ಸ್ವತಂತ್ರವಾಗಿ ಸರಕಾರ ರಚನೆ ಮಾಡುತ್ತೇವೆ: ಕೆ.ಸಿ ವೇಣುಗೋಪಾಲ್
ಬೆಂಗಳೂರು, ಮೇ 12: ರಾಜ್ಯದಲ್ಲಿ ಮತ್ತೊಂದು ಅವಧಿಗೆ ಸ್ವತಂತ್ರವಾಗಿ ಸರಕಾರ ರಚನೆ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೆರಡು ದಿನಗಳಲ್ಲಿ ಚುನಾವಣಾ ಫಲಿತಾಂಶ ಬರುತ್ತೆ. ನಾವು ಸರಕಾರ ರಚನೆ ಮಾಡುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದರು.
ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕೆ ರಾಜ್ಯದ ಮತದಾರರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಎಲ್ಲ ನಾಯಕರು, ಅಭ್ಯರ್ಥಿಗಳ ಜೊತೆ ಬೆಳಗ್ಗೆಯಿಂದ ಸಂಜೆಯವರೆಗೂ ಸಂಪರ್ಕದಲ್ಲಿ ಇದ್ದೆ. ಚುನಾವಣೆ ಮುಗಿದ ಬಳಿಕ ನಮಗೆ ಭರವಸೆ ಬಂದಿದೆ. ನಾವು ಮತ್ತೆ ಅಧಿಕಾರ ಚಲಾಯಿಸುತ್ತೇವೆ ಎಂದು ವೇಣುಗೋಪಾಲ್ ಹೇಳಿದರು.
ಬಿಜೆಪಿಯವರು ನಿನ್ನೆ ರಾತ್ರಿಯವರೆಗೂ ನಮ್ಮ ಮುಖಂಡರು, ಅಭ್ಯರ್ಥಿಗಳು, ಅವರ ಆಪ್ತರು, ಸ್ನೇಹಿತರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೂಲಕ ದಾಳಿ ನಡೆಸಿದ್ದಾರೆ. ಆದರೆ, ನಾವು ಅವರ ಇಂತಹ ದಾಳಿಗಳಿಗೆಲ್ಲ ಹೆದರುವುದಿಲ್ಲ ಎಂದು ಅವರು ತಿಳಿಸಿದರು.
ಬಿಜೆಪಿಯವರು ಹಿಂದುತ್ವದ ಆಧಾರದ ಮೇಲೆ ಮತ ವಿಭಜನೆ ಮಾಡಲು ಮುಂದಾಗಿದ್ದರು. ಆದರೆ, ಅದ್ಯಾವುದು ಫಲ ನೀಡಿಲ್ಲ. ಇನ್ನೆರೆಡು ದಿನಗಳಲ್ಲಿ ಫಲಿತಾಂಶ ಬರುತ್ತದೆ. ನಾವು ಸರಕಾರ ರಚನೆ ಮಾಡುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದು ವೇಣುಗೋಪಾಲ್ ಹೇಳಿದರು.