×
Ad

ಬೆಂಗಳೂರು ಗ್ರಾಮಾಂತರ: ಶಾಂತಿಯುತ ಮತದಾನ

Update: 2018-05-12 22:13 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 12: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಯುವ ಮತದಾರರಿಂದ ಹಿರಿಯ ನಾಗರಿಕವರೆಗೂ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು, ಶಾಂತಿಯುತ ಮತದಾನ ನಡೆದಿದೆ.

ಗ್ರಾಮಾಂತರ ಪ್ರದೇಶದ ಪ್ರತಿ ಮತಗಟ್ಟೆಗಳಲ್ಲಿಯೂ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಲು ಕಾತುರದಿಂದ ಕಾಯುತ್ತಿದ್ದ ದೃಶ್ಯಗಳು ಕಂಡು ಬಂದವು. ಮತಗಟ್ಟೆಗಳಲ್ಲಿ ಅಕ್ರಮ ನಡೆಯಬಾರದು ಎಂಬ ಉದ್ದೇಶದಿಂದ ಎಲ್ಲ ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು.

ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ದೇವನಹಳ್ಳಿ ಕ್ಷೇತ್ರದ ತಾಲೂಕುಗಳು ಮತ್ತು ಹೋಬಳಿ ಮಟ್ಟದಲ್ಲಿಯೂ ವಿಶೇಷವಾಗಿ ಪಿಂಕ್ ಮತಗಟ್ಟೆಗಳು ಆಕರ್ಷಣೀಯವಾಗಿದ್ದು, ಮಹಿಳೆಯರೇ ಕಾರ್ಯ ನಿರ್ವಹಿಸುತ್ತಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಂದು ಮತದಾನ ಮಾಡಿದರು.

ಮತಯಂತ್ರ ದೋಷ: ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಮೂರು ಕಡೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತದಾನ ಸ್ಥಗಿತ ಮಾಡಲಾಗಿತ್ತು. ಇಲ್ಲಿನ ಇಸ್ಲಾಂಪುರದ ಸರಕಾರಿ ಉರ್ದು ಪ್ರಾಥಮಿಕ ಶಾಲೆ(ಮತಗಟ್ಟೆ 189)ಯಲ್ಲಿನ ಮತಗಟ್ಟೆಯಲ್ಲಿ ಬೆಳಗ್ಗೆ 11.30ರಿಂದ ಅರ್ಧ ಗಂಟೆ ಮತದಾನ ಪ್ರಕ್ರಿಯೆ ಸ್ಥಗಿತವಾಗಿತ್ತು.

ದರ್ಗಾ ಜೋಗಿಹಳ್ಳಿಯಲ್ಲಿ ಮತಗಟ್ಟೆ 192ರಲ್ಲಿ ಇವಿಎಂ ಯಂತ್ರ ಆರಂಭದ ಹಂತದಲ್ಲಿಯೇ ಸರಿಯಾಗಿ ಕೆಲಸ ಮಾಡದ ಪರಿಣಾಮ ಒಂದು ಗಂಟೆ ತಡವಾಗಿ ಮತದಾನ ಆರಂಭವಾಯಿತು. ಲಕ್ಷ್ಮೀ ದೇವಿಪುರ ಮತಗಟ್ಟೆಯಲ್ಲಿಯೂ ಕೆಲಕಾಲ ಮತಯಂತ್ರದಲ್ಲಿ ದೋಷ ಉಂಟಾಗಿರುವ ಘಟನೆಗಳು ಸಂಭವಿಸಿವೆ. ನೆಲಮಂಗಲ ತಾಲೂಕಿನ ಮೈಲನಹಳ್ಳಿ, ಕಾಚನಹಳ್ಳಿ, ಮಾದನಾಯಕನಹಳ್ಳಿ ಗ್ರಾಮಗಳಲ್ಲಿಯೂ ಇವಿಎಂ ಯಂತ್ರದಲ್ಲಿ ದೋಷ ಕಾಣಿಸಿಕೊಂಡಿದೆ.

ಆರಕ್ಷತೆಗೂ ಮೊದಲು ಮತದಾನ: ದೊಡ್ಡ ಬಳ್ಳಾಪುರದ ಸೋಮೇಶ್ವರ ಬಡಾವಣೆ ನಿವಾಸಿ ಪಿಡಿಒ ಮಂಜುಳಾ ಅವರ ಪುತ್ರಿ ಕೆ.ಎಲ್. ಗೀತಾ ಸರಕಾರಿ ಪಿಯು ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಳಿಕ ಮೇಘಾಂಜಲಿ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿದ್ದ ಆರತಕ್ಷತೆಗೆ ಹೊರಟರು.

ವಿವಿ ಪ್ಯಾಟ್ ತಂದ ಸಂತಸ: ತಾವು ಯಾವ ಪಕ್ಷಕ್ಕೆ ಮತ ಚಲಾಯಿಸಿದ್ದೇವೆ ಎಂದು ವಿವಿ ಪ್ಯಾಟ್ ಯಂತ್ರಗಳಲ್ಲಿ ಪ್ರದರ್ಶನವಾಗಿದ್ದನ್ನು ನೋಡಿ ಜನರು ಖುಷಿಯಾಗಿದ್ದಾರೆ. ತಾವು ಯಾರಿಗೆ ಮತ ಹಾಕಿದ್ದೇವೆ ಎಂದು ಸುಲಭವಾಗಿ ಪ್ರದರ್ಶನವಾಗಿರುವುದು ಸಂತಸದ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮತದಾನ ಆರಂಭವಾದಾಗಿನಿಂದ ಇಲ್ಲಿಯವರೆಗೂ ನಡೆದ ಎಲ್ಲ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಿದ್ದೇನೆ. ಹಲವಾರು ಜನ ನಾಯಕರನ್ನು ಕಂಡಿದ್ದೇನೆ. ಈ ಚುನಾವಣೆಯಲ್ಲಿಯೂ ಮತದಾನ ಮಾಡಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಬೇಕು.
-ಬಚ್ಚಣ್ಣ, 95 ವರ್ಷದ ಅಜ್ಜ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News