ಶಾಸಕ ಮುನಿರತ್ನ ವಿರುದ್ಧ ಜಾಮೀನು ರಹಿತ ಮೊಕದ್ದಮೆ ದಾಖಲಿಸಲು ಕೋರ್ಟ್ ಆದೇಶ
ಬೆಂಗಳೂರು, ಮೇ 11: ಆರ್.ಆರ್.ನಗರ ಕ್ಷೇತ್ರದ ಜಾಲಹಳ್ಳಿಯಲ್ಲಿ ಅಕ್ರಮ ವೋಟರ್ ಐಡಿಗಳು ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ವಿರುದ್ಧ ಜಾಮೀನು ರಹಿತ ಮೊಕದ್ದಮೆ ದಾಖಲಿಸಲು ಬೆಂಗಳೂರಿನ 24ನೆ ಎಸಿಎಂಎಂ ನ್ಯಾಯಾಲಯ ಜಾಲಹಳ್ಳಿ ಪೊಲೀಸ್ ಠಾಣಾ ಪೊಲೀಸರಿಗೆ ಆದೇಶಿಸಿದೆ.
ಜಾಲಹಳ್ಳಿ ಪೊಲೀಸರು ಮುನಿರತ್ನ ವಿರುದ್ಧ ಜಾಮೀನು ಸಹಿತ ಪ್ರಕರಣವನ್ನು ದಾಖಲಿಸಿರುವ ಕ್ರಮವನ್ನು ಪ್ರಶ್ನಿಸಿ ರಾಕೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ 24ನೆ ಎಸಿಎಂಎಂ ನ್ಯಾಯಾಲಯ ಈ ಆದೇಶ ನೀಡಿದೆ. ಮುನಿರತ್ನ ಸೇರಿ ಎಲ್ಲ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420, 468, 471ರಡಿ ಪ್ರಕರಣ ದಾಖಲಿಸುವಂತೆ ಕೋರ್ಟ್ ಆದೇಶಿಸಿದೆ.
ಮೇ 8ರಂದು ಜಾಲಹಳ್ಳಿಯಲ್ಲಿರುವ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್ ಬಳಿ ವೋಟರ್ ಐಡಿಗಳು ಪತ್ತೆಯಾದಾಗ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ಕೆಲವು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಜಾಲಹಳ್ಳಿ ಪೊಲೀಸರು, ಮುನಿರತ್ನ ವಿರುದ್ಧ ಜಾಮೀನು ಸಹಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಕೇಶ್ ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.