ಅಕ್ರಮ ಮಾರ್ಗದ ಮೂಲಕ ದರ್ಶನ್ ಪುಟ್ಟಣ್ಣಯ್ಯ ಸೋಲಿಸಲು ತಂತ್ರ: ಯೋಗೇಂದ್ರ ಯಾದವ್

Update: 2018-05-09 16:30 GMT

ಬೆಂಗಳೂರು, ಮೇ 9: ಮೇಲುಕೋಟೆ ಕ್ಷೇತ್ರದಿಂದ ಸ್ವರಾಜ್ ಇಂಡಿಯಾ ಪಕ್ಷದಿಂದ ಸ್ಪರ್ಧಿಸಿರುವ ದರ್ಶನ್ ಪುಟ್ಟಣ್ಣಯ್ಯರನ್ನು ಸೋಲಿಸಲು ಜೆಡಿಎಸ್ ಪಕ್ಷವು ಚುನಾವಣಾ ಅಕ್ರಮಗಳನ್ನು ಎಸಗುತ್ತಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಅಂಶಗಳನ್ನು ಹೇಳಿ ಎದುರಿಸುತ್ತಿದ್ದು, ಧರ್ಮಸ್ಥಳ ಮಂಜುನಾಥ ದೇವರ ಫೋಟೊ ಉಡುಗೊರೆಯಾಗಿ ನೀಡಿ ಅದರಲ್ಲಿ 2000 ನೋಟುಗಳನ್ನಿಟ್ಟು ನಮಗೇ ಮತ ಹಾಕಬೇಕು ಎಂದು ಆಣೆ ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಜನರನ್ನು ತಿರುಪತಿಗೆ ಉಚಿತವಾಗಿ ತೀರ್ಥಯಾತ್ರೆಗೆ ಕಳುಹಿಸಿ ಜೆಡಿಎಸ್‌ಗೆ ಮತ ಹಾಕುವಂತೆ ಪ್ರೇರೇಪಿಸುತ್ತಿದ್ದಾರೆ ಎಂದು ದೂರಿದರು.

ಮೇಲುಕೋಟೆ ಕ್ಷೇತ್ರ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಹಾಗೂ ಬೆಂಬಲಿಗರು ವಿವಿ ಪ್ಯಾಟ್ ಬಗ್ಗೆ ಜನರಲ್ಲಿ ಭಯ ಮೂಡಿಸುತ್ತಿದ್ದು, ಅದರಲ್ಲಿ ಬರುವ ಚೀಟಿಯು ನೀವು ಯಾರಿಗೆ ಮತ ಹಾಕಿದ್ದೀರ ಎಂದು ನಮ್ಮ ಏಜೆಂಟರ್‌ಗಳಿಗೆ ತಿಳಿಯುತ್ತದೆ. ಹಾಗಾಗಿ ನೀವು ಜೆಡಿಎಸ್‌ಗೆ ಮತಹಾಕಬೇಕು. ತಪ್ಪಿದ್ದಲ್ಲಿ ನಿಮಗೆ ಶಿಕ್ಷೆ ನೀಡುತ್ತೇವೆ ಎಂದು ಅಮಾಯಕ ಮತದಾರರನ್ನು ಬೆದರಿಸುತ್ತಿದ್ದಾರೆ. ಇನ್ನು ಈ ಕುರಿತು ಮುಖ್ಯ ಚುನಾವಣಾ ಆಯುಕ್ತರಿಗೆ ದೂರನ್ನು ನೀಡಿದ್ದೇವೆ ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷ ಒಟ್ಟು 11 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಲ್ಲದೆ, ನಾವು ಯಾವ ದೊಡ್ಡ ಪಕ್ಷಕ್ಕೂ ಬೆಂಬಲ ಸೂಚಿಸಿಲ್ಲ ಹಾಗೂ ಫಲಿತಾಂಶ ನಂತರ ಮೈತ್ರಿ ಮಾಡಿಕೊಳ್ಳುವುದಿಲ್ಲ. ಕೆಲ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ನಮ್ಮ ಬೆಂಬಲವಿದೆ. ಇನ್ನು ಮೇಲುಕೋಟೆಯಲ್ಲಿ ಮಾತ್ರ ಪುಟ್ಟಣ್ಣಯ್ಯ ಅವರಿಗೆ ಗೌರವ ಸೂಚಿಸಿ ಕಾಂಗ್ರೆಸ್ ಬೆಂಬಲ ಸೂಚಿಸಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಚುನಾವಣಾ ಪ್ರಣಾಳಿಕೆ ಆಂಗ್ಲ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಸ್ವರಾಜ್ ಇಂಡಿಯಾದ ಅಜ್ಜದ್ ಬಾಷಾ, ಸೋಮನಾಥ್ ಚಟರ್ಜಿ, ಕ್ರೀಸ್ಟಿನಾ, ಡಾ.ರಾಜೀವ್ ಉಪಸ್ಥಿತರಿದ್ದರು.

ಆಂಬ್ರೋಸ್‌ಗೆ ಮತ ನೀಡುತ್ತಿದ್ದೆ
ನನ್ನ ಮತ ಇಲ್ಲಿ ಇದ್ದಿದ್ದರೆ ಸ್ವರಾಜ್ ಇಂಡಿಯಾದ ಅಭ್ಯರ್ಥಿಗೆ ಮತ ನೀಡದೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವೌನ ಹೋರಾಟಗಾರ ಆಂಬ್ರೋಸ್ ಡಿ.ಮೆಲ್ಲೊಗೆ ಮತ ಚಲಾಯಿಸುತ್ತಿದ್ದೆ. ಹೋರಾಟಗಾರರಿಗೆ ನಮ್ಮ ಬೆಂಬಲ.
-ಯೋಗೇಂದ್ರ ಯಾದವ್, ಸ್ವರಾಜ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News