ಶರೀರದ ತೂಕ ಕಡಿಮೆಯಾಗಬೇಕೇ....? ಕಬ್ಬಿನ ಹಾಲು ಕುಡಿದು ನೋಡಿ

Update: 2018-05-10 11:02 GMT

ಶೀರ್ಷಿಕೆಯನ್ನು ಓದಿ ಅಚ್ಚರಿ ಪಡಬೇಕಿಲ್ಲ. ಬೇಸಿಗೆಯಲ್ಲಿ ತಂಪು ತಂಪಾದ ಕಬ್ಬಿನ ಹಾಲಿಗಿಂತ ಆಹ್ಲಾದಕರ ಪೇಯ ಇನ್ನೊಂದಿಲ್ಲ. ಆದರೆ ಅದು ಶರೀರದ ತೂಕವನ್ನು ಇಳಿಸಿಕೊಳ್ಳಲೂ ನೆರವಾಗುತ್ತದೆ ಎನ್ನುವುದು ನಿಮಗೆ ಗೊತ್ತಿರಲಿ. ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ಅದರಲ್ಲಿ ಕೊಲೆಸ್ಟ್ರಾಲ್ ಎನ್ನುವುದು ಇಲ್ಲವೇ ಇಲ್ಲ. ಜೊತೆಗೆ ಅದು ಶಕ್ತಿ, ಚಯಾಪಚಯ ಮತ್ತು ಜೀರ್ಣಾಂಗದ ಆರೋಗ್ಯವನ್ನು ಹೆಚ್ಚಿಸುತ್ತದೆ. ಉರಿಬಿಸಿಲಿನಲ್ಲಿ ಒಂದು ಗ್ಲಾಸ್ ಕಬ್ಬಿನ ಹಾಲಿನ ಸೇವನೆ ಶರೀರಕ್ಕೆ ತಕ್ಷಣ ಶಕ್ತಿಯನ್ನು ನೀಡಿ ಆಯಾಸವನ್ನು ಪರಿಹರಿಸುತ್ತದೆ.

ಬೇಸಿಗೆಯ ಸಮಯದಲ್ಲಿ ಬೆವರು ಹೆಚ್ಚಾಗುವುದರಿಂದ ಅದರ ಮೂಲಕ ಶರೀರದಲ್ಲಿನ ಇಲೆಕ್ಟ್ರೋಲೈಟ್‌ಗಳು ನಷ್ಟಗೊಳ್ಳುತ್ತವೆ. ಇದರಿಂದಾಗಿ ಶರೀರವು ನಿರ್ಜಲೀಕರಣಗೊಳ್ಳುತ್ತದೆ ಮತ್ತು ಗ್ಲುಕೋಸ್‌ನ ಕೊರತೆಯುಂಟಾಗುತ್ತದೆ. ಈ ಸಮಸ್ಯೆಗೆ ಕಬ್ಬಿನ ಹಾಲಿನ ಸೇವನೆ ಅತ್ಯುತ್ತಮ ಪರಿಹಾರವಾಗಿದೆ.

ಸೂಕ್ತ ಸಮಯದಲ್ಲಿ ಸೂಕ್ತ ಪ್ರಮಾಣದಲ್ಲಿ ಕಬ್ಬಿನ ಹಾಲು ಸೇವಿಸುವುದರಿಂದ ಶರೀರದ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ. 100 ಗ್ರಾಂ ಕಬ್ಬಿನ ಹಾಲಿನಲ್ಲಿ ಕೇವಲ 270 ಕ್ಯಾಲೊರಿಗಳಿರುತ್ತವೆ. ತೂಕವನ್ನು ಇಳಿಸಿಕೊಳ್ಳಲು ಕಬ್ಬಿನ ಹಾಲು ಹೇಗೆ ನೆರವಾಗುತ್ತದೆ ಎನ್ನುವುದರ ಬಗ್ಗೆ ಮಾಹಿತಿಯಿಲ್ಲಿದೆ....

► ಕಬ್ಬಿನ ಹಾಲು ಕೊಬ್ಬು ಮುಕ್ತವಾಗಿದೆ

ಕಬ್ಬಿನ ಹಾಲು ಕೊಬ್ಬುಗಳಿಂದ ಮುಕ್ತವಾಗಿದ್ದು,ನೈಸರ್ಗಿಕ ಸಿಹಿಯನ್ನು ಹೊಂದಿದೆ. ಹೀಗಾಗಿ ಕಬ್ಬಿನ ಹಾಲು ಸೇವಿಸುವಾಗ ಹೆಚ್ಚುವರಿ ಕ್ಯಾಲೊರಿಗಳು ಸೇರಿಕೊಳ್ಳುತ್ತವೆ ಎಂಬ ಚಿಂತೆ ಬೇಡ. ಕಬ್ಬಿನ ಹಾಲಿಗೆ ಹೆಚ್ಚುವರಿ ಸಕ್ಕರೆಯನ್ನು ಸೇರಿಸುವ ಅಗತ್ಯವೂ ಇಲ್ಲ. ಶರೀರದ ತೂಕವನ್ನು ಇಳಿಸಿಕೊಳ್ಳಲು ಬಯಸುವವರು ಖಂಡಿತ ಕಬ್ಬಿನ ಹಾಲನ್ನು ಸೇವಿಸಲೇಬೇಕು.

