ಚುನಾವಣಾ ಪ್ರಕ್ರಿಯೆ ವೀಕ್ಷಿಸಲು ಪಪುವಾ ನ್ಯೂಗಿನಿ ನಿಯೋಗ ರಾಜ್ಯಕ್ಕೆ ಭೇಟಿ
ಬೆಂಗಳೂರು, ಮೇ 9: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳನ್ನು ವೀಕ್ಷಿಸಲು ಪಪುವಾ ನ್ಯೂಗಿನಿಯ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ಐದು ಮಂದಿಯ ತಂಡ ಮೇ 10 ರಿಂದ 16ರವರೆಗೆ ರಾಜ್ಯಕ್ಕೆ ಭೇಟಿ ನೀಡುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.
ಪಪುವಾ ನ್ಯೂಗಿನಿಯಲ್ಲಿ 2022ರಲ್ಲಿ ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿ ಚುನಾವಣೆ ನಡೆಯಲಿದ್ದು, ಈ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್‌ಗಳನ್ನು ಪ್ರಾಯೋಗಿಕವಾಗಿ ಬಳಸಲು ಉತ್ಸುಕವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಳಕೆಯಾಗುತ್ತಿರುವ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮತ್ತು ಅವುಗಳ ಕಾರ್ಯವೈಖರಿಯ ಬಗ್ಗೆ ಅರಿತುಕೊಳ್ಳುವ ಉದ್ದೇಶದಿಂದ ಪಪುವಾ ನ್ಯೂಗಿನಿಯ ಚುನಾವಣಾ ಆಯುಕ್ತ ಪಟಿಲಿಯಾಸ್ ಗಮತೊ ಅವರ ನೇತೃತ್ವದ ತಂಡ ನಾಳೆಯಿಂದ ರಾಜ್ಯಕ್ಕೆ 7 ದಿನಗಳ ಕಾಲ ಭೇಟಿ ನೀಡುತ್ತಿದೆ.
ಭೇಟಿಯ ವೇಳೆ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಂದ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಅಲ್ಲದೆ, ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್‌ಗಳನ್ನು ಭಾರತ ಚುನಾವಣಾ ಆಯೋಗಕ್ಕೆ ಪೂರೈಸುವ ಬಿಇಲ್ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಮತದಾನ ನಡೆಯುವ ಮೇ 12 ರಂದು ಆಯ್ದ ಮತಗಟ್ಟೆಗಳಿಗೆ ಮತ್ತು ಮತ ಎಣಿಕೆ ನಡೆಯುವ ದಿನದಂದು ಆಯ್ದ ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಅವುಗಳ ಕಾರ್ಯವೈಖರಿಯ ಬಗ್ಗೆ ಪ್ರತ್ಯಕ್ಷ ಮಾಹಿತಿಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.