×
Ad

ಪೋಷಕರ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಸಾಹಿತ್ಯ ನಾಶ: ಸುಮತೀಂದ್ರ ನಾಡಿಗ

Update: 2018-05-11 21:14 IST

ಬೆಂಗಳೂರು, ಮೇ 11: ಮಾತೃಭಾಷೆ ಕನ್ನಡವಾದರೂ ಸಹ ಬಹುತೇಕ ಮಕ್ಕಳಿಗೆ ಕನ್ನಡದಲ್ಲಿ ಓದಲು, ಬರೆಯಲು ಬರುವುದಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ 10 ವರ್ಷಗಳಲ್ಲಿ ಕನ್ನಡ ಸಾಹಿತ್ಯ ನಶಿಸಿ ಹೋಗುತ್ತದೆ ಎಂದು ಹಿರಿಯ ಕವಿ ಡಾ. ಸುಮತೀಂದ್ರ ನಾಡಿಗ್ ಕಳವಳ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ನಯನ ಸಭಾಂಗಣದಲ್ಲಿ ಪ್ರಣತಿ ಪ್ರತಿಷ್ಠಾನದಿಂದ 3 ದಿನಗಳ ಕಾಲ ಆಯೋಜಿಸಿರುವ ‘ಮಂಥನ ಕನ್ನಡ ಸಾಹಿತ್ಯಗಳು-ಸುಗಮ ಸಂಗೀತ ಕಮ್ಮಟ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೋಷಕರ ಇಂಗ್ಲಿಷ್ ವ್ಯಾಮೋಹದಿಂದ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸಲಾಗುತ್ತದೆ. ಹೀಗಾಗಿ ಮಕ್ಕಳು ಕನ್ನಡ ಭಾಷೆಯ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಾರೆ ಎಂದರು.

ಗ್ರಾಮೀಣ ಪ್ರದೇಶದ ಮಕ್ಕಳು ಕನ್ನಡವನ್ನು ಓದಲು ಬರೆಯಲು ಬಲ್ಲವರಾಗಿರುತ್ತಾರೆ. ಆದರೆ, ನಗರ ಪ್ರದೇಶಗಳಿಗೆ ಸಮಸ್ಯೆ ಇದೆ. ಮುಂದಿನ ಪೀಳಿಗೆಗೆ ನಮ್ಮ ಸಾಹಿತ್ಯ , ಕಲೆ, ಸಂಸ್ಕ್ರತಿಯನ್ನು ಉಳಿಸಲು ಎಲ್ಲರೂ ಆಲೋಚಿಸಬೇಕು. ಹೀಗಾಗಿ, ಸಾಹಿತ್ಯ-ಸಂಗೀತದಂತಹ ಅಭಿರುಚಿ ಬೆಳೆಸಬೇಕು ಎಂದು ಅವರು ಕರೆ ನೀಡಿದರು.

ರಾಜ್ಯ ಲಲಿತಾ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಸ್.ಮೂರ್ತಿ ಮಾತನಾಡಿ, ಕನ್ನಡ ಸಾಹಿತ್ಯ ಸಂಸ್ಕೃತಿ ಕಟ್ಟಿ ಬೆಳೆಸುವಲ್ಲಿ ಚಿಕ್ಕ, ಚಿಕ್ಕ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ, ಕೆಲವರು ಸಣ್ಣ ಪುಟ್ಟ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಿಂದೇಟು ಹಾಕುತ್ತಾರೆ. ಇಂತಹ ಕೀಳರಿಮೆ ಬಿಟ್ಟು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಲು ಮುಂದಾಗಬೇಕು. ಹಾಗಾದಾಗ ಮಾತ್ರ ಭವಿಷ್ಯದಲ್ಲಿ ಅವಕಾಶಗಳು ಸಿಗುತ್ತವೆ. ಹೀಗಾಗಿ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಅವರು ಮಕ್ಕಳಿಗೆ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News