ಹಿರಿಯ ಸಾಹಿತಿ ಗಿರಡ್ಡಿ ಗೋವಿಂದರಾಜ ಇನ್ನಿಲ್ಲ

Update: 2018-05-11 16:51 GMT

ಧಾರವಾಡ, ಮೇ 11: ಹಿರಿಯ ಸಾಹಿತಿ ಗಿರಡ್ಡಿ ಗೋವಿಂದರಾಜ ಅವರು ಇಂದು ಹೃದಯಾಘಾತದಿಂದ ನಿಧನರಾದರು. ತನ್ನ ಮನೆಯಲ್ಲಿ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದರು.

ಖ್ಯಾತ ವಿಮರ್ಶಕ, ಧಾರವಾಡ ಸಾಹಿತ್ಯ ಸಂಭ್ರಮದ ರೂವಾರಿಯಾಗಿದ್ದ ಗಿರಡ್ಡಿ ಗೋವಿಂದರಾಜ 1939ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಜನಿಸಿದರು. ಐವತ್ತು ವರ್ಷಗಳ ಕಾಲ ಸಾಹಿತ್ಯ ಕೃಷಿ ಮಾಡಿರುವ ಇವರು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ , ಮುಖ್ಯಸ್ಥರಾಗಿ ನಿವೃತ್ತಿಯಾಗಿದ್ದರು

ಕೇಂದ್ರ ಸಾಹಿತ್ಯ ಅಕಾಡಮಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗಳಿಸಿರುವ ಇವರು, ಧಾರವಾಡದ ಕಲ್ಯಾಣ ನಗರದಲ್ಲಿ ವಾಸವಾಗಿದ್ದರು.

ಗಿರಡ್ಡಿಯವರ ಪ್ರಾಥಮಿಕ ಶಿಕ್ಷಣ ಅಬ್ಬಿಗೇರಿಯಲ್ಲಿಯೆ ಆಯಿತು. ಮಾಧ್ಯಮಿಕ ಶಿಕ್ಷಣವನ್ನು ರೋಣದಲ್ಲಿ ಪೂರ್ಣಗೊಳಿಸಿ 1961ರಲ್ಲಿ ಧಾರವಾಡದಲ್ಲಿರುವ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿಯನ್ನು ಪಡೆದ ಗಿರಡ್ಡಿಯವರು ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ ಇಂಗ್ಲಿಷ್ ಪದವಿಯನ್ನು 1963ರಲ್ಲಿ ಹಾಗೂ ಎಂ.ಎ ಕನ್ನಡ ಪದವಿಯನ್ನು 1969ರಲ್ಲಿ ಪಡೆದರು.1970ರಲ್ಲಿ ಹೈದರಾಬಾದದಲ್ಲಿರುವ ಸೆಂಟ್ರಲ್ ಇನ್ಸ್ಟಿಟ್ಯೂಟದಿಂದ ಡಿಪ್ರೋಮಾ ಇನ್ ಇಂಗ್ಲಿಷ್ ಸ್ಟಡೀಜ್ ಪಡೆದರು. 1973ರಲ್ಲಿ ಇಂಗ್ಲಂಡ್‌ದಲ್ಲಿರುವ ಲ್ಯಾಂಕಾರ್ಸ್ಟ ವಿಶ್ವವಿದ್ಯಾಲಯದಿಂದ ಎಂ.ಎ. (ಭಾಷಾಶಾಸ್ತ) ಪದವಿ ಪಡೆದರು. 1983ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಶೈಲಿಶಾಸದಲ್ಲಿ ಪಿಎಚ್‌ಡಿ ಪದವಿ ಪಡೆದರು.

1963-1964ರವರೆಗೆ ಹಾವೇರಿ ಜಿಲ್ಲೆಯ ಹನುಮನಮಟ್ಟಿಯಲ್ಲಿಯ ಗ್ರಾಮೀಣ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರೆಂದು ವೃತ್ತಿಜೀವನ ಆರಂಭಿಸಿದ ಗಿರಡ್ಡಿಯವರು 1964ರಿಂದ 1970ರವರೆಗೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಬೋಧಿಸಿದರು. 1970ರಿಂದ 1984ರವರೆಗೆ ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. 1984ರಿಂದ 1998ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರವಚಕರಾಗಿ, ಪ್ರಾಧ್ಯಾಪಕರಾಗಿ ಹಾಗು ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 1999 ಮಾರ್ಚದಲ್ಲಿ ನಿವೃತ್ತರಾದರು.

ಗಿರಡ್ಡಿ ಗೋವಿಂದರಾಜರು ಸೃಜನಶೀಲ ಸಾಹಿತ್ಯ ಹಾಗು ವಿಮರ್ಶೆ ಎರಡರಲ್ಲೂ ಖ್ಯಾತರಾಗಿದ್ದಾರೆ. 


