ಮತದಾನ ಹೆಚ್ಚಳ ಪ್ರೋತ್ಸಾಹಿಸಲು ಲಕ್ಕಿ ಡ್ರಾ: ವಿಜೇತರಿಗೆ ಬೈಕ್ ಗಿಫ್ಟ್ ಆಫರ್
ಬೆಂಗಳೂರು, ಮೇ 9: ರಾಜ್ಯದಲ್ಲಿ ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಳವಾಗುವಂತೆ ಪ್ರೋತ್ಸಾಹಿಸುವ ಸಲುವಾಗಿ ರಾಜಾಜಿನಗರದ ಅನುಗ್ರಹ ಕಂಪ್ಯೂಟರ್ ಸೆಂಟರ್ ಮಾಲಕ ಲಕ್ಕಿ ಡ್ರಾ ಮೂಲಕ ಬೈಕ್‌ಗಳನ್ನು ವಿತರಿಸಲು ಮುಂದಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೆಂಟರ್‌ನ ಮಾಲಕ ಶ್ರೀನಿವಾಸ್, ಮತದಾನವನ್ನು ಹೆಚ್ಚಿಸುವ ಉದ್ದೇಶದಿಂದ ಇದನ್ನು ಹಮ್ಮಿಕೊಳ್ಳಲಾಗಿದೆ. ಮತದಾನ ಮಾಡಿದ ಬಳಿಕ ತಮ್ಮ ಮತ ಚಲಾವಣೆಗೆ ಸಂಬಂಧಿಸಿದಂತೆ ಗುರುತು ನಮಗೆ ಕಳುಹಿಸಿಕೊಟ್ಟರೆ, ಅದರಲ್ಲಿ 10 ಜನರನ್ನು ಆಯ್ಕೆ ಮಾಡಿ ಅವರಿಗೆ ಬೈಕ್ ಅನ್ನು ನೀಡಲಾಗುತ್ತದೆ ಎಂದರು.
ಮತದಾರರು ಯಾರಿಗಾದರೂ ಮತ ಚಲಾಯಿಸಿ. ಆದರೆ ತಪ್ಪದೆ ನಿಮ್ಮ ಮತದಾನ ಮಾಡಿ ನಿಮಗಿರುವ ಸಂವಿಧಾನ ಬದ್ಧ ಹಕ್ಕನ್ನು ಸದುಪಯೋಗಪಡಿಸಿಕೊಳ್ಳಿ. ಒಂದು ವೇಳೆ ಯಾರಿಗೂ ಮತದಾನ ಮಾಡಲು ಇಚ್ಛಿಸದವರು ನೋಟಾ ಬಳಸಿ ಮತದಾನ ಮಾಡಬಹುದು. ಹೀಗೆ ಮತದಾನ ಮಾಡಿರುವವರು ತಮ್ಮ ಮಾಹಿತಿಯನ್ನು ನಾವು ನೀಡುವ ವಾಟ್ಸಾಪ್ ಮೂಲಕ ಕಳಿಸಿದರೆ, ಅವರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೇ 12ರಂದು ಮತದಾನ ಮಾಡಿದ ನಂತರ ಇಂಕಿನ ಗುರುತುಳ್ಳ ಬೆರಳಿನ ಫೋಟೋವನ್ನು 50 ದಿನದೊಳಗೆ ವಾಟ್ಸಾಪ್ ಸಂಖ್ಯೆ 9590095900 ಇಲ್ಲಿಗೆ ಕಳುಹಿಸಬೇಕು. ವಾಟ್ಸಾಪ್ ಸಂಖ್ಯೆಯ ಕೊನೆಯ 5 ಅಂಕಿಗಳೇ ನಿಮ್ಮ ಅದೃಷ್ಟ ಸಂಖ್ಯೆಯಾಗುತ್ತವೆ ಎಂದು ಹೇಳಿದರು.