ಅನಿವಾಸಿ ಭಾರತೀಯರು ಆನ್ ಲೈನ್ ಮೂಲಕ ಮತ ಚಲಾಯಿಸಬಹುದೇ?

Update: 2018-05-10 10:08 GMT

ಕರ್ನಾಟಕ ವಿಧಾನಸಭಾ ಚುನಾವಣೆಗೆ 2 ದಿನಗಳಷ್ಟೇ ಬಾಕಿಯಿದ್ದು, ರಾಜ್ಯದ ಮತದಾರರು ತಮ್ಮ ಹಕ್ಕು ಚಲಾಯಿಸಲು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿಯ ಚುನಾವಣಾ ಕಣ ಎಂದಿಗಿಂತ ತುಸು ಹೆಚ್ಚೇ ಕಳೆಗಟ್ಟಿದೆ. ಎಂದಿನಂತೆ ರಾಜಕೀಯ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದೆ. ವಿದೇಶಗಳಲ್ಲಿ ಉದ್ಯೋಗಗಳಲ್ಲಿರುವ ರಾಜ್ಯದ ಜನತೆಯೂ ಈ ಬಾರಿಯ ಚುನಾವಣೆಯ ಬಗ್ಗೆ ಕುತೂಹಲದಿಂದಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ಯಾಪ್ ಗಳಲ್ಲಿ ‘ಅನಿವಾಸಿ ಭಾರತೀಯರು ಆನ್ ಲೈನ್ ಮೂಲಕ ಮತದಾನ ಮಾಡಬಹುದು. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ಆನ್ ಲೈನ್ ಪೋರ್ಟಲ್ ನಲ್ಲಿ ಮತ ಚಲಾಯಿಸಬಹುದು” ಎಂದು http://www.nvsp.in/Forms/Forms/form6a?lang=en-GB ಎಂಬ ಲಿಂಕ್ ಇರುವ ಸಂದೇಶ ವೈರಲ್ ಆಗುತ್ತಿದೆ.

ಅನಿವಾಸಿ ಭಾರತೀಯರಿಗೆ ಇಂತಹ ಅವಕಾಶ ಇದೆಯೇ?, ಈ ಬಾರಿಯ ಚುನಾವಣೆಯಲ್ಲಿ ಇಂತಹ ಹೊಸ ಬದಲಾವಣೆ ಮಾಡಲಾಗಿದೆಯೇ ಎಂದು ಪರಿಶೀಲಿಸಿದರೆ, “ಇಲ್ಲ, ಇದು ಸುಳ್ಳು” ಎಂಬ ಉತ್ತರ ದೊರೆಯುತ್ತದೆ. ಈ ರೀತಿ ಆನ್ ಲೈನ್ ಮೂಲಕ ಮತದಾನ ಮಾಡುವ ಕ್ರಮ ಈವರೆಗೂ ಜಾರಿಗೆ ಬಂದಿಲ್ಲ ಹಾಗು ಇದು ದುರುಪಯೋಗವಾಗುವ ಸಾಧ್ಯತೆಯೂ ಹೆಚ್ಚಿದೆ.

ಈ ಬಗ್ಗೆ 'ವಾರ್ತಾ ಭಾರತಿ' ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಸಂಪರ್ಕಿಸಿದ್ದು, “ಆನ್ ಲೈನ್ ಮೂಲಕ ಅನಿವಾಸಿ ಭಾರತೀಯರು ಮತದಾನ ಮಾಡಲು ಸಾಧ್ಯ ಎನ್ನುವ ಸಂದೇಶಗಳು ಅಪ್ಪಟ ಸುಳ್ಳು. ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಪರ್ಯಾಯ ವ್ಯವಸ್ಥೆಯ ಮೂಲಕ ತಮ್ಮ ಮತ ಚಲಾಯಿಸಲು ಅವಕಾಶವಿದೆ. ಇದರ ಹೊರತಾಗಿ ಮತದಾರರು ನೇರವಾಗಿ ಮತದಾನ ಕೇಂದ್ರಕ್ಕೇ ಬಂದು ಮತ ಚಲಾಯಿಸಬೇಕಾಗಿದೆ. ಇಂತಹ ಸುದ್ದಿಗಳನ್ನು ಯಾರೂ ನಂಬಬಾರದು” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News