ಸಿರಿಯ ಎಂಬ ಕ್ರೂರ ಅರಾಜಕತೆ

Update: 2018-05-12 18:29 GMT

  ಒಂದೆಡೆ ರಶ್ಯ ತನ್ನ ಹಿತಾಸಕ್ತಿಗಳ ರಕ್ಷಣೆಗಾಗಿ ಸಿರಿಯದ ಸರಕಾರ ಮತ್ತದರ ಮೈತ್ರಿ ಪಡೆಗಳಿಗೆ ಬೆಂಬಲವಾಗಿ ವೈಮಾನಿಕ ದಾಳಿಗಳ ಮೂಲಕ ನೇರ ಯುದ್ಧದಲ್ಲಿ ಭಾಗಿಯಾಗಿದ್ದರೆ, ಪಕ್ಕದ ಟರ್ಕಿ ರಾಷ್ಟ್ರ ಕೂಡ ಸರಕಾರಿ ವಿರೋಧಿ ಬಂಡುಕೋರರ ಜೊತೆ ನಿಂತು ಸಿರಿಯ ಯುದ್ಧದಲ್ಲಿ ನೇರವಾಗಿ ಭಾಗಿಯಾಗಿದೆ. ಅಷ್ಟೇ ಅಲ್ಲದೆ ಉತ್ತರ ಸಿರಿಯದ ಒಂದು ದೊಡ್ಡ ಭೂ ಪ್ರದೇಶವನ್ನು ಆಕ್ರಮಿಸಿ ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆ. ರಶ್ಯ ಇರಾನ್ ನೇರವಾಗಿ ಸಿರಿಯದ ಸರಕಾರದೊಂದಿಗೆ ಕೈಜೋಡಿ ಸಿದ್ದರೆ ಅಮೆರಿಕ, ಟರ್ಕಿ ನೇರವಾಗಿ ಸರಕಾರಿ ವಿರೋಧಿ ಬಂಡುಕೋರರೊಂದಿಗೆ ಕೈಜೋಡಿಸಿದೆ.

ಸಿರಿಯ ಇಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬಹು ಚರ್ಚಿತ ರಾಷ್ಟ್ರ. ಅಲ್ಲಿನ ವಿದ್ಯಮಾನಗಳು ಇಂದು ಜಗತ್ತಿನ ಜನರ ಹೃದಯ ಗಳನ್ನು ಹಿಂಡುತ್ತಿದೆ. ಅಲ್ಲಿ ಸಾಯುತ್ತಿರುವ ಮುದ್ದು ಮಕ್ಕಳು, ಛಿದ್ರ ಗೊಂಡು ಬಿದ್ದಿರುವ ಮಾನವ ದೇಹಗಳು, ಮೈತುಂಬಾ ಗಾಯಗಳಿಂದ ನರಳುತ್ತಿರುವ ಮಾನವ ಜೀವಿಗಳು, ಅಂಗಹೀನವಾಗಿ ಬಳಲುತ್ತಿರುವ ಜೀವಗಳು, ಕುಸಿದು ಪಾಳು ಬಿದ್ದಿರುವಂತೆ ತೋರುವ ನಗರಗಳು, ನೆಲ ಸಮವಾಗಿರುವ ಆಸ್ಪತ್ರೆಗಳು ಹಾಗೂ ಶಾಲೆಗಳು, ಬಾಂಬ್ ದಾಳಿಗಳ ಭಾರೀ ಸ್ಫೋಟಗಳಿಂದ ಎದ್ದಿರುವ ಧೂಳುಗಳ ಮಧ್ಯೆ ಇದ್ದ ಸೂರುಗಳನ್ನು ಕಳೆದುಕೊಂಡು ನೊಂದು ಆರ್ತನಾದಗೈಯುತ್ತಿರುವ ಮಹಿಳೆಯರು, ಹೇಗೆಂದರೆ ಹಾಗೆ ಜನರನ್ನು ಜೈಲಿಗೆ ದೂಡಿ ಮಾಡುತ್ತಿರುವ ಚಿತ್ರ ಹಿಂಸೆಗಳು, ಕೊಲೆಗಳು, ಮಹಿಳೆಯರ ಮೇಲೆ ಸೇನೆ ಮಾಡುತ್ತಿರುವ ಅತ್ಯಾಚಾರಗಳು, ಹೀಗೆ ಹತ್ತುಹಲವು ಭೀಕರ ಚಿತ್ರಣಗಳು ದಿನನಿತ್ಯ ಕಾಣಲು ತೊಡಗಿ ಬಹಳ ವರ್ಷಗಳಾಗಿವೆ. ಸಿರಿಯ ಎಂಬ ಈ ರಾಷ್ಟ್ರದಲ್ಲಿ ಆಂತರಿಕ ಯುದ್ಧ ಎಂಟು ವರ್ಷಗಳನ್ನು ದಾಟಿದೆ.

