ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ತಡೆಗೆ ಪಿಐಎಲ್ ಸಲ್ಲಿಕೆ
ಬೆಂಗಳೂರು, ಮೇ 11: ಆರ್.ಆರ್.ನಗರ ಕ್ಷೇತ್ರದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ, ಈ ಕ್ಷೇತ್ರದ ಚುನಾವಣಾ ಫಲಿತಾಂಶ ತಡೆಹಿಡಿಯಬೇಕು ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
ನಗರದ ಸಮರ್ಪಣಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಹೊಸಮನಿ ಹಾಗೂ ದಯಾನಂದ ತಿಪ್ಪೇರುದ್ರಪ್ಪ ಶುಕ್ರವಾರ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿ ಮೇ 15 ಮಂಗಳವಾ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಅರ್ಜಿಯಲ್ಲಿ ಏನಿದೆ: 2018ರ ಮೇ 9ರಂದು ಜಾಲಹಳ್ಳಿಯ ಫ್ಲಾಟ್‌ನಲ್ಲಿ 10 ಸಾವಿರ ಮತದಾರರ ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದ್ದನ್ನು ಪತ್ತೆ ಹಚ್ಚಲಾಗಿದೆ. ಈ ಸಂಬಂಧ ಮುಖ್ಯ ಚುನಾವಣಾಧಿಕಾರಿ, ಸ್ಥಳೀಯ ಶಾಸಕ ಮುನಿರತ್ನ ನಾಯ್ಡು ಸೇರಿದಂತೆ 10 ಜನರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಇದು ವ್ಯಾಪಕ ಭ್ರಷ್ಟಾಚಾರದ ಪ್ರತೀಕ. ಜನತಾ ಪ್ರಾತಿನಿಧ್ಯ ಕಾಯ್ದೆ -1951ರ ಕಲಂ 123ರ ಸ್ಪಷ್ಟ ಉಲ್ಲಂಘನೆ. ಹೀಗಾಗಿ, ಈ ಕ್ಷೇತ್ರದ ಮತ ಪೆಟ್ಟಿಗೆಗಳನ್ನು ತೆರೆದು ಮತ ಎಣಿಕೆ ನಡೆಸಬಾರದು. ಈ ಅರ್ಜಿ ಇತ್ಯರ್ಥ ಆಗುವವರೆಗೆ ಫಲಿತಾಂಶ ತಡೆ ಹಿಡಿಯಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.