► ಸಮೃದ್ಧ ನಾರನ್ನು ಹೊಂದಿದೆ

ಕಬ್ಬಿನ ಹಾಲು ಸಮೃದ್ಧ ನಾರನ್ನು ಒಳಗೊಂಡಿದೆ. 100 ಗ್ರಾಂ ಕಬ್ಬಿನ ಹಾಲಿನಲ್ಲಿ ಸುಮಾರು 13 ಗ್ರಾಂ ನಾರು ಇರುತ್ತದೆ. ಇದು ನಮ್ಮ ಶರೀರಕ್ಕೆ ನಾರಿನ ದೈನಂದಿನ ಅಗತ್ಯದ ಶೇ.52ರಷ್ಟನ್ನು ಒದಗಿಸುತ್ತದೆ. ಅದರಲ್ಲಿರುವ ನಾರಿನಿಂದಾಗಿ ಹೊಟ್ಟೆಯು ತುಂಬುವುದರಿಂದ ಆಗಾಗ್ಗೆ ಹಸಿವು ಕಾಡುವುದಿಲ್ಲ ಮತ್ತು ಅತಿಯಾದ ಆಹಾರ ಸೇವನೆಯನ್ನು ತಡೆಯುತ್ತದೆ. ಹೀಗಾಗಿ ತೂಕ ಇಳಿಕೆಗೆ ನೆರವಾಗುತ್ತದೆ.

► ಕೆಟ್ಟ ಕೊಲೆಸ್ಟ್ರಾಲ್‌ನ್ನು ತಗ್ಗಿಸುತ್ತದೆ

ಸ್ಯಾಚುರೇಟೆಡ್ ಫ್ಯಾಟ್,ಟ್ರಾನ್ಸ್ ಫ್ಯಾಟ್ ಮತ್ತು ಕೊಲೆಸ್ಟ್ರಾಲ್‌ಗಳನ್ನು ಒಳಗೊಂಡ ಆಹಾರಗಳು ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ಅಧಿಕ ಪ್ರಮಾಣದಲ್ಲಿ ಶೇಖರಗೊಂಡರೆ ಅದು ಬೊಜ್ಜಿಗೆ ಕಾರಣವಾಗುವ ಜೊತೆಗೆ ಒಳ್ಳೆಯ ಕೊಲೆಸ್ಟ್ರಾಲ್ (ಎಚ್‌ಡಿಎಲ್)ನ ಮಟ್ಟವನ್ನು ತಗ್ಗಿಸುತ್ತದೆ. ಕಬ್ಬಿನ ಹಾಲು ಕೊಲೆಸ್ಟ್ರಾಲ್ ಮುಕ್ತವಾಗಿರುವುದರಿಂದ ಶರೀರದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ನ ವಿರುದ್ಧ ಹೋರಾಡುತ್ತದೆ ಮತ್ತು ತನ್ಮೂಲಕ ಶರೀರದ ತೂಕವು ಸುಲಭವಾಗಿ ಇಳಿಯುವಂತೆ ಮಾಡುತ್ತದೆ.

► ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಕಬ್ಬಿನ ಹಾಲು ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೀರ್ಣ ವ್ಯವಸ್ಥೆ ಮತ್ತು ಆರೋಗ್ಯಕರ ಕರುಳು ಶರೀರ ತೂಕದೊಂದಿಗೆ ನಂಟು ಹೊಂದಿವೆ. ಕರುಳಿನ ಚಲನವಲನಗಳನ್ನು ಉತ್ತಮಗೊಳಿಸಲು ನೆರವಾಗುವ ಕಬ್ಬಿನ ಹಾಲು ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಆಮ್ಲೀಯತೆಗೆ ಚಿಕಿತ್ಸೆ ನೀಡುತ್ತದೆ, ಜೊತೆಗೆ ಎದೆಉರಿಯನ್ನೂ ತಗ್ಗಿಸುತ್ತದೆ ಮತ್ತು ತನ್ಮೂಲಕ ಜೀರ್ಣಾಂಗವನ್ನು ಆರೋಗ್ಯಯುತ ವಾಗಿರಿಸುತ್ತದೆ.

