ನನಗೆ ಶೇಕಡ 99 ಜನರ ಆಶೀರ್ವಾದ ಇದೆ: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ

Update: 2018-05-09 07:39 GMT

ರಾಜ್ಯ ವಿಧಾನಸಭೆಗೆ 5 ಬಾರಿ ಸ್ಪರ್ಧಿಸಿ, 2 ಬಾರಿ ಶಾಸಕಿಯಾಗಿ ಆಯ್ಕೆ ಯಾಗಿ, ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿ, ಇದೀಗ ಮತ್ತೆ ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶಕುಂತಳಾ ಶೆಟ್ಟಿ ಅವರೊಂದಿಗೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. 

► ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ?

ಪ್ರಚಾರ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳು ಈ ಬಾರಿ ನನ್ನ ಗೆಲುವಿನ ಅಂತರವನ್ನು ಹೆಚ್ಚಿಸಲಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ಅಭಿವೃದ್ಧಿ ವಿಚಾರಲ್ಲಿ ಯಾವುದೇ ಜಾತಿ, ಧರ್ಮಗಳನ್ನು ನೋಡದೆ ಪಕ್ಷ ಬೇಧವೂ ಇಲ್ಲದೆ ಕೆಲಸ ನಿರ್ವಹಿಸಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಸಾಧನೆಗಳಿಂದ ಪುತ್ತೂರಿನಲ್ಲಿ ಜನತೆ ಮತ್ತೊಮ್ಮೆ ನನ್ನನ್ನು ಆಶೀರ್ವಾದಿಸಲಿದ್ದಾರೆ.

► ಶಾಸಕಿಯಾಗಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆಗಳೇನು?

ರಸ್ತೆ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚಿನ ಅನುದಾನ ಒದಗಿಸಿದ್ದೇನೆ. 1 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನವನ್ನು ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಿದ್ದೇನೆ. ಮಹಿಳಾ ಕಾಲೇಜು, ಮಿನಿವಿಧಾನ ಸೌಧ, ಪಡುಮಲೆ, ಬಾಲವನ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಪ್ರಮುಖ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಸರಕಾರದ ಜನಪರ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇನೆ. ಕೊಂಬೆಟ್ಟಿನಲ್ಲಿ ತಾಲೂಕು ಕ್ರೀಡಾಂಗಣವನ್ನು ಸಿಂಥೆಟಿಕ್ ಕ್ರೀಡಾಂಗಣವಾಗಿ ಪರಿವರ್ತಿಸಲಾಗಿದೆ. ಇದರೊಂದಿಗೆ ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ತೆರೆಯಬೇಕೆಂಬ ಕನಸೂ ಇದೆ. ಅದಕ್ಕಾಗಿ ಜಮೀನು ಕಾದಿರಿಸಲಾಗಿದೆ. ಹೀಗೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

► ಮತ್ತೊಮ್ಮೆ ಜನರು ಆಶೀರ್ವಾದ ಮಾಡಿದರೆ ಕ್ಷೇತ್ರಕ್ಕೆ ಯಾವ ಕೊಡುಗೆ ನೀಡುವಿರಿ?

ಪುತ್ತೂರು ಜಿಲ್ಲೆಯಾಗಬೇಕು ಎಂಬುದು ನನ್ನ ದೊಡ್ಡ ಕನಸು. ಆ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಕೆಲಸ ಕಾರ್ಯಗಳು ನಡೆದಿವೆ. ಒಮ್ಮೆಲೇ ಆ ಎಲ್ಲಾ ಕೆಲಸಗಳು ಆಗಲು ಸಾಧ್ಯವಿಲ್ಲ. ಹಂತ ಹಂತವಾಗಿ ಮಾಡಬೇಕಾಗಿದೆ. ಪ್ರತ್ಯೇಕ ಜಿಲ್ಲೆ ಆದರೆ ವಿವಿಧ ಇಲಾಖೆಗಳ ಕಚೇರಿಗೆ ಸಾಕಷ್ಟು ಜಾಗ ಬೇಕಾಗಿದೆ. ಹಾಗಾಗಿ ಸೂಕ್ತ ಜಾಗದ ಹುಡುಕಾಟ ನಡೆಯುತ್ತಿದೆ. ಪುತ್ತೂರು ಸರಕಾರಿ ಆಸ್ಪತ್ರೆಯನ್ನು 100 ಬೆಡ್‌ನಿಂದ 300 ಬೆಡ್‌ಗೆ ಮೇಲ್ದರ್ಜೆಗೇರಿಸಬೇಕು. ಬಹುಗ್ರಾಮ ಕುಡಿಯುವ ಯೋಜನೆಯ ಮೂಲಕ ಎಲ್ಲಾ ಗ್ರಾಮಗಳ ಕುಡಿಯವ ನೀರಿನ ಸಮಸ್ಯೆಗಳನ್ನು ಪರಿಹರಿಸಬೇಕು. ಇದಕ್ಕಾಗಿ ಈಗಾಗಲೇ 32 ಕೋಟಿ ರೂ. ಬಿಡುಗಡೆಯಾಗಿದೆ. ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವ ಚಿಂತನೆಯಿದೆ. ಇದರ ಜೊತೆ ಪ್ರವಾಸೋದ್ಯಮದ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಪುತ್ತೂರಿಗೊಂದು ಸಣ್ಣ ಮಟ್ಟದ ವಿಮಾನ ನಿಲ್ದಾಣ ಮತ್ತು ರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ನನ್ನ ಕನಸುಗಳು.

