ಬಿಜೆಪಿ ಶಾಸಕನ ಪುತ್ರಿಯಿಂದ ಹಣ ಹಂಚಿಕೆ: ಆರೋಪ

Update: 2018-05-09 16:23 GMT

ಬೆಂಗಳೂರು, ಮೇ 9: ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಪುತ್ರಿ ಡಾ.ದಿಶಾ ಎಸ್.ಕುಮಾರ್ ಮತದಾರರಿಗೆ ಅಕ್ರಮವಾಗಿ ಹಣ ಹಂಚಿಕೆ ಮಾಡಿದ್ದಾರೆ ಎನ್ನಲಾದ ಗಂಭೀರ ಆರೋಪ ಕೇಳಿಬಂದಿದೆ.

ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ರಾಜಾಜಿನಗರದ ಇಎಸ್‌ಐ ಆಸ್ಪತ್ರೆ ಸಮೀಪದ ಕಟ್ಟಡವೊಂದರಲ್ಲಿ ದಿಶಾ ಹಾಗೂ ಕೆಲವರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದರು. ಬಳಿಕ ಪೊಲೀಸರಿಗೆ ಸುದ್ದಿ ಮುಟ್ಟಿಸಿ, ಕಟ್ಟಡದೊಳಗೆ ನುಗ್ಗಿ ಕೆಲವರು ಪರಿಶೀಲನೆ ನಡೆಸಿದರು. ಇದೇ ವೇಳೆ, ವ್ಯಕ್ತಿಯೊಬ್ಬನ ಬಳಿ ಹಣ ಕಂಡು ಬಂದಿದ್ದು, ತದನಂತರ ಪೊಲೀಸರು ಘಟನೆ ಸಂಬಂಧ ಸ್ಥಳೀಯರೊಂದಿಗೆ ಮಾಹಿತಿ ಪಡೆದರು ಎಂಂದು ತಿಳಿದುಬಂದಿದೆ.

ಸ್ಪಷ್ಟನೆ: ಪುತ್ರಿ ಅಕ್ರಮವಾಗಿ ಹಣ ಹಂಚುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲ ಸುದ್ದಿ ವಾಹಿನಿಗಳಲ್ಲಿ ಹರಿದಾಡಿದ ಬೆನ್ನಲ್ಲೆ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ರಾಜಾಜಿನಗರದಲ್ಲಿ ಬಿಜೆಪಿ ವತಿಯಿಂದ, ಅದರಲ್ಲೂ ನನ್ನ ಮಗಳ ಕಡೆಯಿಂದ ಚುನಾವಣಾ ಸಂಬಂಧ ಹಣ ಹಂಚುವಿಕೆ ಆಗುತ್ತಿರುವಾಗ, ನನ್ನ ಮಗಳನ್ನು ಪೋಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂಬ ಸುದ್ದಿ ಅಪ್ಪಟ ಸುಳ್ಳು ಸುದ್ದಿ ಎಂದಿದ್ದಾರೆ.

ಯಾವುದೇ ರೀತಿಯ ಹಣ ಹಂಚಿಕೆ ನಾವು ಮಾಡಿಲ್ಲ. ಸೋಷಿಯಲ್ ಮೀಡಿಯಾ ತಂಡದ ಜೊತೆ ನನ್ನ ಮಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳಷ್ಟೇ. ನಮ್ಮ ಸೋಷಿಯಲ್ ಮೀಡಿಯಾ ತಂಡದ ಜೊತೆ ನಮ್ಮ ಪಕ್ಷದ ಯುವ ಮೋರ್ಚಾ ಪದಾಧಿಕಾರಿ ಯಶಸ್ ಅವರ ಕಚೇರಿಯಲ್ಲಿ ಚರ್ಚಿಸುತ್ತಿದ್ದಳು ಎಂದು ಹೇಳಿದರು.

ಹಲ್ಲೆಗೆ ಯತ್ನ: ಕಟ್ಟಡದಲ್ಲಿ ಸಾಮಾಜಿಕ ಜಾಲತಾಣದ ಬಗ್ಗೆ ಚರ್ಚೆ ನಡೆಸಲಾಗುತಿತ್ತು. ಆದರೆ, ಏಕಾಏಕಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಗಲಾಟೆ ನಡೆಸಿದರು. ಅಷ್ಟೇ ಅಲ್ಲದೆ, ಕಾಂಗ್ರೆಸ್ ಕಾರ್ಪೋರೇಟರ್ ಕೃಷ್ಣಮೂರ್ತಿ ಎಂಬವರು ನನ್ನ ಮೊಬೈಲ್ ಕಸಿದುಕೊಂಡು ಹಲ್ಲೆಗೆ ಯತ್ನಿಸಿದರು ಎಂದು ಸುರೇಶ್‌ಕುಮಾರ್ ಪುತ್ರಿ ಡಾ.ದಿಶಾ ಎಸ್.ಕುಮಾರ್ ಆರೋಪಿಸಿದರು.

ವಿಡಿಯೋ: ದಿಶಾ ಎಸ್.ಕುಮಾರ್ ಅವರಿದ್ದ ಕಟ್ಟಡದ ಕಿಟಕಿಯೊಂದರಿಂದ ವ್ಯಕ್ತಿಯೊಬ್ಬ ಹಣ ಎಸೆದಿದ್ದಾನೆ ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಪ್ರಕರಣ ಸಂಬಂಧ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News