ಸಿರಿಯ 1946ರಲ್ಲಿ ಫ್ರೆಂಚ್‌ರ ಹಿಡಿತದಿಂದ ಹೊರಬಂದಿತು. ಮತ್ತೆ 1949ರಲ್ಲೇ ಕ್ಷಿಪ್ರ ದಂಗೆ ನಡೆದು ಚುನಾಯಿತ ಸರಕಾರದ ಹಿಡಿತ ತಪ್ಪಿ ಸೇನಾಡಳಿತಕ್ಕೆ ಒಳಪಟ್ಟಿತು. ನಂತರ ಮತ್ತೆರಡು ಕ್ಷಿಪ್ರ ದಂಗೆಗಳು ನಡೆದವು. 1954ರ ವೇಳೆಗೆ ಸೇನಾಡಳಿತದ ವಿರುದ್ಧ ಜನರ ಬಂಡೇಳು ವಿಕೆಯಿಂದಾಗಿ ‘ನಾಗರಿಕ ಸರಕಾರ’ ಸ್ಥಾಪನೆಯಾಯಿತು. 1958ರಿಂದ ಅಲ್ಪ ಅವಧಿಯವರೆಗೆ ಈಜಿಪ್ಟಿನ ಭಾಗವಾಗಿ ಸೇರಿ ಕೊಂಡಿತ್ತು. ಆಗ ಪಾರ್ಲಿಮೆಂಟರಿ ವ್ಯವಸ್ಥೆಯ ಬದಲಿಗೆ ಕೇಂದ್ರೀಕೃತ ಅಧ್ಯಕ್ಷೀಯ ಮಾದರಿ ಸರಕಾರ ಸ್ಥಾಪನೆ ಮಾಡಲಾಯಿತು. ಇದರ ನಂತರವೂ ಹಲವು ಕ್ಷಿಪ್ರದಂಗೆಗಳು ನಡೆದವು. 1971ರಲ್ಲಿ ಅಲ್ಪಸಂಖ್ಯಾತ ಅಲಾವೀಸಮುದಾಯದ ಹಫೀಝ್ ಅಲ್-ಅಸ್ಸಾದ್ ತನ್ನನ್ನು ತಾನೇ ಅಧ್ಯಕ್ಷ ನೆಂದು ಘೋಷಿಸಿಕೊಂಡು ಸಾಯುವವರೆಗೂ ಆಡಳಿತ ನಡೆಸಿದರು. 2000ದಲ್ಲಿ ಮರಣ ಹೊಂದಿದರು. ಈತನ ಕಾಲದಲ್ಲಿ ಸಿರಿಯನ್ ರೀಜನಲ್ ಬ್ರಾಂಚ್ ಎಂಬ ಏಕಪಕ್ಷದ ನಿರಂಕುಶ ಆಡಳಿತವಿತ್ತು. 1973 ರಲ್ಲಿ ಹಫೀಝ್ ಅಲ್-ಅಸ್ಸಾದ್ ಹೊಸ ಸಂವಿಧಾನ ಜಾರಿಗೊಳಿಸಿ ಅದರಲ್ಲಿ ಮೊದಲಿದ್ದ ಕೇವಲ ಮುಸ್ಲಿಂ ವ್ಯಕ್ತಿ ಮಾತ್ರ ಅಧ್ಯಕ್ಷರಾಗಬಹು ದೆಂಬ ಕಲಮನ್ನು ತೆಗೆದುಹಾಕಿದ್ದರು. ಅದು ರಾಷ್ಟ್ರೀಯ ಬಿಕ್ಕಟ್ಟಿಗೆ ಕಾರಣ ವಾಗಿತ್ತು. ಇದರ ವಿರುದ್ಧ ‘ಮುಸ್ಲಿಂ ಬ್ರದರ್ ಹುಡ್’ ಎಂಬ ಮುಸ್ಲಿಂ ಮೂಲಭೂತವಾದಿ ಸಂಘಟನೆ ದೇಶಾದ್ಯಂತ ಜನರನ್ನು ಧರ್ಮದ ಆಧಾರದಲ್ಲಿ ಬಡಿದೆಬ್ಬಿಸಿತು. ಅಧ್ಯಕ್ಷ ಅಸ್ಸಾದ್ ರನ್ನು ಅಲ್ಲಾಹುವಿನ ಶತ್ರು ಎಂದು ಪ್ರಚಾರ ಮಾಡಿ ಸರಕಾರದ ವಿರುದ್ಧ ಧರ್ಮಯುದ್ಧ (ಜಿಹಾದ್)ಘೋಷಿಸಿತು. ಸರಣಿಯೋಪಾದಿಯಲ್ಲಿ ಸಶಸ್ತ್ರ ದಂಗೆಗಳನ್ನು ಸಂಘಟಿಸಿ ದರೂ ಅಸ್ಸಾದ್ ಸರಕಾರ ಬಿದ್ದಿರಲಿಲ್ಲ. ಅಸ್ಸಾದ್ ರ ಮರಣಾನಂತರ ಅವರ ಮಗ ಬಶರ್ ಅಲ್ ಅಸ್ಸಾದ್ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದರು. ಹೊಸ ಅಧ್ಯಕ್ಷರು ರಾಷ್ಟ್ರದಲ್ಲಿ ಪ್ರಜಾತಾಂತ್ರಿಕ ಬದಲಾವಣೆಗಳನ್ನು ತರಬಹು ದೆಂಬ ನಿರೀಕ್ಷೆ ಜನರದ್ದಾಗಿತ್ತು. ಆದರೆ ಅದಾಗಲಿಲ್ಲ. 2011ರಲ್ಲಿ ಟ್ಯುನೀಷಿ ಯಾದಲ್ಲಿ ಆರಂಭವಾದ, ಅರಬ್ ಸ್ಪ್ರಿಂಗ್‌ಎಂದು ಕರೆಯಲಾಗುವ, ಪ್ರಜಾತಾಂತ್ರಿಕ ಆಶೋತ್ತರಗಳಿದ್ದ, ಜನರ ದಂಗೆಯ ಪ್ರಭಾವ ಸಿರಿಯದ ಮೇಲೂ ಆಯಿತು. ಸಿರಿಯದಲ್ಲಿ ಸುನ್ನಿ ಮುಸ್ಲಿಮರ ಜನಸಂಖ್ಯೆಶೇ.74ರಷ್ಟು. ಹಾಗೇನೇ ಶಿಯಾ ಮುಸ್ಲಿಮರು 13 ರಷ್ಟಿದ್ದಾರೆ. ಶೇ.10 ರಷ್ಟು ಕ್ರಿಶ್ಚಿಯನ್ನರಿದ್ದಾರೆ. ತುಳಿತಕ್ಕೆ ಒಳಗಾಗಿರುವ ಅಲ್ಪಸಂಖ್ಯಾತ ಕುರ್ದಿಶ್ ಸಮುದಾಯ ಶೇ.9ರಷ್ಟಿದ್ದಾರೆ. ಉಳಿದವರು ಇತರ ಅಲ್ಪಸಂಖ್ಯಾತ ಸಮುದಾಯಗಳಾಗಿವೆ.

