×
Ad

ಚುನಾವಣಾ ಆಯೋಗ ತಕ್ಷಣವೇ ಚುನಾವಣೆಯನ್ನು ರದ್ದುಪಡಿಸಲಿ: ಪ್ರಕಾಶ್ ಜಾವ್ಡೇಕರ್

Update: 2018-05-09 20:18 IST

ಬೆಂಗಳೂರು, ಮೇ 9: ರಾಜರಾಜೇಶ್ವರಿ ನಗರದ ಖಾಸಗಿ ಫ್ಲಾಟ್‌ನಲ್ಲಿ ನಕಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ತಕ್ಷಣವೇ ಚುನಾವಣೆಯನ್ನು ರದ್ದುಪಡಿಸಿ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಒತ್ತಾಯಿಸಿದೆ.

ಬುಧವಾರ ಮಲ್ಲೇಶ್ವರಂನ ಬಿಜೆಪಿ ಮೀಡಿಯಾ ಸೆಂಟರ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಉಸ್ತುವಾರಿ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಡಿ.ವಿ.ಸದಾನಂದಗೌಡ ಅವರು, ಈ ಪ್ರಕರಣವು ಅತ್ಯಂತ ಗಂಭೀರವಾಗಿರುವುದರಿಂದ ಆಯೋಗ ತಕ್ಷಣವೇ ಚುನಾವಣೆಯನ್ನು ಮುಂದೂಡಬೇಕೆಂದು ಆಗ್ರಹಿಸಿದರು.

ಹತ್ತು ಸಾವಿರಕ್ಕೂ ಅಧಿಕ ಗುರುತಿನ ಚೀಟಿ ಪತ್ತೆಯಾಗಿರುವುದು ಸಾಮಾನ್ಯ ಪ್ರಕರಣವಲ್ಲ. ಇನ್ನು ಹೊರಬಾರದಿರುವ ಪ್ರಕರಣಗಳು ಸಾಕಷ್ಟಿವೆ. ಕಾಂಗ್ರೆಸ್ ಸೋಲುವ ಹತಾಶೆಯಿಂದ ಇಂತಹ ನೀಚ ಕೃತ್ಯಕ್ಕೆ ಇಳಿದಿದೆ ಎಂದು ವಾಗ್ದಾಳಿ ನಡೆಸಿದರು.

ಹಲವರು ಈ ಪ್ರಕರಣದಲ್ಲಿ ಶಾಮೀಲಾಗಿದ್ದರೂ ಪೊಲೀಸರು ಈತನಕ ಏಕೆ ಬಂಧಿಸಿಲ್ಲ. ನಮ್ಮ ಕಾರ್ಯಕರ್ತರು ದೂರು ನೀಡಿ ಹಲವು ಗಂಟೆ ಆದ ಬಳಿಕ ಫ್ಲಾಟ್‌ಗೆ ಪೊಲೀಸರು ಬಂದಿದ್ದಾರೆ. ಆ ವೇಳೆಗಾಗಲೇ ನಮ್ಮ ಪಕ್ಷದ ಕಾರ್ಯಕರ್ತರೇ ಒಳನುಗ್ಗಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದರು. ಪೊಲೀಸರ ವಿಳಂಬ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಿದರು.

ರಾಕೇಶ್ ಈ ಪ್ರಕರಣದ ರೂವಾರಿ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ವಾಸ್ತವವಾಗಿ ಇದನ್ನು ಹೊರ ತೆಗೆದಿದ್ದೆ ಅವರು, ಈಗ ತಮ್ಮ ಮೇಲಿನ ಆರೋಪವನ್ನು ಮುಚ್ಚಿಕೊಳ್ಳಲು ಕಟ್ಟುಕಥೆಯನ್ನು ಕಟ್ಟುತ್ತಿದ್ದಾರೆ. ಪೊಲೀಸರು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಲಿ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕೆಂದು ಹೇಳಿದರು.

ಮತದಾರರ ಗುರುತಿನ ಚೀಟಿ ತಯಾರಿಸಲು ಅತ್ಯಾಧುನಿಕ ಯಂತ್ರಗಳನ್ನು ಬಳಸಲಾಗಿದೆ. ಕಂಪ್ಯೂಟರ್, ಪ್ರಿಂಟರ್, ಲ್ಯಾಪ್‌ಟಾಪ್, ಹ್ಯಾಲೊ ಯಂತ್ರ ಸೇರಿ ಮತ್ತಿತರ ವಸ್ತುಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಅಸಲಿಗೆ ಸಿಕ್ಕಿರುವುದು 10 ಸಾವಿರ ಗುರುತಿನ ಚೀಟಿ ಮಾತ್ರ. ಈ ರೀತಿ ಒಂದು ಲಕ್ಷ ಚೀಟಿಗಳನ್ನು ಸೃಷ್ಟಿ ಮಾಡಿರುವ ಸಂಭವವಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಒಂದು ತಿಂಗಳ ಹಿಂದೆಯೇ ನಮ್ಮ ಪಕ್ಷದ ಕಾರ್ಯಕರ್ತರು ಈ ಕ್ಷೇತ್ರದ ಶಾಸಕರ ಹಿನ್ನೆಲೆಯನ್ನು ತಿಳಿದೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಂದು ಎಚ್ಚೆತ್ತುಕೊಂಡಿದ್ದರೆ ಇಂದು ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News