ನೀವೆಂದೂ ಬಳಸದ ವಸ್ತುಗಳ ಖರೀದಿಯನ್ನು ನಿಲ್ಲಿಸಲು ಸರಳ ಉಪಾಯಗಳಿಲ್ಲಿವೆ

Update: 2018-05-11 13:36 GMT

ನೀವೆಂದೂ ಬಳಸದ ಎಷ್ಟು ವಸ್ತುಗಳನ್ನು ನೀವು ಖರೀದಿಸಿದ್ದೀರಿ ಎನ್ನುವುದನ್ನು ಎಂದಾದರೂ ಲೆಕ್ಕ ಹಾಕಿದ್ದೀರಾ? ಎಂದಾದರೂ ಪುರುಸೊತ್ತು ಮಾಡಿಕೊಂಡು ಮನೆಯಲ್ಲಿಯ ವಾರ್ಡ್‌ರೋಬ್ ನ್ನೊಮ್ಮೆ ತೆರೆದು ನೋಡಿ. ಕೆಲವರ ಬಳಿ ದುಡ್ಡು ಕೊಟ್ಟು ಖರೀದಿಸಿ ಎಂದೂ ಓದಿರದ ಪುಸ್ತಕಗಳಿರಬಹುದು,ಇನ್ನು ಕೆಲವರ ಬಳಿ ಅಂತಹ ಕಟ್ಲರಿಗಳು,ಸುಗಂಧ ದ್ರವ್ಯಗಳು ಮತ್ತು ವಾಚ್‌ಗಳಿರಬಹುದು. ನಮ್ಮಲ್ಲಿ ಹೆಚ್ಚಿನವರು ಎಷ್ಟೋ ಸಲ ನಮಗೆ ಅಗತ್ಯವೇ ಇಲ್ಲದ ವಸ್ತುಗಳನ್ನು ಖರೀದಿಸಿ ಹಣವನ್ನು ಪೋಲು ಮಾಡುತ್ತೇವೆ. ಅನಗತ್ಯ ವಸ್ತುಗಳ ಅತಿಯಾದ ಖರೀದಿಯ ದೊಡ್ಡ ಸಮಸ್ಯೆಯೆಂದರೆ ಅದು ಹಣದ ಆರ್ಥಿಕ ಶಕ್ತಿಯ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ. ಇಂತಹ ತಪ್ಪುಗಳನ್ನು ಮಾಡದಿರಲು ಐದು ಸರಳ ಉಪಾಯಗಳಿಲ್ಲಿವೆ...

►ಯಾವುದು ಮುಖ್ಯವೆನ್ನುವುದನ್ನು ನಿರ್ಧರಿಸಿ

ನಿಮಗೆ ಯಾವುದು ಮುಖ್ಯ ಎನ್ನುವುದನ್ನು ನಿರ್ಧರಿಸುವುದು ಅನಗತ್ಯ ವಸ್ತುಗಳ ಖರೀದಿಯನ್ನು ನಿಲ್ಲಿಸುವಲ್ಲಿ ಮೊದಲ ಹೆಜ್ಜೆಯಾಗಿದೆ. ಒಮ್ಮೆ ಈ ನಿರ್ಧಾರಕ್ಕೆ ಬಂದ ಬಳಿಕ ಆದ್ಯತೆಯ ಮೇರೆಗೆ ಖರೀದಿ ಪಟ್ಟಿಯೊಂದನ್ನು ಸಿದ್ಧ ಮಾಡಿ. ಅದನ್ನು ಎರಡು ಮೂರು ಬಾರಿ ಪರಿಷ್ಕರಿಸಿ ಮತ್ತು ನೀವೆಂದೂ ಉಪಯೋಗಿಸದಿರಬಹುದಾದ ವಸ್ತಗಳು ಗಮನಕ್ಕೆ ಬಂದರೆ ಅವುಗಳನ್ನು ಹೊಡೆದುಹಾಕಿ. ನೀವೆಂದೂ ಬಳಸಿರದ ವಸ್ತುಗಳು ಮನೆಯಲ್ಲಿ ಎಷ್ಟು ರಾಶಿ ಬಿದ್ದಿವೆ ಎನ್ನುವುದನ್ನು ನೋಡಿಕೊಳ್ಳಿ. ನಮ್ಮ ತಪ್ಪುಗಳು ಅರಿವಾದಾಗ ಮಾತ್ರ ನಾವು ಅನಗತ್ಯ ವಸ್ತುಗಳ ಖರೀದಿಯಿಂದ ದೂರವಿರಬಹುದು ಮತ್ತು ಹಣವನ್ನು ಉಳಿಸಬಹುದು.