ಇವರ ಕೃತಿಗಳು ಇಂತಿವೆ:
ಕಾವ್ಯ
ಶಾರದಾಲಹರಿ (1956) ರಸವಂತಿ (1961) ಮರ್ಲಿನ್ ಮನ್ರೋ ಮತ್ತು ಇತರ ಪದ್ಯಗಳು(1978)

ಕಥಾಸಂಕಲನ: ಆ ಮುಖಾ-ಈ ಮುಖಾ (1970) ಮಣ್ಣು (1976) ಹಂಗು ಮತ್ತು ಇತರ ಕತೆಗಳು (1978) ಒಂದು ಬೇವಿನಮರದ ಕಥೆ (1981)
ಆಯ್ದ ಕಥೆಗಳು (1994)

ಸಾಹಿತ್ಯ ವಿಮರ್ಶೆ:  ಸಣ್ಣ ಕತೆಯ ಹೊಸ ಒಲವುಗಳು (1965) ಜನಪದ ಕಾವ್ಯ (1971) ನವ್ಯ ವಿಮರ್ಶೆ (1975)
ಕಾದಂಬರಿ: ವಸ್ತು ಮತ್ತು ತಂತ್ರ (1976) ಸಾಹಿತ್ಯ ಮತ್ತು ಪರಂಪರೆ (1981) ಇಂಗ್ಲಂಡಿನ ರಂಗಭೂಮಿ (1989) ಸಾತತ್ಯ (1992) ವಚನ ವಿನ್ಯಾಸ (1997) ಕನ್ನಡ ಕಾವ್ಯಪರಂಪರೆ ಮತ್ತು ಬೇಂದ್ರೆಯವರ ಕಾವ್ಯ (2001) ಸಣ್ಣ ಕತೆ (1981) ಕನ್ನಡ ಕಥಾಸಂಕಲನ (1983)

ಆಧುನಿಕ ಕನ್ನಡ ಕಾವ್ಯ: ಉತ್ತರ ಕರ್ನಾಟಕದ ಕೊಡುಗೆ (1986) ಮರೆಯಬಾರದ ಹಳೆಯ ಕತೆಗಳು (1999) ಯುವಕಾವ್ಯ-1998 (2000)
ಯುವಕಥೆ-1999 (2001) ಬಹುಮಾನಿತ ಕೃತಿಗಳು-1997 (1999) ಬಹುಮಾನಿತ ಕೃತಿಗಳು-1998 (2000) ಬಹುಮಾನಿತ ಕೃತಿಗಳು-1999 (2001) ಕೆ.ವಿ.ತಿರುಮಲೇಶರ ಸಾಹಿತ್ಯ (2000)

ಕನ್ನಡ ನವೋದಯ ಕಾವ್ಯ: ಮಂಗಳೂರು ಕೇಂದ್ರ (2001) ಕನ್ನಡ ನವೋದಯ ಕಾವ್ಯ : ಮೈಸೂರು (2001) ಕುಂ.ವೀ. ಅವರ ಕಥಾಸಾಹಿತ್ಯ (2001)
ಮಿರ್ಜಿ ಅಣ್ಣಾರಾಯರ ಸಾಹಿತ್ಯ (2001) ಓದುವ ದಾರಿಗಳು (2001)

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಪಾರಿಭಾಷಿಕ ಮಾಲೆ’ಯ 16 ಪುಸ್ತಕಗಳು
ಸಂಕ್ರಮಣ ಕಾವ್ಯ (1964) ಹವ್ಯಾಸಿ ರಂಗಭೂಮಿಯ ಸಮಸ್ಯೆಗಳು (1980) ದಶವಾರ್ಷಿಕ ವಿಮರ್ಶೆಗಳು (1986)

ಶತಮಾನದ ಸಂಕಲನಗಳು’ ಮಾಲೆಯ 6 ಸಂಪುಟಗಳ ಪ್ರಧಾನ ಸಂಪಾದಕತ್ವ
ಸಮಗ್ರ: ಸಮಗ್ರ ಸೃಜನ (2001) ಸಮಗ್ರ ವಿಮರ್ಶೆ-1 (2001) ಸಮಗ್ರ ವಿಮರ್ಶೆ-2 (2001)

ಪತ್ರಿಕಾ ಸಂಪಾದನೆ: ಸಂಕ್ರಮಣ’ ದ್ವೈಮಾಸಿಕಕ್ಕೆ 1964-1974ರ ಅವಧಿಯಲ್ಲಿ ಸಂಪಾದಕ ಮಂಡಲಿಯಲ್ಲಿ ಕಾರ್ಯ ನಿರ್ವಹಿಸಿದರು.

