ವಿಧಾನಸಭಾ ಚುನಾವಣೆ: ರಾಜ್ಯ ರಾಜಧಾನಿಯಲ್ಲಿ ಬಿಗಿಬಂದೋಬಸ್ತ್
ಬೆಂಗಳೂರು, ಮೇ 11: ನಾಳೆ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಯಲ್ಲಿ ರಾಜಧಾನಿ ಬೆಂಗಳೂರು ನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರದ ಪೈಕಿ ಜಯನಗರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ 27 ಕ್ಷೇತ್ರಗಳಲ್ಲಿ ಪೊಲೀಸರು ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಂತಿಯುತ ಮತದಾನ ನಿರ್ವಹಿಸಲು 10,500 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 27 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 7,477 ಮತಗಟ್ಟೆಗಳಿದ್ದು, ಅವುಗಳಲ್ಲಿ 1,469 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ, ಹಾಗೂ 6,008 ಸಾಮಾನ್ಯ ಮತಗಟ್ಟೆಗಳಾಗಿವೆ ಎಂದು ವಿವರಿಸಿದರು.
ಕೇಂದ್ರೀಯ ಮೀಸಲು ಪಡೆಯ 44 ಕಂಪನಿಗಳಿಂದ 4500 ಸಿಬ್ಬಂದಿ, ರಾಜ್ಯ ಮೀಸಲು ಪೊಲೀಸ್ ಪಡೆಯಿಂದ 900, ಸೆಕ್ಟರ್ ಮೊಬೈಲ್(ಪಿಎಸ್‌ಐ) 550, ಸೂಪರವೈಸರಿ ಮೊಬೈಲ್ (ಪಿಐ) 150, ಎಸಿಪಿ ಮೊಬೈಲ್ ಪಾರ್ಟಿ 500, ಮತ ಕ್ಷೇತ್ರ ಉಸ್ತುವಾರಿಗೆ 18 ಡಿಸಿಪಿ, ಜಂಟಿ ಪೊಲೀಸ್ ಆಯುಕ್ತ 1 ಹಾಗೂ ನಾಲ್ವರು ಅಪರ ಪೊಲೀಸ್ ಆಯುಕ್ತರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿ 15ರಿಂದ 20 ಮತಗಟ್ಟೆಗಳಿಗೆ ಒಂದು ಸೆಕ್ಟರ್ ಎಂದು ಗುರುತಿಸಿ, ಸೆಕ್ಟರ್ ಮೊಬೈಲ್‌ಗಳಿಗೆ ಪಿಎಸ್ಸೈ ಮಟ್ಟದ ಅಧಿಕಾರಿಯನ್ನು ನೇಮಿಸಲಾಗಿದೆ. ಪ್ರತಿ 4 ಸೆಕ್ಟರ್ ಮೊಬೈಲ್‌ಗಳ ಮೇಲ್ವಿಚಾರಣೆಗೆ ಒಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ನ್ನು ಸೂಪರವೈಸರಿ ಮೊಬೈಲ್‌ಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಸುನೀಲ್‌ಕುಮಾರ್ ಹೇಳಿದರು.