ಸಮುದಾಯ ಸಹಿತ ಇತರರ ಸಮುದಾಯದ ಮತದಾರರೂ ಗಮನಾರ್ಹ ಸಂಖ್ಯೆಯಲ್ಲಿದ್ದಾರೆ.

ರಾಹುಲ್ ಭೇಟಿ: ರಂಗೇರಿದ ಕಣ
ಬಂಟ್ವಾಳ ಗೆದ್ದರೆ ಕರ್ನಾಟಕ ಗೆದ್ದಂತೆ ಎಂದು ಸಂಸದ ನಳಿನ್ ಕುಮಾರ್ ಹೇಳಿದ್ದಾರೆ. ಇದಕ್ಕಾಗಿ ಬಿಜೆಪಿ ಬಂಟ್ವಾಳದಲ್ಲಿ ತನ್ನ ಅಸ್ತಿತ್ವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ಬಂದು ಚುನಾವಣಾ ಪ್ರಚಾರ ಮಾಡಿ ಹೋಗಿದ್ದಾರೆ. ಇದು ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚುನಾವಣೆ ಘೋಷಣೆಗೂ ಮುನ್ನ ಬಂದು ಮಾತನಾಡಿದ್ದಾರೆ.

ರಮಾನಾಥ ರೈ: ಅಭಿವೃದ್ಧಿ ಮತ್ತು ಅನುಭವದ ಅಲೆ
ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈ ಅವರು ಗಮನಾರ್ಹ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂಬುದನ್ನು ಅವರ ವಿರುದ್ಧ ಆರೋಪ ಮಾಡುವ ಪ್ರತಿಪಕ್ಷದ ನಾಯಕರು ಗುಟ್ಟಾಗಿ ಒಪ್ಪುತ್ತಾರೆ. ಕೆಲಸದ ಮಟ್ಟಿಗೆ ರೈಯನ್ನು ಪ್ರಶ್ನಿಸುವಂತಿಲ್ಲ ಎಂಬುದು ಕ್ಷೇತ್ರದಲ್ಲಿ ಸಾಮಾನ್ಯವಾಗಿ ಪಕ್ಷಬೇಧವಿಲ್ಲದೆ ಕೇಳಿಬರುವ ಮಾತು. ಕ್ಷೇತ್ರದ ಹೆಚ್ಚಿನ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಪುರಸಭೆ, ಎಪಿಎಂಸಿ, ಭೂ ಅಭಿವೃದ್ಧಿ ಬ್ಯಾಂಕ್‌ಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಲ್ಲದೆ, ಕ್ಷೇತ್ರದಲ್ಲಿ ಹೆಚ್ಚಿನ ಜಿಪಂ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಕಳೆದ ಬಾರಿಗಿಂತ ಅಧಿಕ ಅಂತರದಲ್ಲಿ ಗೆಲ್ಲುವ ಭರವಸೆಯೊಂದಿಗೆ ರಮಾನಾಥ ರೈ ಸಪ್ತ ಓಟದ ಉತ್ಸಾಹದಲ್ಲಿದ್ದರೆ, ಅವರ ನಾಗಾಲೋಟವನ್ನು ತಡೆಯಲು ಬಿಜೆಪಿ ತಂತ್ರಗಾರಿಕೆಯನ್ನು ರೂಪಿಸುತ್ತಿದೆ. ಕಲ್ಲಡ್ಕ ಪ್ರಭಾಕರ ಭಟ್ ನೇತೃತ್ವದಲ್ಲೇ ಬಂಟ್ವಾಳ ವಶಪಡಿಸಿಕೊಳ್ಳಲು ಬಿಜೆಪಿ ಹಾಗೂ ಸಂಘಪರಿವಾರ ರಣವ್ಯೆಹ ಹಣೆದಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಅಭಿವೃದ್ಧಿ ರಾಜಕಾರಣದ ಜೊತೆ ಚುನಾವಣಾ ಪಟ್ಟುಗಳನ್ನೂ ಚೆನ್ನಾಗಿ ಕರಗತ ಮಾಡಿಕೊಂಡಿರುವ ರಮಾನಾಥ ರೈ ಅವರನ್ನು ಇಲ್ಲಿ ಕಟ್ಟಿಹಾಕುವುದು ಹೇಳಿದಷ್ಟು ಸುಲಭವಲ್ಲ. ಕೇವಲ ಪ್ರಚೋದನಕಾರಿ ಹೇಳಿಕೆ, ಪ್ರಚಾರಗಳಿಂದ ರೈಯಂತಹ ಅನುಭವಿಯನ್ನು ಕೆಡಹುವುದು ಅಸಾಧ್ಯ. ಟೀಕೆ, ವೈಫಲ್ಯಗಳೇನೇ ಇದ್ದರೂ ಬಂಟ್ವಾಳದಲ್ಲಿ ರಮಾನಾಥ ರೈ ಅವರ ಹಿಡಿತ ಹಾಗೂ ಜನಪ್ರಿಯತೆ ಬಗ್ಗೆ ಯಾರಿಗೂ ಸಂಶಯವಿಲ್ಲ. ಹಾಗಾಗಿಯೇ ಕಳೆದ ಬಾರಿ ಸೋತಷ್ಟೇ ಅಂತರದಿಂದ ಈ ಬಾರಿ ರೈಯನ್ನು ಸೋಲಿಸುತ್ತೇವೆ ಎಂದು ಬಿಜೆಪಿಯವರು ಹೇಳಿದರೆ, ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ರೈ, ಕಾಂಗ್ರೆಸಿಗರು ವಿಶ್ವಾಸದಿಂದ ಹೇಳುತ್ತಿದ್ದಾರೆ.

ಕ್ಷೇತ್ರದ ಮತದಾರರು,ಬೂತ್‌ಗಳು
2018 ಎಪ್ರಿಲ್ ತಿಂಗಳಾಂತ್ಯ ಅಂಕಿಅಂಶಗಳ ಪ್ರಕಾರ, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 1,09,537 ಪುರುಷರು, 1,12,197 ಮಹಿಳೆಯರು ಸೇರಿದಂತೆ ಒಟ್ಟು 2,21,734 ಮತದಾರರಿದ್ದಾರೆ. ಪುರುಷರಿಗಿಂತ 2,660 ಮಹಿಳಾ ಮತದಾರರು ಹೆಚ್ಚಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭಕ್ಕೆ ಹೋಲಿಸಿದರೆ ಸುಮಾರು 20 ಸಾವಿರಕ್ಕೂ ಹೆಚ್ಚು ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 249 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News