ಹಫೀಝ್ ಅಲ್ ಅಸ್ಸಾದ್ ಬದಲಾವಣೆಯ ಹೆಸರಿನಲ್ಲಿ ಮುಕ್ತ ಮಾರುಕಟ್ಟೆ ನೀತಿಗಳನ್ನು ಅಳವಡಿಸಲು ಆರಂಭಿಸಿದಾಗಿನಿಂದ ಮೊದಲೇ ಹಿಂದುಳಿದಿದ್ದ ಆರ್ಥಿಕ ಸಾಮಾಜಿಕ ವ್ಯವಸ್ಥೆ ಮತ್ತಷ್ಟು ಅಧೋಗತಿಯತ್ತ ಸರಿಯಲಾರಂಭಿಸಿತ್ತು. ನಿರುದ್ಯೋಗ, ನಗರ ವಲಸೆಗಳು ವಿಪರೀತವಾದವು. ಜೊತೆಗೆ ಬರಗಾಲ ಸೇರಿಕೊಂಡಿತು. 1963ರಿಂದ 2012ರವರೆಗೂ ತುರ್ತು ಪರಿಸ್ಥಿತಿಯನ್ನು ಜನರ ಮೇಲೆ ಹೇರಲಾಗಿತ್ತು. ಅಸ್ಸಾದ್ ಸರ್ವಾಧಿಕಾರಿ ಆಡಳಿತದ ವಿರುದ್ಧ ಜನರ ಆಕ್ರೋಶ ಭುಗಿಲೆದ್ದು ಅದು ಸಶಸ್ತ್ರ ದಂಗೆಯಾಗಿ ಮಾರ್ಪಟ್ಟಿತು. ಹಲವು ಗುಂಪುಗಳು ತಮ್ಮ ತಮ್ಮ ವಲಯಗಳನ್ನು ರಚಿಸಿ ಸಶಸ್ತ್ರ ಸಂಘರ್ಷಗಳಲ್ಲಿ ತೊಡಗಿದವು. 2013ರಲ್ಲಿ ಸೇನೆಯಿಂದ ಹೊರಬಂದ ಸೈನಿಕರು ರಚಿಸಿದ‘ಫ್ರೀ ಸಿರಿಯನ್ ಆರ್ಮಿ’ ಸಶಸ್ತ್ರ ಸೇನೆ ಸೇರಿದಂತೆ ಪ್ರಜಾತಾಂತ್ರಿಕ ಬದಲಾ ವಣೆಗಾಗಿನ ಗುಂಪುಗಳು, ‘ಮುಸ್ಲಿಂ ಬ್ರದರ್ ಹುಡ್’ ಸೇರಿದಂತೆ ಜಿಹಾದಿ ಗುಂಪುಗಳು ತಮ್ಮ ತಮ್ಮ ನಡೆಗಳನ್ನು ನಡೆಸತೊಡಗಿದವು. ಸಿರಿಯ ಸರಕಾರದೊಂದಿಗೆ ಇರಾನ್, ರಶ್ಯ ನಿಂತು ಜನರ ವಿರೋಧವನ್ನು ಹತ್ತಿಕ್ಕ ತೊಡಗಿದವು. ಅಮೆರಿಕ ನೇತೃತ್ವದ ಮೈತ್ರಿಕೂಟವು ಸರಕಾರಿ ವಿರೋಧಿ ಶಕ್ತಿಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲ ನೀಡಲಾರಂಭಿಸಿದವು. ಅವುಗಳಿಗೆ ಹಣಕಾಸು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಪೂರೈಸತೊಡಗಿದವು. ಸಿರಿಯದ ವಿರುದ್ಧ ನಿಲ್ಲಲು ಅಮೆರಿಕ ಕೊಡುತ್ತಿರುವ ಮುಖ್ಯ ಕಾರಣ ಸಿರಿಯದಲ್ಲಿ ಬೆಳೆಯುತ್ತಿದ್ದ ಜಿಹಾದಿ ಸಂಘಟನೆಯಾದ ಐಎಸ್‌ಐಎಲ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ದಿ ಲೆವೆಂಟ್, ಇದನ್ನು ಐಸಿಸ್ ಎಂದೇ ಕರೆಯಲಾಗುತ್ತಿದೆ) ಅನ್ನು ನಿರ್ನಾಮ ಮಾಡಬೇಕು ಎಂದು. ಸಿರಿಯ ಸರಕಾರ ಐಎಸ್‌ಐಎಲ್ ಸಂಘಟನೆಯ ವಿರುದ್ಧ ಕ್ರಮಕ್ಕೆ ಆರಂಭದಲ್ಲಿ ಮುಂದಾಗಿರಲಿಲ್ಲ ಎನ್ನುವುದು ನಿಜವಾದರೂ ಅಸಲಿ ವಿಷಯ ಬೇರೇನೇ ಇದೆ. ಬಶರ್ ಸರಕಾರ ಅಮೆರಿಕದ ಕಾರ್ಪೊರೇಟ್ ಕಂಪೆನಿಗಳ ಪರವಾಗಿಲ್ಲ, ರಶ್ಯ ಹಾಗೂ ಚೀನಾಗಳ ಕಾರ್ಪೊರೆೇಟ್‌ಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದೇ ಅಮೆರಿಕದ ಮುಖ್ಯ ತಕರಾರು. ಜೊತೆಗೆ ಸಿರಿಯ ಮೊದಲಿನಿಂದಲೂ ಇಸ್ರೇಲ್ ವಿರುದ್ಧವಾಗಿದ್ದು ಫೆಲೆಸ್ತೀನ್ ವಿಮೋಚನಾ ಹೋರಾಟವನ್ನು ತನ್ನದೇ ಲೆಕ್ಕಾಚಾರದಲ್ಲಿ ಬೆಂಬಲಿಸುತ್ತಾ ಬಂದ ರಾಷ್ಟ್ರ ಬೇರೆ.