► ಕಬ್ಬಿನ ಹಾಲಿನಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ

ಶರೀರದ ಉರಿಯೂತದಿಂದಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಕಟ್ಟುನಿಟ್ಟಿನ ಪಥ್ಯಾಹಾರ ಮತ್ತು ನಿಯಮಿತ ವ್ಯಾಯಾಮದ ಹೊರತಾಗಿಯೂ ಶರೀರದ ತೂಕವನ್ನು ಇಳಿಸಿಕೊಳ್ಳಲು ಉರಿಯೂತವು ಅಡ್ಡಿಯಾಗುತ್ತದೆ. ಕಬ್ಬಿನ ಹಾಲಿನ ಸೇವನೆ ಉರಿಯೂತವನ್ನು ತಡೆಯಲು ನೆರವಾಗುತ್ತದೆ ಮತ್ತು ಶರೀರವು ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಕಬ್ಬಿನ ಹಾಲಿನ ಸೇವನೆಯೊಂದಿಗೆ ವ್ಯಾಯಾಮ ಮತ್ತು ಸಮತೋಲಿತ ಆಹಾರ ಅಗತ್ಯ ಎನ್ನುವುದನ್ನು ಮರೆಯಬೇಡಿ.

► ಚಯಾಪಚಯವನ್ನು ಹೆಚ್ಚಿಸುತ್ತದೆ

ಚಯಾಪಚಯ ಪ್ರಕ್ರಿಯೆಯ ಮೂಲಕ ಶರೀರವು ನಾವು ಸೇವಿಸಿದ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಹೆಚ್ಚು ಮಾಂಸಖಂಡ ಗಳನ್ನು ಹೊಂದಿರುವವರ ಶರೀರದಲ್ಲಿ ವಿಶ್ರಾಂತಿಯ ಸಮಯ ದಲ್ಲಿಯೂ ಹೆಚ್ಚಿನ ಕ್ಯಾಲೊರಿಗಳು ಬಳಕೆಯಾಗುತ್ತಿರುತ್ತವೆ. ಕಬ್ಬಿನ ಹಾಲು ನಂಜು ನಿರೋಧಕ ಗುಣಗಳನ್ನು ಹೊಂದಿದ್ದು ನಮ್ಮ ಶರೀರವನ್ನು ವಿಷವಸ್ತುಗಳಿಂದ ಮುಕ್ತಗೊಳಿಸುವ ಮೂಲಕ ಚಯಾಪಚಯವನ್ನು ಹೆಚ್ಚಿಸುತ್ತದೆ. ಚಯಾಪಚಯವು ಉತ್ತಮಗೊಂಡರೆ ಅದು ಕೊಬ್ಬನ್ನು ಹೆಚ್ಚು ಪರಿಣಾಮಕಾರಿಯಾಗಿ ದಹಿಸುತ್ತದೆ.

► ಶಕ್ತಿಯನ್ನು ಹೆಚ್ಚಿಸುತ್ತದೆ

 

ಕಬ್ಬಿನ ಹಾಲು ಸಕ್ಕರೆಯನ್ನು ಒಳಗೊಂಡಿದೆ. ಶರೀರವು ಸೂಕ್ತವಾಗಿ ಕಾರ್ಯ ನಿರ್ವಹಿಸಲು ಗ್ಲುಕೋಸ್‌ನ ಅಗತ್ಯವಿದೆ. ವಿಶೇಷವಾಗಿ ವ್ಯಾಯಾಮದ ಬಳಿಕ ಗ್ಲುಕೋಸ್ ಶರೀರಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ. ಸ್ಪೋರ್ಟ್ಸ್ ಡ್ರಿಂಕ್‌ಗಳ ಬದಲು ಕಬ್ಬಿನ ಹಾಲಿನ ಸೇವನೆಯು ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಶರೀರದ ಕ್ಷಮತೆಯನ್ನೂ ಹೆಚ್ಚಿಸುತ್ತದೆ. ಅದು ಕ್ಷಾರೀಯ ಗುಣಗಳನ್ನು ಹೊಂದಿರುವುದರಿಂದ ಶರೀರದಲ್ಲಿ ಆಮ್ಲಗಳನ್ನು ತಟಸ್ಥಗೊಳಿಸುತ್ತದೆ ಮತ್ತು ಶರೀರವು ಶೀಘ್ರವಾಗಿ ತೂಕವನ್ನು ಕಳೆದುಕೊಳ್ಳಲು ನೆರವಾಗುತ್ತದೆ.

ಉತ್ತಮ ಪರಿಣಾಮಕ್ಕಾಗಿ 100ರಿಂದ 200 ಎಂಎಲ್ ಕಬ್ಬಿನ ಹಾಲನ್ನು ಮಧ್ಯಾಹ್ನದ ಸಮಯಗಳಲ್ಲಿ ಸೇವಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News