►ಬಜೆಟ್ ಮಾಡಿಕೊಳ್ಳಿ

ನಮ್ಮ ಕೈತುಂಬ ಹಣವಿದ್ದಾಗ ಮತ್ತು ಯಾವುದೇ ಬಜೆಟ್ ಇಲ್ಲದಿದ್ದಾಗ ಮಹತ್ವವಿಲ್ಲದ ಹಲವಾರು ವಸ್ತುಗಳು ನಮ್ಮ ಬದುಕಿನಲ್ಲಿ ಸೇರಿಕೊಳ್ಳುತ್ತವೆ. ಬಜೆಟ್ ಎಂದರೆ ಕೇವಲ ನಮ್ಮ ತಿಂಗಳ ಖರ್ಚುಗಳನ್ನು ಬರೆದಿಡುವ ಪಟ್ಟಿಯಲ್ಲ. ನಾವು ಕಷ್ಟಪಟ್ಟು ಗಳಿಸಿದ ಹಣವನ್ನು ಹೇಗೆ ಖರ್ಚು ಮಾಡಬೇಕು ಎನ್ನುವ ಬಗ್ಗೆ ನಿರ್ದಿಷ್ಟ ಗುರಿಯನ್ನು ಒದಗಿಸುವ ಅದು ಕೇವಲ ಅಗತ್ಯ ವಸ್ತುಗಳನ್ನಷ್ಟೇ ಖರೀದಿಸುವಂತೆ ಮಾಡುತ್ತದೆ. ತಿಂಗಳ ವಿವಿಧ ಅಗತ್ಯಗಳಿಗೆ ಎಷ್ಟು ಹಣವನ್ನು ಖರ್ಚು ಮಾಡಬೇಕು ಎನ್ನುವುದನ್ನು ಮೊದಲೇ ನಿಗದಿ ಮಾಡಿಕೊಂಡರೆ ಮತ್ತು ಅದಕ್ಕೆ ಅಂಟಿಕೊಂಡರೆ ಅಗತ್ಯವಾದ ವಸ್ತುಗಳು ಮಾತ್ರ ಮನೆಯನ್ನು ಸೇರುತ್ತವೆ.

►ಖರೀದಿಗೆ ನಗದು ಹಣವನ್ನೇ ಬಳಸಿ

ಕಾರ್ಡ್‌ಗಳನ್ನು ಬಳಸಿ ಶಾಪಿಂಗ್ ಮಾಡುತ್ತಿದ್ದರೆ ಬೇಕಾದ ಮತ್ತು ಬೇಡವಾದ ವಸ್ತುಗಳು ನಮ್ಮ ಬುಟ್ಟಿಯನ್ನು ಸೇರಿಕೊಳ್ಳುತ್ತ ನಮ್ಮಲ್ಲಿ ಕೊಳ್ಳುಬಾಕ ಸಂಸ್ಕೃತಿಗೆ ಕಾರಣವಾಗುತ್ತದೆ. ಆದರೆ ಖರೀದಿಗೆ ಯಾವಾಗಲೂ ನಗದು ಹಣದ ಬಳಕೆಯು ಅದರದೇ ಆದ ಲಾಭಗಳನ್ನು ಹೊಂದಿದೆ. ನಮ್ಮ ಜೇಬಿನಲ್ಲಿ ಎಷ್ಟು ಹಣವಿದೆ ಎನ್ನುವುದನ್ನು ನೋಡಿಕೊಂಡೇ ಖರೀದಿಗಿಳಿಯತ್ತೇವೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಖರೀದಿಯು ಅಗತ್ಯ ವಸ್ತುಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