ಈಗಾಗಲೇ ತೈಲಸಂಪತ್ತಿರುವ ಪೂರ್ವ ಸಿರಿಯದಲ್ಲಿ ಅಮೆರಿಕ ತನ್ನ ಸೇನೆಯನ್ನು ಸಕ್ರಿಯವಾಗಿಟ್ಟಿದೆ. ಸುದ್ದಿಯಾಗಿರುವುದಕ್ಕಿಂತಲೂ ಹತ್ತಾರು ಪಟ್ಟು ಅಧಿಕ ಸೈನಿಕ ದಾಳಿಗಳನ್ನು 2016ರಿಂದಲೂ ಅಮೆರಿಕ ನಡೆಸುತ್ತಾ ಬಂದಿದೆ. ಐಎಸ್‌ಐಎಲ್ ಅನ್ನು ಗುರಿಮಾಡಿಕೊಂಡೇ ಈ ದಾಳಿ ಗಳನ್ನು ನಡೆಸಲಾಗುತ್ತಿದೆ ಎಂದು ಅಮೆರಿಕ ಹೇಳಿಕೊಳ್ಳುತ್ತಾ ಬಂದಿದೆ. ಸಮಾಜವಾದಿ ಶಕ್ತಿಗಳ ಬೆಳವಣಿಗೆಯನ್ನು ತಡೆಗಟ್ಟಲೆಂದೇ ಐಎಸ್‌ಐಎಲ್‌ನಂತಹ ಮತೀಯವಾದಿ ಶಕ್ತಿಗಳಿಗೆ ಅಮೆರಿಕ ಬೆಂಬಲಿಸಿದ್ದು ಮಾತ್ರವಲ್ಲದೆ ನೇರ ಪ್ರಾಯೋಜನೆಯನ್ನು ಕೂಡ ಹಿಂದೆ ಮಾಡಿತ್ತು. ಆದರೆ ಆ ಭಾಗದಲ್ಲಿ ಇರಾನ್ ಪ್ರಭಾವವನ್ನು ತಡೆಗಟ್ಟಿ ಸಿರಿಯದ ಸರಕಾರವನ್ನು ಕಿತ್ತೊಗೆದು ತನ್ನ ಕೈಗೊಂಬೆ ಸರಕಾರವನ್ನು ಸ್ಥಾಪಿಸಬೇಕೆನ್ನುವುದೇ ಅದರ ಪ್ರಧಾನ ಗುರಿ. ಒಂದೆಡೆ ರಶ್ಯ ತನ್ನ ಹಿತಾಸಕ್ತಿಗಳ ರಕ್ಷಣೆಗಾಗಿ ಸಿರಿಯದ ಸರಕಾರ ಮತ್ತದರ ಮೈತ್ರಿ ಪಡೆಗಳಿಗೆ ಬೆಂಬಲವಾಗಿ ವೈಮಾನಿಕ ದಾಳಿಗಳ ಮೂಲಕ ನೇರ ಯುದ್ಧದಲ್ಲಿ ಭಾಗಿಯಾಗಿದ್ದರೆ, ಪಕ್ಕದ ಟರ್ಕಿ ರಾಷ್ಟ್ರ ಕೂಡ ಸರಕಾರಿ ವಿರೋಧಿ ಬಂಡುಕೋರರ ಜೊತೆ ನಿಂತು ಸಿರಿಯ ಯುದ್ಧದಲ್ಲಿ ನೇರವಾಗಿ ಭಾಗಿಯಾಗಿದೆ. ಅಷ್ಟೇ ಅಲ್ಲದೆ ಉತ್ತರ ಸಿರಿಯದ ಒಂದು ದೊಡ್ಡ ಭೂ ಪ್ರದೇಶವನ್ನು ಆಕ್ರಮಿಸಿ ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆ. ರಶ್ಯ ಇರಾನ್ ನೇರವಾಗಿ ಸಿರಿಯದ ಸರಕಾರದೊಂದಿಗೆ ಕೈಜೋಡಿಸಿ ದ್ದರೆ ಅಮೆರಿಕ, ಟರ್ಕಿ ನೇರವಾಗಿ ಸರಕಾರಿ ವಿರೋಧಿ ಬಂಡುಕೋರ ರೊಂದಿಗೆ ಕೈಜೋಡಿಸಿದೆ. ಹಿಂದೆ ವೈಮಾನಿಕ ದಾಳಿ ಗಳಲ್ಲಿ ಅಮೆರಿಕ ಮೈತ್ರಿ ಕೂಟವೆಂದು ಫ್ರಾನ್ಸ್, ಯುಕೆ, ಆಸ್ಟ್ರೇಲಿಯಾ, ಕೆನಡಾ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೆಟ್ಸ್, ನೆದರ್‌ಲ್ಯಾಂಡ್,ಜೋರ್ಡಾನ್ ನಂತಹ ರಾಷ್ಟ್ರಗಳು ಒಂದಲ್ಲಾ ಒಂದು ಕಾರಣ ಹೇಳುತ್ತಾ ಭಾಗಿಯಾಗಿದ್ದವು. ಈ ಎಲ್ಲಾ ರಾಷ್ಟ್ರಗಳಿಗೂ ತಮ್ಮದೇ ಆದ ಪ್ರಾದೇಶಿಕ ಹಾಗೂ ಅಂತರ್‌ರಾಷ್ಟ್ರೀಯ ಹಿತಾಸಕ್ತಿಗಳು ಈ ದಾಳಿಗಳ ಹಿಂದೆ ಇದ್ದವು. ಹಲವು ರಾಷ್ಟ್ರಗಳು ಐಎಸ್‌ಐಎಲ್ ವಿಸ್ತರಣೆಯನ್ನು ತಡೆಗಟ್ಟಲೆಂದು ವೈಮಾನಿಕ ದಾಳಿ ನಡೆಸುತ್ತಿದ್ದೇವೆಂದು ಹೇಳಿದರೆ, ಟರ್ಕಿ ಕುರ್ದಿಶ್ ಪ್ರಾಬಲ್ಯವನ್ನು ತಡೆಗಟ್ಟಲು ಸಿರಿಯದ ಕುರ್ದಿಶ್ ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸುತ್ತಿದೆ. ಇನ್ನು ಸಿರಿಯದ ಅಂತರಿಕ ಯುದ್ಧದಲ್ಲಿ ಪರೋಕ್ಷವಾಗಿ ಭಾಗವಹಿಸುತ್ತಿರುವ ರಾಷ್ಟ್ರಗಳು ಹಲವಿವೆ. ಇವೆಲ್ಲದರ ಹಿಂದೆಯೂ ಶಸ್ತ್ರಾಸ್ತ್ರ ಮಾರಾಟ, ತೈಲ ಇನ್ನಿತರ ಸಂಪನ್ಮೂಲಗಳ ಹಿಡಿತ ಸೇರಿದಂತೆ ಹಲವು ವ್ಯಾಪಾರಿ ಹಾಗೂ ಸೇನಾ ಹಿತಾಸಕ್ತಿಗಳು ಸ್ಪಷ್ಟವಾಗಿವೆ.

