ಬೆಂಗಳೂರು:‘ಆಹಾರದ ಭವಿಷ್ಯ: ದ್ವಿದಳ ಧಾನ್ಯಗಳು’ ಕುರಿತ ವಸ್ತು ಪ್ರದರ್ಶನ

Update: 2018-05-11 16:09 GMT

ಬೆಂಗಳೂರು, ಮೇ 11: ದ್ವಿದಳ ಧಾನ್ಯಗಳು ಮನುಷ್ಯನ ಆರೋಗ್ಯಕ್ಕೆ ಅಗತ್ಯವಾದ ಪ್ರೋಟಿನ್, ನಾರು, ಖನಿಜಾಂಶವನ್ನು ಹೇರಳವಾಗಿ ಒದಗಿಸುತ್ತವೆ. ಆಹಾರ ಪದ್ಧತಿಯಲ್ಲಿ ಎಂದಿಗೂ ದ್ವಿದಳ ಧಾನ್ಯಗಳನ್ನು ಕಡೆಗಣಿಸಬಾರದೆಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣಮೂರ್ತಿ ಹೇಳಿದರು.

ಶುಕ್ರವಾರ ಕಸ್ತೂರಬಾ ರಸ್ತೆಯ ಸರ್.ಎಂ.ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಆಯೋಜಿಸಲಾಗಿದ್ದ ‘ಆಹಾರದ ಭವಿಷ್ಯ: ದ್ವಿದಳ ಧಾನ್ಯಗಳು’ ಕುರಿತ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ವಾತಾವರಣ ದ್ವಿದಳ ಧಾನ್ಯಗಳ ಬೆಳೆಗೆ ಸೂಕ್ತವಾಗಿದೆ. ಬೇಡಿಕೆಗೆ ತಕ್ಕಂತೆ ದ್ವಿದಳ ಧಾನ್ಯಗಳ ಉತ್ಪಾದನೆ ಮಾಡಬಹುದಾಗಿದೆ. ಜತೆಗೆ ಮಾರುಕಟ್ಟೆಯ ಬೆಲೆಯಲ್ಲಿಯೂ ಅಷ್ಟೇನು ಹೆಚ್ಚು ವ್ಯತ್ಯಾಸವಿರುವುದಿಲ್ಲ. ದ್ವಿದಳ ಧಾನ್ಯಗಳಲ್ಲಿ ಹೆಚ್ಚು ಖನಿಜಾಂಶ, ಅತ್ಯುತ್ತಮ ಪೋಟ್ಯಾಷಿಯಂ ಮತ್ತು ನಾರಿನಾಂಶ ಇರುವುದರಿಂದ ಆಹಾರದಲ್ಲಿ ಬಳಕೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ನಿರ್ದೇಶಕ ಡಾ.ಮದನಗೋಪಾಲ್ ಮಾತನಾಡಿ, ಸಿರಿಧಾನ್ಯಗಳು ಮತ್ತು ಬೇಳೆಕಾಳುಗಳು ಅತ್ಯುತ್ತಮ ಪೋಷಕಾಂಶಗಳಿಂದ ಕೂಡಿವೆ. ಆಹಾರ ವ್ಯವಸ್ಥೆಯಲ್ಲಿ ಹೆಚ್ಚಾಗಿ ಇವುಗಳನ್ನು ಬಳಕೆ ಮಾಡುವುದರಿಂದ ಮನುಷ್ಯನ ಜೀವಿತಾವಧಿಯೂ ಹೆಚ್ಚುತ್ತದೆ ಎಂದ ಅವರು, ಒಂದು ಕೆಜಿ ಭತ್ತ ಬೆಳೆಯಲು ಸುಮಾರು 8 ಸಾವಿರ ಲೀ ನೀರು ಬೇಕಾಗುತ್ತದೆ. ಜೊತೆಗೆ ಭತ್ತ ಹೆಚ್ಚಾಗಿ ಬೆಳೆಯುವುದರಿಂದ ಪರಿಸರಕ್ಕೆ ಬಿಡುಗಡೆಯಾಗುವ ಪ್ರಮಾಣ ಹೆಚ್ಚಾಗುತ್ತದೆ. ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದೇ ಪ್ರಮಾಣದಲ್ಲಿ ಮಾಂಸ ಉತ್ಪಾದಿಸಲು ಕನಿಷ್ಟ 50ಸಾವಿರ ಲೀಟರ್ ನೀರು ವಿನಿಯೋಗಿಸಬೇಕಾಗುತ್ತದೆ. ಆದರೆ, ನವಣೆ, ಸಾಮೆ, ಊದಲು, ಅರ್ಕಾ ಇತ್ಯಾದಿ ಸಿರಿಧಾನ್ಯಗಳನ್ನು ಬೆಳೆಯಲು ಇಷ್ಟೊಂದು ಪ್ರಮಾಣದ ನೀರು ಅಗತ್ಯವಿಲ್ಲ ಎಂದರು.

ವಿವಿಧ ದೇಶಗಳ ಪ್ರಮುಖ ಆಹಾರ ಪದ್ಧತಿಯಲ್ಲಿ ಬೇಳೆಕಾಳುಗಳ ಬಳಕೆ, ಆರೋಗ್ಯದಲ್ಲಿ ಅವುಗಳ ಮಹತ್ವ, ಸಿರಿಧಾನ್ಯಗಳನ್ನು ಬಳಸಿ ಹೇಗೆ ಆಹಾರ ತಯಾರಿಸಬಹುದು, ದ್ವಿದಳ ಧಾನ್ಯಗಳು ಮತ್ತು ಸಿರಿಧಾನ್ಯಗಳಲ್ಲಿ ಸಿಗುವ ವಿವಿಧ ಪೋಷಕಾಂಶಗಳು ಇತ್ಯಾದಿ ವೈಜ್ಞಾನಿಕ ಮಾಹಿತಿಗಳನ್ನು ಒಳಗೊಂಡ ವಿಡಿಯೋ, ಪೋಸ್ಟರ್‌ಗಳನ್ನು ವಿವ ಸಹಿತ ಪ್ರದರ್ಶಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News