► ಕಳೆದ 5 ವರ್ಷಗಳ ಕೆಲಸ ತೃಪ್ತಿ ನೀಡಿದೆಯೇ?

ಕ್ಷೇತ್ರದಲ್ಲಿ ಮೂಲಭೂತ ಸಮಸ್ಯೆಗಳನ್ನು ಪರಿಹಾರ ಮಾಡಿದ ತೃಪ್ತಿಯಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ತೃಪ್ತಿಯಾಗಿದೆ ಎನ್ನುವಂತಿಲ್ಲ. ಇನ್ನಷ್ಟು ಕೆಲಸಗಳ ಆಗಬೇಕಾಗಿದೆ. ಹಿಂದಿನ ಶಾಸಕರು ಕಾಲಿಡದ ಸುಮಾರು 50ರಿಂದ 60 ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಜನರಿಗೆ ನಾನು ಅವರ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂಬ ನಿರೀಕ್ಷೆ ಇದೆ. ಆದ್ದರಿಂದ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಗಳಿವೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಇನ್ನೂ 500 ಕೋಟಿ ರೂ. ಬೇಕಾಗಿದೆ. ನಗರ ಡ್ರೈನೇಜ್, ಡಂಪಿಂಗ್‌ಯಾರ್ಡ್, ಸ್ಮಶಾನ, ದಫನ ಭೂಮಿ, ಶೌಚಾಲಯದ ಬೇಡಿಕೆಗಳಿವೆ. ಅವೆಲ್ಲವನ್ನೂ ಈಡೇರಿಸಿದಾಗ ಸಂಪೂರ್ಣ ತೃಪ್ತಿಯಾಗಲಿದೆ.

► ಕ್ಷೇತ್ರದಲ್ಲಿ ನಿಮಗೆ ಪ್ರತಿಸ್ಪರ್ಧಿ ಯಾರು?

ಕ್ಷೇತ್ರದ ಸಮಸ್ಯೆಗಳೇ ನನಗೆ ಪ್ರತಿಸ್ಪರ್ಧಿ. ಸಮಸ್ಯೆಗಳೇ ನನಗೆ ಸ್ಪರ್ಧಿ ಅದನ್ನು ಗೆಲ್ಲುವುದೇ ನನ್ನ ಉದ್ದೇಶ. ಪಕ್ಷವು ನನ್ನ ಮೇಲೆ ಭರವಸೆಯಿಂದ ಮತ್ತೊಮ್ಮೆ ಅವಕಾಶ ನೀಡಿದೆ. ಕಳೆದ 5 ವರ್ಷಗಳಲ್ಲಿ ನಾನು ಮಾಡಿರುವ ಕೆಲಸಗಳನ್ನು ಗುರುತಿಸಿರುವ ಮತದಾರರು ನನ್ನ ಕೈ ಬಿಡಲಾರರು ಎನ್ನುವ ಭರವಸೆಯಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವುದು ದೊಡ್ಡ ಸವಾಲಾಗಿದೆ. ಆದರೆ ನಾನು ಭಾರೀ ಅನುದಾನವನ್ನು ತಂದಿದ್ದೇನೆ. ಪುತ್ತೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಈ ಬಗ್ಗೆ ಪ್ರಸ್ತಾಪಿಸಿ ನನ್ನನ್ನು ಪ್ರಶಂಸಿದ್ದಾರೆ.

► ಬಿಜೆಪಿಯಲ್ಲಿ ಅವಕಾಶ ಸಿಗದಾಗ ಕಾಂಗ್ರೆಸ್‌ಗೆ ಲಾಂಗ್‌ಜಂಪ್ ಮಾಡಿದ್ದೀರಿ ಎಂಬ ಆರೋಪ ಇದೆಯಲ್ಲಾ?