ಅಮೆರಿಕದಲ್ಲಿ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ನಂತರ ಅಮೆರಿಕ ಸೇನೆ ಅಂತರ್‌ರಾಷ್ಟ್ರೀಯವಾಗಿ ಯುದ್ಧಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಲಿದೆ ಎಂಬಂತೆ ಬಿಂಬಿಸಲಾಗಿತ್ತು.

ಇದಕ್ಕೆ ಇರಾಕ್, ಲಿಬಿಯಾ, ಅಫ್ಘಾನಿಸ್ತಾನ್‌ಗಳ ಯುದ್ಧ ಗಳಿಂದ ಅಮೆರಿಕಕ್ಕೆ ತೀವ್ರ ನಷ್ಟವಾಗಿದ್ದನ್ನು ಉದಾಹರಣೆ ಸಹಿತವಾದ ಕಾರಣಗಳನ್ನು ಸ್ವತಃ ಟ್ರಂಪ್ ನೀಡಿದ್ದರು. ಆದರೆ ಟ್ರಂಪ್‌ನ ನೀತಿಗಳ ವಿರುದ್ಧ ಅಮೆರಿಕದ ಜನರು ತಿರುಗಿ ಬಿದ್ದು ಪ್ರತಿಭಟನೆಗಳು ಹೆಚ್ಚಾಗತೊಡಗಿದಾಗ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನಗಳನ್ನು ಟ್ರಂಪ್ ಹೆಚ್ಚುಗೊಳಿಸಿದರು. ರಶ್ಯ ಪರವೆಂದು ಬಿಂಬಿತವಾಗಿದ್ದ ಟ್ರಂಪ್ ರಶ್ಯ ವಿರುದ್ಧ ತಾನು ಎಂದು ಬಿಂಬಿಸತೊಡಗಿದರು. ಅದೇ ರೀತಿ ಸಿರಿಯ ಸರಕಾರ ರಾಸಾಯನಿಕ ಅಸ್ತ್ರಗಳನ್ನು ಜನರ ಮೇಲೆ ಪ್ರಯೋಗಿಸುತ್ತಿದೆ ಎಂದು ಆಪಾದಿಸುತ್ತಾ ಸಿರಿಯದ ಸರಕಾರಿ ಪ್ರದೇಶಗಳ ಮೇಲೆ ಅಮೆರಿಕ ವೈಮಾನಿಕ ಬಾಂಬ್ ದಾಳಿಗಳನ್ನು ನಡೆಸಲು ಶುರುಮಾಡಿತು.

