ಬೆಂಗಳೂರು: ರಸ್ತೆ ಅಪಘಾತ; ಮೂವರು ಮೃತ್ಯು
ಬೆಂಗಳೂರು, ಮೇ 9: ವೇಗವಾಗಿ ಬಂದ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ನಗರದ ಎಚ್‌ಬಿಆರ್ ಲೇಔಟ್‌ನ ರಾಜೇಶ್(25), ಹೇಮಂತ್(20) ಮತ್ತು ಧನ ಶೇಖರ್(23) ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಈ ಮೂವರು ಮಂಗಳವಾರ ರಾತ್ರಿ 10:15ರ ಸುಮಾರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ರಾಜೇಶ್ ಕಾರು ಚಾಲನೆ ಮಾಡುತ್ತಿದ್ದನು. ಈ ವೇಳೆ ನೈಸ್ ರಸ್ತೆಯ ಬೇಗೂರು ಸಮೀಪ ಅತಿ ವೇಗವಾಗಿ ಮುನ್ನುಗ್ಗಿದ ಲಾರಿ ಇವರ ಕಾರಿಗೆ ಅಪ್ಪಳಿಸಿದೆ. ಪರಿಣಾಮವಾಗಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿದ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಕಾರಿನಲ್ಲಿ ಸಿಕ್ಕಿಕೊಂಡಿದ್ದ ಮೂವರ ಮೃತ ದೇಹಗಳನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಮಡಿವಾಳದ ಸೆಂಟ್ ಜಾನ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಪಘಾತದಿಂದಾಗಿ ಈ ಮಾರ್ಗದಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.