►ಖರೀದಿಗಳನ್ನು ವಿಳಂಬಿಸಿ

ಕೆಲವರು ಖರೀದಿಗಾಗಿ ಎಂದಿಗೂ ಕಾಯುವುದಿಲ್ಲ. ಸುಂದರವಾದ ಫೋನ್ ಅಥವಾ ಉಡುಪು ನೋಡಿದ ತಕ್ಷಣ ಹಲವರಲ್ಲಿ ಅದನ್ನು ಈಗಲೇ ಖರೀದಿಸಬೇಕೆಂಬ ತುಡಿತವುಂಟಾಗುತ್ತದೆ ಮತ್ತು ಇದೇ ತುಡಿತವು ಹೆಚ್ಚಿನ ಸಂದರ್ಭಗಳಲ್ಲಿ ಅನಗತ್ಯ ವಸ್ತುಗಳ ಖರೀದಿಗೆ ಕಾರಣವಾಗುತ್ತದೆ. ಹೀಗಾಗಿ ಹೊಸ ವಸ್ತುವನ್ನು ಕಂಡು ಖರೀದಿಸುವ ಆಸೆಯಾದರೆ ಅದಕ್ಕೆ ಕನಿಷ್ಠ ಒಂದು ವಾರ ಕಡಿವಾಣ ಹಾಕಿ. ವಾರದ ನಂತರವೂ ಅದೇ ತುಡಿತ ನಿಮ್ಮಲ್ಲಿದ್ದರೆ ಆ ವಸ್ತುವನ್ನು ಖರೀದಿಸಿ. ಏಕೆಂದರೆ ಈ ಅವಧಿಯಲ್ಲಿ ಆ ವಸ್ತು ನಿಮಗೆ ನಿಜವಾಗಿಯೂ ಅಗತ್ಯವಿದೆಯೇ ಇಲ್ಲವೇ ಎನ್ನುವುದನ್ನು ನಿರ್ಧರಿಸಲು ನಿಮಗೆ ಸಾಧ್ಯವಾಗಿರುತ್ತದೆ.

►ಒತ್ತಡದಿಂದ ಖರೀದಿ ಬೇಡವೇ ಬೇಡ

ಕೆಲವರು ಬಾಹ್ಯ ಕಾರಣಗಳಿಂದಾಗಿ ತಮಗೆ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸುತ್ತಾರೆ. ಆ ವಸ್ತು ನಿಮಗೆ ಇಷ್ಟವಿಲ್ಲದಿರಬಹುದು,ಆದರೆ ನಿಮ್ಮ ಸ್ನೇಹಿತರು ಅಥವಾ ಸಹೋದ್ಯೋಗಿಗಳ ಬಳಿ ಆ ವಸ್ತುವಿದೆ ಎಂಬ ಕಾರಣಕ್ಕೆ ನೀವೂ ಅದನ್ನು ಖರೀದಿಸಲು ಬಯಸಿರಬಹುದು. ಇಂತಹ ಒತ್ತಡ ಮಕ್ಕಳಲ್ಲಿ ಮಾತ್ರವಲ್ಲ, ವಯಸ್ಕರಲ್ಲಿಯೂ ಕಂಡು ಬರುತ್ತದೆ. ಇಂತಹ ಬಯಕೆಯನ್ನು ನಿಯಂತ್ರಿಸಲು ಪ್ರಯತ್ನಿಸಿ.

ಅನಗತ್ಯ ಖರೀದಿಗಳಿಂದಾಗಿ ಉಬ್ಬಿದ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ನೋಡಿದಾಗ ರಕ್ತದೊತ್ತಡ ಹೆಚ್ಚುವುದು ಮಾತ್ರ ನಿಜ. ಆದರೆ ವಸ್ತುವೊಂದು ಇತರರ ಬಳಿ ಇರುವುದರಿಂದ ತನಗೂ ಬೇಕು ಎಂಬ ಒತ್ತಡಕ್ಕೆ ಸಿಲುಕದಿದ್ದರೆ ಅನಗತ್ಯ ವಸ್ತುಗಳ ಖರೀದಿಯಿಂದ ಅರ್ಧ ಪಾರಾದಂತೆಯೇ. ನಿಮ್ಮ ಕ್ರೆಡಿಟ್ ಕಾರ್ಡ್ ಸಾಲದ ಹೊರೆ ಹೆಚ್ಚಾದರೆ ಅದರಿಂದ ನೀವೇ ಪಾರಾಗಬೇಕೇ ಹೊರತು ಬೇರೆ ಯಾರೂ ನೆರವಾಗುವುದಿಲ್ಲ. ಹೀಗಾಗಿ ಯಾವುದೇ ವಸ್ತುವನ್ನು ಖರೀದಿಸುವಾಗ ಅದು ನಿಮಗೆ ನಿಜಕ್ಕೂ ಅಗತ್ಯವಿದೆಯೇ,ಅದಿಲ್ಲದೆ ನಿಭಾಯಿಸಲು ಸಾಧ್ಯವಿಲ್ಲವೇ ಎಂಬ ಬಗ್ಗೆ ಎರಡೆರಡು ಬಾರಿ ಯೋಚಿಸಿ. ಇದು ಹಣವನ್ನು ಉಳಿಸಲು ನಿಮಗೆ ಸಾಧ್ಯವಾಗಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News