ಇಂದು ಸಿರಿಯ ಅನ್ನುವ ರಾಷ್ಟ್ರ ಆಡಳಿತಾತ್ಮಕವಾಗಿ ಹಲವು ತುಂಡುಗಳಾಗಿ ಬಿಟ್ಟಿದೆ. ಸರಕಾರದ ಆಡಳಿತದಡಿಯಲ್ಲಿ ಶೇ. 34ರಷ್ಟು ಭೂಪ್ರದೇಶ ಮಾತ್ರವಿದೆ. ಉಳಿದ ಪ್ರದೇಶಗಳು ಹಲವು ಬಂಡುಕೋರ ಗುಂಪುಗಳ ಹಿಡಿತದಲ್ಲಿವೆೆ. ಅವುಗಳಲ್ಲಿ ಐಎಸ್‌ಐಎಲ್ ಶೇ.33 ರಷ್ಟು ಹೊಂದಿದ್ದರೆ, ಡೆಮೋಕ್ರಟಿಕ್ ಫೆಡರೇಶನ್ ಆಫ್ ನಾರ್ಥರ್ನ್ ಸಿರಿಯ ಎಂಬ ಹಲವು ಪಕ್ಷಗಳ ಸಂಘಟನೆ ಸುಮಾರು ಶೇ.20ರಷ್ಟು ಭಾಗವನ್ನು ಹೊಂದಿದೆ. ಇನ್ನು ಕುರ್ದಿಶ್ ಸಿರಿಯನ್ ಡೆಮೋಕ್ರಟಿಕ್ ಫೋರ್ಸಸ್ (ಎಸ್.ಡಿ.ಎಫ್) ಸೇರಿದಂತೆ ಹಲವು ಗುಂಪುಗಳು ಈ ಹಿಂದಿನ ಸಿರಿಯದ ಭೂ ಭಾಗವನ್ನು ಹಲವು ತುಂಡುಗಳನ್ನಾಗಿ ಮಾಡಿ ಹಿಡಿತ ಸಾಧಿಸಿವೆ. ಹೀಗೆ ಹತ್ತು ಹಲವು ಹಿತಾಸಕ್ತಿಗಳ ತಾಕಲಾಟಗಳಲ್ಲಿ ಸಿರಿಯದ ಸಮಸ್ಯೆ ಬಹಳ ಸಂಕೀರ್ಣಗೊಳ್ಳುತ್ತಾ ಹೋಗುತ್ತಿದೆ.

