ವಿಧಾನಸಭಾ ಚುನಾವಣೆ ಹಿನ್ನೆಲೆ: ಮೆಟ್ರೋ ದ್ವಾರಗಳು ಬಂದ್, ಬಿಎಂಟಿಸಿ ಸಂಚಾರ ವಿರಳ

Update: 2018-05-11 16:11 GMT

ಬೆಂಗಳೂರು, ಮೇ 11: ನಮ್ಮ ಮೆಟ್ರೋ ನಿಲ್ದಾಣಗಳ ಪ್ರವೇಶದ್ವಾರದಲ್ಲಿ ಕಾರ್ಯನಿರ್ವಹಿಸುವ ಕೆಲ ಭದ್ರತಾ ಸಿಬ್ಬಂದಿಯನ್ನು ವಿಧಾನಸಭಾ ಚುನಾವಣೆಯ ಕಾರ್ಯಕ್ಕೆ ನೇಮಿಸಿರುವುದರಿಂದ ಇಂದು (ಮೇ 12) ಮೆಟ್ರೋ ನಿಲ್ದಾಣಗಳ ಕೆಲದ್ವಾರಗಳನ್ನು ಮುಚ್ಚಲಾಗಿದೆ.

ಪ್ರಸ್ತುತ ನಮ್ಮ ಮೆಟ್ರೋ ಮೊದಲನೇ ಹಂತದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ನೂರಕ್ಕೂ ಅಧಿಕ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಶಸ್ತ್ರ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಲಾಗಿದೆ. ಇನ್ನುಳಿದಂತೆ ಖಾಸಗಿ ಭದ್ರತಾ ಸಿಬ್ಬಂದಿಗಳು ಮಾತ್ರವೇ ಕಾರ್ಯನಿರ್ವಹಿಸಲಿದ್ದಾರೆ. ಹೀಗಾಗಿ, ನಿಲ್ದಾಣಗಳಲ್ಲಿ ಒಂದೆರೆಡು ಪ್ರವೇಶದ್ವಾರ ಮಾತ್ರ ತೆರೆದಿರುತ್ತದೆ.

ನಗರದ ವಿಧಾನಸೌಧ, ಕಬ್ಬನ್‌ಪಾರ್ಕ್, ಸರ್.ಎಂ.ವಿಶ್ವೇಶ್ವರಯ್ಯ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳಲ್ಲಿ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ, ಮೆಟ್ರೋ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನೇಮಿಸಿರುವುದರಿಂದ ಕೆಲ ಪ್ರವೇಶದ್ವಾರಗಳನ್ನು  ಮುಚ್ಚಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಬಹುತೇಕ ಮೆಟ್ರೋ ನಿಲ್ದಾಣಗಳು ಮೂರರಿಂದ ನಾಲ್ಕು ಪ್ರವೇಶ ದ್ವಾರಗಳನ್ನು ಹೊಂದಿವೆ. ಸಿಬ್ಬಂದಿ ಕೊರತೆ ಇರುವಲ್ಲಿ ಒಂದು ಅಥವಾ ಎರಡು ದ್ವಾರಗಳನ್ನು ಮಾತ್ರ ತೆರೆಯಲಾಗುತ್ತದೆ. ಸೀಮಿತ ದ್ವಾರಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಪ್ರಯಾಣಿಕರು ಸಹಕರಿಸಬೇಕು ಎಂದು ಬಿಎಂಆರ್‌ಸಿಎಲ್ ಪ್ರಕಟನೆ ತಿಳಿಸಿದೆ.

ಬಿಎಂಟಿಸಿ ಬಸ್ ಸಿಗುವುದು ವಿರಳ: ಇಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಕರ್ತವ್ಯಕ್ಕೆ ಬಿಎಂಟಿಸಿಯಿಂದ 1,493 ಬಸ್‌ಗಳನ್ನು ಬಾಡಿಗೆ ಪಡೆದಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕ ಸಂಚಾರ ಸೇವೆ ವ್ಯತ್ಯಯವಾಗಲಿದೆ. ಪ್ರಯಾಣಿಕರು ಕಡಿಮೆ ಇರುವ ಮಾರ್ಗದಲ್ಲಿ ಎರಡು ದಿನಗಳ ಕಾಲ ಬಿಎಂಟಿಸಿ ಬಸ್‌ಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ ಕೆಲ ಮಾರ್ಗಗಳಲ್ಲಿ ಬಸ್‌ಗಳ ಸಂಚಾರ ವಿರಳವಾಗಿರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News