ಅಪಾರ್ಟ್ ಮೆಂಟ್ ನಲ್ಲಿ ವೋಟರ್ ಐಡಿ ಪತ್ತೆ ಪ್ರಕರಣ: ಆರ್.ಆರ್. ನಗರದ ಚುನಾವಣೆ ಮುಂದೂಡಿಕೆ

Update: 2018-05-11 14:56 GMT

ಬೆಂಗಳೂರು, ಮೇ 11: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಗುರುತಿನ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ಮೇ 12ರಂದು ನಡೆಯಬೇಕಿದ್ದ ಕ್ಷೇತ್ರದ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ರದ್ದುಪಡಿಸಿದೆ.

ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್‌ಕುಮಾರ್ ಅವರು, ರಾಜರಾಜೇಶ್ವರಿನಗರದ ಚುನಾವಣೆ ಮೇ 28ರಂದು ನಡೆಯಲಿದ್ದು, ಫಲಿತಾಂಶವನ್ನು ಮೇ 31ಕ್ಕೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಮೇ 8ರಂದು ಜಾಲಹಳ್ಳಿಯಲ್ಲಿರುವ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ 9,746 ಮತದಾರರ ಗುರುತಿನ ಚೀಟಿ, ಲ್ಯಾಪ್‌ಟಾಪ್, ನೀರಿನ ಕ್ಯಾನ್ ಪತ್ತೆಯಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭಾವಚಿತ್ರವಿರುವ 5 ಸಾವಿರ ಟಿ ಶರ್ಟ್, 23 ಸಾವಿರ ಬರ್ಮುಡಾ ಹಾಗೂ 95 ಲಕ್ಷ ನಗದು ಪತ್ತೆಯಾಗಿತ್ತು. ಈ ಸಂಬಂಧ ಚುನಾವಣಾ ಆಯೋಗದ ತನಿಖಾ ತಂಡವು 801 ಜನ ಮತದಾರರನ್ನು ವಿಚಾರಣೆ ನಡೆಸಿದಾಗ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಿಂದ ಕುಕ್ಕರ್ ಹಾಗೂ ಹಣದ ಆಮಿಷ ಒಡ್ಡುವ ಪ್ರಯತ್ನ ನಡೆದಿರುವುದು ದೃಢಪಟ್ಟಿತ್ತು ಎನ್ನಲಾಗಿದ್ದು, ಆ ಹಿನ್ನೆಯಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ ಚುನಾವಣೆಯನ್ನು ರದ್ದುಪಡಿಸಲಾಗಿದೆ.

ಹೊಸದಾಗಿ ಈ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತದೆ. ಆರೋಪ ಸಾಬೀತಾದರೆ ಅಕ್ರಮ ಎಸಗಿದ ಅಭ್ಯರ್ಥಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಂಜೀವ್‌ಕುಮಾರ್ ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯಕುಮಾರ್ ಅಕಾಲಿಕ ನಿಧನರಾದ ಜಯನಗರ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರ ಹೊರತುಪಡಿಸಿ ಉಳಿದ 222 ಕ್ಷೇತ್ರಗಳಲ್ಲಿ ಮೇ 12ರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ವರೆಗೆ ಚುನಾವಣೆ ನಡೆಯಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News