ಒಟ್ಟಿನಲ್ಲಿ ಸಿರಿಯ ಎಂಬ ರಾಷ್ಟ್ರ ಇಂದು ಅರಾಜಕತೆಯ ಬೀಡಾಗಿ ಜನಸಾಮಾನ್ಯರ ಕಗ್ಗೊಲೆಗಳ ನಾಡಾಗಿ ಮಾರ್ಪಟ್ಟಿದೆ. ಈಗಾಗಲೇ 2018 ಮಾರ್ಚ್ ವೇಳೆಗೆ ಸುಮಾರು ಐದು ಲಕ್ಷ ಜನರ ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಅಂಗಹೀನತೆಗೊಳಗಾದವರ, ಗಾಯಗೊಂಡವರ ಲೆಕ್ಕ ಹೇಳಲು ಸಾಧ್ಯವಿಲ್ಲ. ಲಕ್ಷಾಂತರ ಜನರು ಮನೆ, ಆಸ್ತಿಗಳನ್ನು ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ವಲಸೆಗಳು ಹೆಚ್ಚಾಗಿವೆ. ಅಮೆರಿಕ, ರಶ್ಯ, ಸಿರಿಯಗಳ ಸೇನೆ ಜನಸಾಮಾನ್ಯರ ಮೇಲೆ ಹತ್ತುಹಲವು ಕಾರಣ ಹೇಳುತ್ತಾ ಗುಂಡು ಬಾಂಬ್‌ನ ದಾಳಿಗಳನ್ನು ನಡೆಸುತ್ತಿದೆ. ವಿಶ್ವಸಂಸ್ಥೆಯನ್ನು ಈಗ ಅಮೆರಿಕವೇ ಮಾನ್ಯ ಮಾಡುತ್ತಿಲ್ಲ. ವಿಶ್ವಸಂಸ್ಥೆಯ ನಿರ್ಣಯಗಳಿಗೆ ಯಾವ ಬೆಲೆಯೂ ಇಲ್ಲದಂತಾಗಿದೆ. ಮೊದಲು ಇದೇ ವಿಶ್ವ ಸಂಸ್ಥೆಯನ್ನು ಬಳಸಿಕೊಂಡೇ ಇರಾಕ್, ಲಿಬಿಯಾಗಳಂತಹ ದೇಶಗಳ ಮೇಲೆ ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳು ಯುದ್ಧ ಮಾಡಿದ್ದರೆ ಈಗ ವಿಶ್ವಸಂಸ್ಥೆಯನ್ನು ಉಲ್ಲಂಘಿಸಿ ಯುದ್ಧ ನಡೆಸುತ್ತಿವೆ.

ಸಿರಿಯದ ಮೇಲೆ ಈಗ ನಡೆಯುತ್ತಿರುವ ದಾಳಿಗಳಿಗೆ ವಿಶ್ವಸಂಸ್ಥೆಯ ಅನುಮೋದನೆಯಿಲ್ಲ. ಸಿರಿಯದಂತಹ ರಾಷ್ಟ್ರಗಳ ಇಂತಹ ಸ್ಥಿತಿಗೆ ಅಮೆರಿಕ, ರಶ್ಯ, ಚೀನ, ಫ್ರಾನ್ಸ್ ಸೇರಿದಂತೆ ಜಾಗತಿಕ ವ್ಯಾಪಾರಿ ಹಿಡಿತಕ್ಕಾಗಿ ಏನನ್ನು ಬೇಕಾದರೂ ಮಾಡುವ ಜಾಗತಿಕ ಬಂಡವಾಳಶಾಹಿ ರಾಷ್ಟ್ರಗಳೇ ಪ್ರಧಾನ ಕಾರಣವಾಗಿವೆ. ಜೊತೆಗೆ ಸಿರಿಯ ಸೇರಿದಂತೆ ಹಲವು ರಾಷ್ಟ್ರಗಳ ಬಾಲಂಗೋಚಿ ರಾಷ್ಟ್ರಗಳನ್ನು ಆಳುವ ಶಕ್ತಿಗಳು ನಿಂತಿವೆ.

ಲೂಟಿ, ಅಸಮಾನತೆ, ಅನ್ಯಾಯ, ದೌರ್ಜನ್ಯ, ಶೋಷಣೆ ಏರುತ್ತಾ ಕುದಿಯುವ ಬಿಂದು ತಲುಪಿದಾಗ ಯಾವುದೇ ರಾಷ್ಟ್ರವಾದರೂ ಇಂತಹ ಬಿಕ್ಕಟ್ಟುಗಳಿಗೆ ಒಳಗಾಗಲೇಬೇಕಾಗುತ್ತದೆ ಅದನ್ನು ಗ್ರಹಿಸಿ ತಪ್ಪಿಸಲು ಜನಸಾಮಾನ್ಯರ ಐಕ್ಯ ಸಂಘಟನೆ ಇಲ್ಲದಿದ್ದಾಗ ರಾಷ್ಟ್ರದ ಪರಿಸ್ಥಿತಿ ಇಂತಹ ಸಂಕೀರ್ಣವಾದ ಅರಾಜಕತೆಯತ್ತ ಸಾಗುತ್ತದೆ.

Writer - ನಂದಕುಮಾರ್. ಕೆ. ಎನ್.

contributor

Editor - ನಂದಕುಮಾರ್. ಕೆ. ಎನ್.

contributor

Similar News