ಸದಸ್ಯತ್ವ:  ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ (1978-1981) ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ (1981-1984, 1987-1991, 1995-1998) ಮೈಸೂರಿನ ರಂಗಾಯಣ ರಂಗಸಮಾಜ’ದ ಆಡಳಿತ ಮಂಡಳಿಯ ಸದಸ್ಯ, ಜ್ಞಾನಪೀಠ ಪ್ರಶಸ್ತಿ ಸಮಿತಿಯ ಕನ್ನಡ ಭಾಷಾ ಮಂಡಳಿಯ ಸದಸ್ಯ ಸಂಚಾಲಕ (1995 ಹಾಗು 1998) ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, (1998-2001) ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ (1998-2001) ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಮಂಡಳಿಯ ಮತ್ತು ಕಾರ್ಯಕಾರಿಯ ಸದಸ್ಯ (1998-2001) ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಮಂಡಳಿಯ ಮತ್ತು ಕಾರ್ಯಕಾರಿಯ ಸದಸ್ಯ (1998-2001) ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ (1998-2001) ಪಂಪ ಪ್ರಶಸ್ತಿ ಆಯ್ಕೆ ಸಮಿತಿ (1998-2001) ಅತ್ತಿಮಬ್ಬೆ ಪ್ರಶಸ್ತಿ ಆಯ್ಕೆ ಸಮಿತಿ (1998-2001) ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ (1998-2001) ಕರ್ನಾಟಕ ವಿಶ್ವವಿದ್ಯಾಲಯ,ಮೈಸೂರು ವಿಶ್ವವಿದ್ಯಾನಿಲಯ, ಮಂಗಳೂರು ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾನಿಲಯ, ಗುಲ್ಬರ್ಗ ವಿಶ್ವವಿದ್ಯಾಲಯ ಇವುಗಳ ಅಧ್ಯಯನ ಮಂಡಳಿಗಳ ಸದಸ್ಯ (ವಿವಿಧ ಕಾಲಾವಧಿಗಳಲ್ಲಿ) ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸದಸ್ಯ (2001)

ನಾಟಕ, ಸಿನಿಮಾ
ಗಿರಡ್ಡಿಯವರು ಕಲಬುರ್ಗಿಯಲ್ಲಿದ್ದಾಗ ರಂಗಮಾಧ್ಯಮ’ ಎನ್ನುವ ನಾಟಕ ಸಂಸ್ಥೆಯನ್ನು ಸ್ಥಾಪಿಸಿದರು. ಪುಟ್ಟಣ್ಣ ಕಣಗಾಲ ನಿರ್ದೇಶಿಸಿದ ಕಥಾಸಂಗಮ ಚಲನಚಿತ್ರದಲ್ಲಿ ಇವರ ಕತೆ ಹಂಗು’ ಚಿತ್ರಣವಾಗಿದೆ. ಹಂಗು’ ಕಥೆಯ ಹಿಂದಿ ರೂಪಾಂತರ ಉಪಕಾರ’ ಎನ್ನುವ ಹೆಸರಿನಲ್ಲಿ ದಿಲ್ಲಿ ದೂರದರ್ಶನದ ಧಾರಾವಾಹಿ ಮಾಲಿಕೆಯಲ್ಲಿ ಪ್ರಸಾರವಾಗಿದೆ. ಹಲವಾರು ನಾಟಕಗಳಲ್ಲಿ ಅಭಿನಯ ಹಾಗೂ ನಿರ್ದೇಶನ ಮಾಡಿದ್ದಾರೆ.
ಗೌರವ-ಪ್ರಶಸ್ತಿ
ಭಾಷಾ ಶಾಸದಲ್ಲಿ ಎಮ್.ಎ. ಮಾಡಲು ಬ್ರಿಟಿಷ್ ಕೌನ್ಸಿಲ್ ಶಿಷ್ಯವೇತನ (1972-73) ಒಡಿಸಾ ರಾಜ್ಯದ ಸಾಹಿತ್ಯಿಕ, ಸಾಂಸ್ಕೃತಿಕ ಅಧ್ಯಯನಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಆಮಂತ್ರಣ, ನೆರವು (1975) ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (1992) ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೋಷಿಪ್ (1993) ನವ್ಯ ವಿಮರ್ಶೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಥಮ ಬಹುಮಾನ (1970) ನವ್ಯ ವಿಮರ್ಶೆ ಕೃತಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಥಮ ಬಹುಮಾನ (1971)

ಕಾದಂಬರಿ: ವಸ್ತು ಮತ್ತು ತಂತ್ರ ಕೃತಿಗೆ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಬಹುಮಾನ, ಸಾಹಿತ್ಯ ಮತ್ತು ಪರಂಪರೆ ಕೃತಿಗೆ ರ್ಆ.ಎಸ್.ನಾಯಡು ಬಹುಮಾನ, ಸಾತತ್ಯ ಕೃತಿಗೆ ವಿ.ಎಂ.ಇನಾಮದಾರ ಪ್ರಶಸ್ತಿ, ಸಾತತ್ಯ ಕೃತಿಗೆ ಸ.ಸ.ಮಾಳವಾಡ ಪ್ರಶಸ್ತಿ, ವಚನ ವಿನ್ಯಾಸ ಕೃತಿಗೆ ಇಳಕಲ್ಲ ಮಠದ ಪ್ರಶಸ್ತಿ.

2001ರಲ್ಲಿ ಗಿರಡ್ಡಿ ಗೋವಿಂದರಾಜರಿಗೆ ತಲಸ್ಪರ್ಶಿ ಎನ್ನುವ ಅಭಿನಂದನ ಗ್ರಂಥವನ್ನು ಸಮರ್ಪಿಸಲಾಯಿತು. ಈ ಕೃತಿಯನ್ನು ಮನು ಬಳಗಾರ ಹಾಗು ಜಿ.ಎಂ.ಹೆಗಡೆ ಸಂಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News