ವಿಧಾನಸಭಾ ಚುನಾವಣೆ: ಬಿಜೆಪಿಯನ್ನು ತಿರಸ್ಕರಿಸಲು ದಿಲ್ಲಿ ವಿವಿ ಉಪನ್ಯಾಸಕರ ಕರೆ
ಬೆಂಗಳೂರು, ಮೇ 9: ದೇಶದಲ್ಲಿ ಒಡೆದಾಳುವ ನೀತಿ ಅನುಸರಿಸುತ್ತಿರುವ ಬಿಜೆಪಿಯನ್ನು ವಿಧಾನಸಭಾ ಚುನಾವಣೆಯಲ್ಲಿ ಜನತೆ ತಿರಸ್ಕರಿಸಬೇಕು ಎಂದು ದಿಲ್ಲಿ ವಿಶ್ವವಿದ್ಯಾನಿಲಯದ ಉಪನ್ಯಾಸಕರಾದ ಡಾ.ಅರವಿಂದ್ ಪಟೇಲ್, ರಂಜೀತ್‌ಕುಮಾರ್ ಕರೆ ನೀಡಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮತೀಯವಾದ ಬಿತ್ತುತ್ತಿರುವ ಹಾಗೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರವನ್ನು ದಿವಾಳಿ ಎಬ್ಬಿಸಲು ಮುಂದಾಗಿದೆ. ಕೇಂದ್ರ ಸರಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಅದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಹೀಗಾಗಿ, ಬಿಜೆಪಿ ಪಕ್ಷವನ್ನು ತಿರಸ್ಕರಿಸಿ, ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ಎಂದರು.
ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಸಾರ್ವತ್ರಿಕ ಶಿಕ್ಷಣ ಕ್ಷೇತ್ರವನ್ನು ಕೇಂದ್ರ ಬಿಜೆಪಿ ಸರಕಾರ ನಿರ್ಲಕ್ಷ ಮಾಡುತ್ತಿದೆ. ಕೇಂದ್ರ ಸರಕಾರ ಅನುದಾನ ನೀಡದೇ ವಂಚಿಸುತ್ತಿದ್ದು, ಉನ್ನತ ಶಿಕ್ಷಣ ವಲಯದಲ್ಲಿ ಖಾಸಗೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ದೂರಿದರು.
ಬಜೆಟ್‌ನಲ್ಲಿ ಉನ್ನತ ಶಿಕ್ಷಣಕ್ಕೆ ಒದಗಿಸುತ್ತಿದ್ದ ಅನುದಾನ ಶೇ.1.57ರಿಂದ ಶೇ.1.43ಕ್ಕೆ ಇಳಿದಿದೆ. ಪ್ರಸ್ತುತ ಬಜೆಟ್‌ನಲ್ಲಿ ಖಾಸಗೀಕರಣಕ್ಕೆ ಆದ್ಯತೆ ಇದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡಲಾಗಿದೆ ಎಂದು ಕಿಡಿಕಾರಿದರು.
ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 7ನೆ ವೇತನ ಆಯೋಗದ ವರದಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಅಲ್ಲದೆ ಸಂಶೋಧನೆಗೆ ಅನುದಾನ ಕಡಿತಗೊಳಿಸಿದೆ. ಅಧ್ಯಾಪಕರಿಗೆ ಭಡ್ತಿ ನೀಡದೆ, ಗುತ್ತಿಗೆ ಆಧಾರದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಿಸಿಕೊಳ್ಳಲಾಗುತ್ತಿದೆ. ಸಾಂಪ್ರದಾಯಿಕ ಕಲಿಕಾ ವಿಧಾನವನ್ನು ಕಡೆಗಣಿಸಿ ಇ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಸಮಂಜಸವಲ್ಲ ಎಂದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬಡವರ್ಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶೈಕ್ಷಣಿಕ ವಲಯದಲ್ಲಿ ಸರಕಾರಿ ಸ್ವಾಮ್ಯತೆ ಕಡಿಮೆಯಾದರೆ, ಬಡ ಮಕ್ಕಳು ಎಲ್ಲಿಗೆ ಹೋಗಬೇಕು ಎಂದ ಅವರು, ಪ್ರಧಾನಿ ಮೋದಿ ಪಕೋಡ ಮಾಡುವುದು ಉದ್ಯೋಗವೆಂದು ಕರೆ ನೀಡುತ್ತಾರೆ. ಆದರೆ, ಶೇ.90 ಕ್ಕೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಗತಿಯೇನು, ಅವರು ಪಕೋಡ ಮಾರಾಟ ಮಾಡಬೇಕಾ? ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಚುನಾವಣೆ ಪೂರ್ವದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ, ಇಂದು ಏನಾಗಿದೆ? ದೇಶದಲ್ಲಿ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಂತಹ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಲಾಗಿಲ್ಲ. ದೇಶದ ಅಭಿವೃದ್ಧಿ ಇಂದು ಅಧೋಗತಿಯತ್ತ ಸಾಗುತ್ತಿದೆ. ದೇಶದ ಆರ್ಥಿಕತೆ, ಶಿಕ್ಷಣಮಟ್ಟ, ಸಾಮಾಜಿಕ ಪರಿಸ್ಥಿತಿ ತಳಮಟ್ಟಕ್ಕೆ ಇಳಿದಿದೆ. ಹಾಗಾಗಿ ಜನತೆ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ವಿರುದ್ಧ ದನಿ ಎತ್ತಬೇಕು. ಸಮಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.