ಜಾತ್ಯತೀತ ಪಕ್ಷ ಬೆಂಬಲಿಸಲು ಜನ ಕರ್ನಾಟಕ ವೇದಿಕೆ ಮನವಿ

Update: 2018-05-09 16:33 GMT

ಬೆಂಗಳೂರು, ಮೇ 9: ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಕೋಮುವಾದಿ, ಜಾತೀವಾದಿ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿ ಜಾತ್ಯತೀತರನ್ನು ಆಯ್ಕೆ ಮಾಡಬೇಕು ಎಂದು ಜನ ಕರ್ನಾಟಕ ವೇದಿಕೆ ಮನವಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಸದಸ್ಯ ಹಾಗೂ ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಮರುಳಸಿದ್ದಪ್ಪ, ಸುಭದ್ರ ಆಡಳಿತ ನೀಡಬೇಕಾದರೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು. ಆದರೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನ ನಿರಂತರವಾಗಿ ಮಾಡುತ್ತಿದೆ. ಆದರೆ, ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ ಸುಭದ್ರ ಹಾಗೂ ಸ್ಥಿರವಾದ ಆಡಳಿತ ನೀಡಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವ ಬಿಜೆಪಿ ನಾಯಕರು ಇದುವರೆಗೂ ಅದನ್ನು ದೃಢಪಡಿಸಿಲ್ಲ. ಆದರೆ, ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳು ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ಜೈಲಿಗೆ ಹೋಗಿದ್ದರು. ಆದುದರಿಂದಾಗಿ, ರಾಜ್ಯದ ಜನರು ಹಿಂದಿನ ಬಿಜೆಪಿ ಸರಕಾರ ಹಾಗೂ ಇಂದಿನ ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ಮಾದರಿಗಳನ್ನು ಗಮನಿಸಿ ಮತ ಹಾಕಬೇಕು ಎಂದು ತಿಳಿಸಿದರು.

ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ದೇಶದ ಅಸ್ಮಿತೆ ಉಳಿಯಬೇಕಾದರೆ ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ. ಆದರೆ, ದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷದ ನಾಯಕರು ಸಂವಿಧಾನವನ್ನು ಬದಲಿಸುವ ಮಾತುಗಳನ್ನಾಡುತ್ತಿದ್ದಾರೆ. ಮತ್ತೊಂದು ಕಡೆ ಪ್ರಾದೇಶಿಕ ಮುಖವಾಡ ತೊಟ್ಟಿರುವ ಜಾತಿವಾದಿ ಪಕ್ಷವನ್ನು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ರಾಜ್ಯದಲ್ಲಿ ಚುನಾವಣೆಗಳನ್ನು ಎದುರಿಸುತ್ತಿದ್ದು, ಪ್ರತಿಯೊಬ್ಬರೂ ಯೋಚನೆ ಮಾಡಿ ಮತದಾನ ಮಾಡಬೇಕು ಎಂದು ಹೇಳಿದರು.

ಸರ್ವರಿಗೂ ಸಮಬಾಳು ಹಾಗೂ ಸರ್ವರಿಗೂ ಸಮಪಾಲು ತತ್ವವನ್ನು ಅಳವಡಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಿದೆ ಎಂದ ಅವರು, ದೇಶದ ದಿಕ್ಸೂಚಿ ಯಾವ ಕಡೆ ಹೋಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರವಿದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಯನ್ನು ಬಾಯಿಗೆ ಬಂದ ಹಾಗೆ ಟೀಕೆ ಮಾಡುತ್ತಿದ್ದಾರೆ. ಅಲ್ಲದೆ, ಬಿಜೆಪಿ ನಾಯಕರು ಬಿಕನಾಸಿ, ತಪರಾಕಿ, ಪಿಶಾಚಿ ಎಂಬ ಪದ ಬಳಕೆ ಮಾಡುವುದು ಅವರಿಗೆ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತದಾನ ಎಲ್ಲರೂ ಕಡ್ಡಾಯವಾಗಿ ಮಾಡಬೇಕು. ಅದು ಪ್ರತಿಯೊಬ್ಬರ ಹಕ್ಕು. ಆದರೆ, ಈ ಸಂದರ್ಭದಲ್ಲಿ ಮತೀಯವಾಗಿ, ಕೋಮುವಾದಿ ಮತ್ತು ಜಾತಿವಾದಿ ಪಕ್ಷಗಳನ್ನು ತಿರಸ್ಕರಿಸಿ, ಜಾತ್ಯತೀತರನ್ನು ಆಯ್ಕೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಐದು ವರ್ಷಗಳಲ್ಲಿ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಹೀಗಾಗಿ, ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಬೇಕು ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಾತ್ವಿಕ ಸಂಘರ್ಷ ಮಾಡುವುದನ್ನು ಬಿಟ್ಟು, ವೈಯಕ್ತಿಕ ನಿಂದನೆ ಮಾಡಲು ಮುಂದಾಗಿದ್ದಾರೆ. ಪ್ರಜಾಸತ್ತಾತ್ಮಕ ವೌಲ್ಯಗಳನ್ನು ದಿವಾಳಿ ಎಬ್ಬಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಎರಡೂ ಪಕ್ಷಗಳನ್ನು ತಿರಸ್ಕರಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಪ್ರೊ.ಜಿ.ಕೆ. ಗೋವಿಂದರಾವ್, ನಿವೃತ್ತ ಜಿಲ್ಲಾಧಿಕಾರಿ ರುದ್ರಪ್ಪ ಹನಗವಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News