ನಾನು ಯಾವುದೇ ಲಾಂಗ್‌ಜಂಪ್, ಹೈಜಂಪ್ ಮಾಡಿಲ್ಲ. ಬಿಜೆಪಿಯಲ್ಲಿ ಶಾಸಕಿಯಾಗಿದ್ದಾಗ ನನ್ನ ವೈಯಕ್ತಿಕ ಶ್ರಮದಿಂದ ಒಲಿಂಪಿಕ್‌ನಷ್ಟು ಸಾಧನೆ ಮಾಡಿದೆ. ಅದನ್ನು ಸಹಿಸದ ಕೆಲವರು ನನ್ನನ್ನು ದೂರವಿಡುವ ಪ್ರಯತ್ನ ನಡೆಸಿದರು. ಬಳಿಕ 5 ವರ್ಷ ಯಾವುದೇ ಪಕ್ಷಕ್ಕೆ ಹೋಗದೆ ಸುಮ್ಮನಿದ್ದೆ. ಬಳಿಕ ಕಾಂಗ್ರೆಸ್ ಪಕ್ಷ ನನ್ನನ್ನು ಕರೆದು ಅವಕಾಶ ನೀಡಿ ಗೆಲ್ಲಿಸಿತ್ತು. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ, ಜಾತ್ಯತೀತ ನಿಲುವಿನೊಂದಿಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಶ್ರಮಪಟ್ಟು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಟೀಕೆಗಳಿಗೆ ಬಗ್ಗುವುದಿಲ್ಲ. ಹೊಗಳಿಕೆಗೆ ಹಿಗ್ಗುವುದಿಲ್ಲ. ತೆಗಳಿದರೆ ಕುಗ್ಗುವುದೂ ಇಲ್ಲ. ಸತ್ಯ, ನ್ಯಾಯದ ಸರಿದಾರಿಯಲ್ಲಿ ನಡೆಯುತ್ತೇನೆ.

► ಈ ಬಾರಿಯೂ ಮಾಜಿ ಶಾಸಕ ರಾಮಭಟ್‌ರ ಬೆಂಬಲ ನಿಮಗೆ ಲಾಭವಾಗಬಹುದೇ?

ಹೌದು. ರಾಮಭಟ್ ನನ್ನ ಗುರು. ಅವರ ಬಗ್ಗೆ ಗೌರವವಿದೆ. ಪಕ್ಷ ಬೇರೆಯಾದರೂ ಅವರು ನನಗೆ ನಿರಂತರ ಮಾರ್ಗದರ್ಶನ ನೀಡುತ್ತಿದ್ದಾರೆ. ದಾರಿ ತಪ್ಪದಂತೆ ಎಚ್ಚರಿಕೆಯನ್ನು ಕೊಡುತ್ತಿದ್ದಾರೆ. ನಾನು ಹೋದ ದಾರಿ ಸರಿಯಿದೆ ಎಂದು ಬೆಂಬಲಿಸುತ್ತಿದ್ದಾರೆ. ಈ ಬಾರಿಯೂ ಪತ್ರಿಕಾ ಹೇಳಿಕೆ ನೀಡಿ ನನಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ.

ನೀವು ನಿರ್ದಿಷ್ಟ ಧರ್ಮದ ವಿರೋಧಿ ಎಂಬ ಆರೋಪ ಇದೆಯಲ್ಲ?

ಈ ಟೀಕೆಯೇ ನಾನು ಜಾತ್ಯತೀತೆ ಎಂಬುದಕ್ಕೆ ಸಾಕ್ಷಿ. ಅಸಂತುಷ್ಟ ಮನಸ್ಸುಗಳು ಇಂತಹ ಪ್ರಚಾರವನ್ನು ಮಾಡುತ್ತಿವೆ. ನಾವು ನ್ಯಾಯಪರವಾಗಿದ್ದೇನೆ. ಯಾವುದೇ ಧರ್ಮ, ಪಕ್ಷ ನೋಡದೆ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಇದನ್ನು ಸಹಿಸದ ಕೆಲವರು ಇಂತಹ ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ನೈಜ ಹಿಂದೂಗಳು ಅಥವಾ ಮುಸ್ಲಿಮರು ನನ್ನನ್ನು ಆ ರೀತಿಯಾಗಿ ಹೇಳುತ್ತಿಲ್ಲ. ಬೆರಳೆಣಿಕೆಯ ಅತೃಪ್ತರು ಇಂತಹ ಕೀಳು ಮಟ್ಟದ ಹೇಳಿಕೆ ನೀಡಿ ನಾನು ಜಾತ್ಯತೀತೆ ಎಂಬುದನ್ನು ಜಗತ್ತು ಒಪ್ಪಿಕೊಳ್ಳುವಂತೆ ಮಾಡಿದ್ದಾರೆ. ನನ್ನ ಕ್ಷೇತ್ರದ ಫಲಾನುಭವಿಗಳಿಗೆ ಮತ್ತು ನನ್ನನ್ನು ಬಲ್ಲವರಿಗೆ ನಾನು ಹೇಗೆ ಎಂಬುದು ಗೊತ್ತಿದೆ. 1 ಪರ್ಸೆಂಟ್ ಜನರು ಇಂತಹ ಟೀಕೆಗಳನ್ನು ಮಾಡಿದರೆ. 99 ಪರ್ಸೆಂಟ್ ಜನರು ನನ್ನನ್ನು ಅರ್ಥಮಾಡಿಕೊಂಡು ಬೆಂಬಲಿಸುತ್ತಿದ್ದಾರೆ.

Writer - ಸಂದರ್ಶನ: ಎಸ್ಸೆಸ್ಪಿ

contributor

Editor - ಸಂದರ್ಶನ: ಎಸ್ಸೆಸ್ಪಿ

contributor

Similar News